ಚಿತ್ರದುರ್ಗ
ಏಡ್ಸ್ ರೋಗದ ಬಗ್ಗೆ ಜನರಲ್ಲಿ ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವಂತೆ ಸಲಹೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ನೀಡಿದರು.
ಜಿಲ್ಲಾಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘ, ಕಾನೂನು ಸೇವೆಗಳ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕ್ಷಣಿಕ ಸುಖಕ್ಕಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಲಕ್ಷ್ಮಣರೇಖೆ ದಾಟಬೇಡಿ . ಏಡ್ಸ್ ರೋಗಿಗಳಿಗೆ ಪೌಷ್ಠಿಕ ಆಹಾರ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಮುಖ್ಯವಾಗಿ ಅವರನ್ನು ಹೀಯಾಳಿಸಬೇಡಿ ಎಂದರು.
ಏಡ್ಸ್ ರೋಗ ಪ್ರಾಥಮಿಕ ಹಂತದಲ್ಲಿಯೇ ಪತ್ತೆಯಾದರೆ ಯೋಗಾಭ್ಯಾಸ, ಮಿತವಾದ ಆಹಾರ, ಔಷಧಿ ಪಡೆದರೆ ಜೀವಿತಾವಧಿ ಹೆಚ್ಚಾಗಲಿದೆ ಎಂದ ನ್ಯಾಯಾಧೀಶರು. ಜಿಲ್ಲೆಯಲ್ಲಿ ಏಡ್ಸ್ ಸಂಖ್ಯೆ ಮೊಳಕಾಲ್ಮೂರಿನಲ್ಲಿ ಕಡಿಮೆ ಇದ್ದರೆ ಚಿತ್ರದುರ್ಗ ನಂ. 1 ಸ್ಥಾನದಲ್ಲಿದೆ ಎಂದು ವಿಷಾಧಿಸಿದರು.
ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಹದಿಹರೆಯದವರು ವಯಸ್ಸಿನ ಹಂಗಿನಿಂದ ಕೆಲವೊಮ್ಮೆ ತಪ್ಪುಗಳನ್ನು ಮಾಡುವುದರಿಂದ ಈ ರೋಗಗಕ್ಕೆ ಬಲಿಯಾಗುತ್ತಾರೆ ಇದರ ಬಗ್ಗೆ ಇವರಿಗೆ ಜಾಗೃತಿಯನ್ನು ಮೂಡಿಸಬೇಕಿದೆ ಎಂದ ಅವರು, ಮನೆ ಅಥವಾ ಬೇರೆ ಕಡೆಯಲ್ಲಿ ಏಡ್ಸ್ ರೋಗಿಗಳಿದ್ದರೆ ಅವರನ್ನು ಸರಿಯಾಗಿ ಸಾಮಾನ್ಯರಂತೆ ನಡೆಸುವುದರ ಮೂಲಕ ಅವರಿಗೆ ಆತ್ಮಸ್ಥರ್ಯವನ್ನು ತುಂಬುವ ಕೆಲಸ ಮಾಡಬೇಕಿದೆ ಎಂದ ಕರೆ ನೀಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಎಲ್ಲೆಲ್ಲಿ ಹೆಚ್ಚಿನ ಏಡ್ಸ್ ರೋಗಿಗಳು ಕಂಡುಬರುತ್ತಾರೋ ಅಲ್ಲಿ ಶಿಬಿರ ನಡೆಸಿ ಜಾಗೃತಿ ಮೂಡಿಸಬೇಕಾಗಿದೆ ಜಿಲ್ಲೆ ಏಡ್ಸ್ ರೋಗದಲ್ಲಿ ಕಡಿಮೆ ಸ್ಥಾನಕ್ಕೆ ಬರುವಂತೆ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರಂಗನಾಥ್ ಮಾತನಾಡಿ, ಜಿಲ್ಲೆಯಲ್ಲಿ 7 ಲಕ್ಷ ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಆರು ಸಾವಿರ ಜನರಿಗೆ ಏಡ್ಸ್ ಇರುವುದು ದೃಢಪಟ್ಟಿದೆ. ಕಳೆದ ಹಲವಾರು ವರ್ಷಗಳಿಂದ ಒಂದು ಮಗು ಮರಣ ಹೊಂದಿಲ್ಲ. ಏಡ್ಸ್ ರೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ಇದೆ. ಆದರೆ ಇವರಿಗೆ ಮನೆ ನೀಡಲು ಆಗುತ್ತಿಲ್ಲ. 167 ಜನರಿಗೆ ಮನೆ ಮಂಜೂರಾತಿ ನೆನೆಗುದಿಗೆ ಬಿದ್ದಿದೆ. ಮನೆ ಮಂಜೂರು ಮಾಡುವಂತೆ ಮನವಿ ಮಾಡಿದರು.
ನ್ಯಾಯಾಧೀಶರಾದ ಡಿ.ವೀರಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್,ಡಾ.ಪಾಲಾಕ್ಷ, ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಶಿವುಯಾದವ್, ಡಾ.ಸುಧಾ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ