ಚಳ್ಳಕೆರೆ
ಕಳೆದ ಹಲವಾರು ವರ್ಷಗಳ ನಿರಂತರ ಜಾಗೃತಿ ಸಭೆಗಳ ಫಲವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ಸಿಯಾಗಿದ್ದು, ಎಲ್ಲಿಯೇಯಾಗಲಿ ದಲಿತ ಸಮೂಹದ ಮೇಲೆ ದೌರ್ಜನ್ಯ ನಡೆಸುವ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್ ಗಮನಕ್ಕೆ ತರುವಂತೆ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ತಿಳಿಸಿದರು.
ಅವರು, ಸೋಮವಾರ ಸಂಜೆ ತಾಲ್ಲೂಕಿನ ನಗರಂಗೆರೆ ಗ್ರಾಮದ ಸಮುದಾಯ ಭವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ದಲಿತ ದೌರ್ಜನ್ಯ ನಿಯಂತ್ರಣ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆ ತನ್ನ ಹೆಚ್ಚಿನ ಸಮಯವನ್ನು ಇಂತಹ ದೌರ್ಜನ್ಯ ಪ್ರಕರಣ ನಡೆಯದಂತೆ ಜಾಗೃತೆ ವಹಿಸಲು ಕಾರ್ಯನಿರ್ವಹಿಸುತ್ತಿವೆ. ಸಣ್ಣ ಪುಟ್ಟ ಘಟನೆಗಳನ್ನು ಬಿಟ್ಟರೆ ಯಾವುದೇ ರೀತಿಯ ದೌರ್ಜನ್ಯ ಪ್ರಕರಣಗಳು ಉಪವಿಭಾಗದ ವ್ಯಾಪ್ತಿಯಲ್ಲಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡುತ್ತಿರುವ ಎಲ್ಲಾ ಸಮುದಾಯವನ್ನು ಅಭಿನಂದಿಸುವುದಾಗಿ ತಿಳಿಸಿದರು.
ಪ್ರೊಬೆಷನರಿ ಡಿವೈಎಸ್ಪಿ ಸಂತೋಷ್ ಮಾತನಾಡಿ, ದಲಿತ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಯಾವುದೇ ಸಂದರ್ಭದಲ್ಲಾದರೂ ದಲಿತರು ತಮ್ಮ ಮೇಲೆ ಯಾರಾದರೂ, ಯಾವುದೇ ರೀತಿಯಾದರೂ ತೊಂದರೆಕೊಡಲು ಮುಂದಾದಲ್ಲಿ ತಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.
ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ಮಾತನಾಡಿ, ಸಮಾಜದಲ್ಲಿ ಎಲ್ಲರಲ್ಲಿಯೂ ಸಮಾನತೆ ಮೂಡಿದಾಗ ಇಂತಹ ದೌರ್ಜನ್ಯಗಳು ತಾವಾಗಿಯೇ ನಿಯಂತ್ರಣವಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ನಡೆದ ಪ್ರಕರಣಗಳ ಸಂಬಂಧಪಟ್ಟಂತೆ ಇಲಾಖೆ ಹಲವಾರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯ ನಿಯಂತ್ರಣಕ್ಕೆ ಕಾನೂನು ತನ್ನದೇಯಾದ ವಿಶೇಷ ಶಕ್ತಿ ಮತ್ತು ಸಾಮಥ್ರ್ಯ ಹೊಂದಿದೆ. ಈ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ವರ್ಗವೂ ಸಹಮತದಿಂದ ಸಹಭಾಳ್ವೆ ನಡೆಸಿದಲ್ಲಿ ಇಂತಹ ಪ್ರಕರಣಗಳು ನಡೆಯಲು ಸಾಧ್ಯವಿಲ್ಲವೆಂದರು.
ಸಭೆಯಲ್ಲಿ ಪಿಎಸ್‍ಐ ಕೆ.ಸತೀಶ್‍ನಾಯ್ಕ, ಗ್ರಾಮದ ಮುಖಂಡರಾದ ಓಬಣ್ಣ, ಎನ್.ಟಿ.ಸಣ್ಣಬೋರಣ್ಣ, ರಾಜಣ್ಣ, ಕುಮಾರ, ಬಾಬು ಮುಂತಾದವರು ಭಾಗವಹಿಸಿದ್ದರು.