ದಾವಣಗೆರೆ:
ಮನುಷ್ಯನ ಅಂತರಂಗದ ಶಕ್ತಿಯನ್ನು ಉದ್ದೀಪಿಸಲು ಜಾನಪದ ಸಾಹಿತ್ಯ ಸಹಕಾರಿಯಾಗಿದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಸಿರಿನಾಡು ರೂರಲ್ ಅಂಡ್ ಅರ್ಬನ್ ಡೆವಲಪ್‍ಮೆಂಟ್ ಸೊಸೈಟಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜಾನಪದ ನೃತ್ಯ ಮತ್ತು ಜಾನಪದ ಸಂಗೀತ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮಾನವನ ದೈನಂದಿನ ಬದುಕಿನ ಜೊತೆಗೆ ಬೆರೆತು ಹೋಗಿರುವ ಜಾನಪದ ಸಾಹಿತ್ಯವು ಅಂತರಂಗದ ಶಕ್ತಿಯನ್ನು ಉದ್ದೀಪಿಸಲು ಸಹಕಾರಿಯಾಗಿದೆ. ಜನಪದ ಸಾಹಿತ್ಯ ಮತ್ತು ಸಂಸ್ಕತಿಯು ಹುಟ್ಟಿಕೊಂಡಿದ್ದೇ ಜನರ ಬಾಯಿಂದ, ಬಾಯಿಯ ಮೂಲಕ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತಕ್ಕೆ ಇತಿಹಾಸವಿದೆ. ಇತಿಹಾಸಕಾರರು ಯಾರು ಎಂಬುದೂ ಗೊತ್ತಿದೆ. ಆದರೆ, ಜಾನಪದದ ಮೂಲ ಯಾವುದು ಎನ್ನುವುದು ಇಂದಿಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದರು.
ಪ್ರಸ್ತುತ ಮೊಬೈಲ್, ಟಿವಿ, ವೀಡಿಯೋಗೇಮ್‍ಗಳಿಗಷ್ಟೇ ಮಕ್ಕಳನ್ನು ಸೀಮಿತಗೊಳಿಸುವ ಮೂಲಕ ಮಕ್ಕಳನ್ನು ಮನೆಯ ಅಂಗಳಕ್ಕೂ ಬಿಡದೇ, ಆ ಮಕ್ಕಳ ಬಾಲ್ಯವನ್ನೇ ಕಸಿಯುವ ಕೆಲಸವನ್ನು ಪೋಷಕರು ಮಾಡುತ್ತಿದ್ದಾರೆ. ಮಕ್ಕಳನ್ನು ಟಿವಿ, ಮೊಬೈಲ್‍ಗೆ ಮುಂದೆ ಕೂರಿಸಿ, ಆ ಮಕ್ಕಳ ಬಾಲ್ಯವನ್ನೇ ಕಟ್ಟಿ ಹಾಕುತ್ತಿರುವುದು ಸರಿಯಲ್ಲ ಎಂದರು.
ಮಕ್ಕಳಿಗೆ ಜಾನಪದ ಸಾಹಿತ್ಯ, ಸಂಸ್ಕತಿ, ಜಾನಪದ ಆಟೋಟಗಳನ್ನು ಹೇಳಿಕೊಡುವ ಪಾಲಕರೇ ಇಲ್ಲವಾಗಿದ್ದಾರೆ. ನಮ್ಮ ಅಜ್ಜಿಯಂದಿರು, ತಾಯಂದಿರು ‘ಆಡಿ ಬಾ ನನ ಕಂದ ಅಂಗಾಲ ತೊಳದೇನು’ ಎಂಬ ಜಾನಪದ ಹಾಡು ಹಾಡಿ, ಆಡಲು ಕಳಿಸುತ್ತಿದ್ದರು. ಆದರೆ, ಇಂದು ತಾಯಂದಿರು ಮಕ್ಕಳಿಗೆ ಮಣ್ಣಲ್ಲಿ ಆಟವಾಡುವುದಕ್ಕೂ ಬಿಡದಿರುವುದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ ಎಂದು ವಿಷಾಧಿಸಿದರು.
ಜನಪದವು ವ್ಯಕ್ತಿ ಅಥವಾ ಜಾತಿಯ ಸೂಚಕವಲ್ಲ. ಅದು ಸಾಹಿತ್ಯ ಸೂಚಕ. ನಮ್ಮ ಪೂರ್ವಿಕರ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಜಾನಪದವು ಇಂದು ನಶಿಸುತ್ತಿದೆ. ಪಾಶ್ಚಿಮಾತ್ಯ ಸಂಸ್ಕøತಿಯ ಅಂಧಾನುಕರಣೆಯಲ್ಲಿ ತೊಡಗಿರುವ ನಮ್ಮ ಯುವ ಜನಾಂಗವು ತಮ್ಮ ಸಂಸ್ಕತಿ, ಸಂಸ್ಕಾರ, ಸದ್ಗುಣಗಳಿಂದಲೇ ವಿಮುಖವಾಗುತ್ತಿರುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೋಟೆಲ್ ಉದ್ಯಮಿ ಬಿ.ಜಿ.ಅಜಯಕುಮಾರ ಮಾತನಾಡಿ, ಜಾನಪದ ಸಾಹಿತ್ಯದಲ್ಲಿ ವಿಶೇಷ ಸಾಧನೆ ಮಾಡಿರುವ ಕಾರಣಕ್ಕೆ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರಿಗೆ ಪ್ರಶಸ್ತಿ ಬಂದಿರುವುದು ಗಮನಾರ್ಹವಾಗಿದೆ. ಪ್ರತಿಯೊಬ್ಬರೂ ನಮ್ಮ ಜನಪದ ಕಲೆ, ಸಾಹಿತ್ಯ, ಸಂಸ್ಕತಿ, ಜೀವನ ಶೈಲಿಯನ್ನು ಉಳಿಸಿ, ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ವಕೀಲ, ಸಾಹಿತಿ ವಿನಯಕುಮಾರ ಸಾಹುಕಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರಾದ ಮಂಜಪ್ಪ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.