ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ

ಚಿತ್ರದುರ್ಗ:

      ಕಾರ್ಯಕರ್ತರು ರಾಜಕಾರಣಿಗಳ ನರನಾಡಿಯಿದ್ದಂತೆ. ಅವರುಗಳಿಲ್ಲದಿದ್ದರೆ ರಾಜಕಾರಣಿಗಳ ಪುಂಗಿ ಬಂದ್ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳಿದರು.

        ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿತ್ರದುರ್ಗ ತಾಲೂಕಿನಲ್ಲಿ ಬರಪರಿಸ್ಥಿತಿ ವೀಕ್ಷಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಪತ್ರಕರ್ತರ ಭವನದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

        ನಲವತ್ತು ವರ್ಷಗಳ ರಾಜಕಾರಣದಲ್ಲಿ ನಾನು ಇನ್ನು ಬದುಕಿದ್ದೇನೆಂದರೆ ಅದಕ್ಕೆ ಬಿಜೆಪಿ.ಕಾರ್ಯಕರ್ತರುಗಳೆ ಕಾರಣ. ಪಕ್ಷ ಸುಧಾರಣೆಗೆ ಕಾರ್ಯಕರ್ತರು ಇರಬೇಕು. 2019 ರಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಾರ್ಯಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ದೇಶದ ಪ್ರಧಾನಿ ನರೇಂದ್ರಮೋದಿರವರ ಕೈಬಲಪಡಿಸಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

       ನಾಯಕರುಗಳೆಲ್ಲಾ ನಿಮ್ಮ ಜೊತೆ ಇರುತ್ತೇವೆ. ಯಾವುದಕ್ಕೂ ಹೆದರಬೇಡಿ. ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ.ಯನ್ನು ಗೆಲ್ಲಿಸಿ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕಿನಲ್ಲಿ ಬರಪರಿಸ್ಥಿತಿಯನ್ನು ವೀಕ್ಷಿಸಿದ್ದೇನೆ. ರೈತರ ಬದುಕು ದುಸ್ಥರವಾಗಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದೇವಸ್ಥಾನ ಸುತ್ತುವುದರಲ್ಲಿಯೇ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್.ರಾಜಿ ಪಂಚಾಯಿತಿ ಮಾಡುವುದೇ ಸರ್ಕಾರದ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

       ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತ ಚಿತ್ರದುರ್ಗ ಜಿಲ್ಲೆಯಲ್ಲಿ ಬರವೀಕ್ಷಣೆ ಆಗಮಿಸಿದ ಕೇಂದ್ರ ಮಂತ್ರಿ ರಮೇಶ್ ಜಿಗಜಿಣಗಿರವರು ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕಿನಲ್ಲಿ ಬೆಳೆ ನಷ್ಟವಾಗಿರುವುದನ್ನು ವೀಕ್ಷಿಸಿ ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿರುವ ಸಚಿವರು ಅನುದಾನ ಬಿಡುಗಡೆಗೊಳಿಸುವರು. ಕಾರ್ಯಕರ್ತರು ಹಾಗೂ ಅಧಿಕಾರಿಗಳು ಸಮರೋಪಾದಿಯಲ್ಲಿ ಬರಪರಿಹಾರ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

          ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮ ಶ್ರೀನಿವಾಸ್, ತುಮಕೂರು ಗ್ರಾಮಾಂತರ ಮಾಜಿ ಶಾಸಕ ಸುರೇಶ್‍ಗೌಡ, ಮಾಜಿ ಸಂಸದೆ ತೇಜಸ್ವಿನಿಗೌಡ, ರೈತ ಮೋರ್ಚ ರಾಜ್ಯ ಉಪಾಧ್ಯಕ್ಷ ಲಿಂಗಮೂರ್ತಿ ಬಿಜೆಪಿ.ಜಿಲ್ಲಾ ಮಾಜಿ ಅಧ್ಯಕ್ಷರುಗಳಾದ ಟಿ.ಜಿ.ನರೇಂದ್ರನಾಥ್, ಸಿದ್ದೇಶ್‍ಯಾದವ್ ವೇದಿಕೆಯಲ್ಲಿದ್ದರು.

          ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ರೈತ ಮೋರ್ಚ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಸದಸ್ಯ ಜಿ.ಹರೀಶ್, ಓ.ಬಿ.ಸಿ.ಮೋರ್ಚ ಜಿಲ್ಲಾಧ್ಯಕ್ಷ ಸಂಪತ್, ರೇಖ, ಬಸಮ್ಮ, ನೆಲ್ಲಿಕಟ್ಟೆ ಜಗದೀಶ್, ಜಿ.ಪಂ.ಸದಸ್ಯ ಗುರುಮೂರ್ತಿ ಸೇರಿದಂತೆ ಅಪಾರ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap