ಬೆಂಗಳೂರು
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟದಲ್ಲಿ ಸೇರ್ಪಡೆಯಾಗುವುದರ ಜತೆಗೆ ಡಿಸಿಎಂ ಪರಮೇಶ್ವರ್ ಕೈಲಿದ್ದ ಗೃಹ ಖಾತೆಯನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದ ಹಿರಿಯ ನಾಯಕ ಎಂ.ಬಿ.ಪಾಟೀಲರಿಗೆ ಇದೀಗ ಹೊಸ ತಲೆನೋವು ಶುರುವಾಗಿದ್ದು ತಾವೇ ಮುನ್ನಡೆಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯನ್ನು ಮುಂದುವರಿಸದಂತೆ ಕೈ ಪಾಳೆಯದ ವರಿಷ್ಟರು ಕಟ್ಟೆಚ್ಚರ ನೀಡಿದ್ದಾರೆ.
ವೀರಶೈವ-ಲಿಂಗಾಯತ ಧರ್ಮದ ವಿವಾದವನ್ನು ಮತ್ತೇನಾದರೂ ಕೈಗೆತ್ತಿಕೊಂಡು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಚಳವಳಿ ರೂಪಿಸಿದರೆ ಸಮಾಜ ಘಾತಕ ಶಕ್ತಿಗಳು ಇದನ್ನು ದುರ್ಬಳಕೆ ಮಾಡಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯತ್ನ ಮಾಡಬಹುದು.
ಹಾಗೇನಾದರೂ ಆದರೆ ಸರ್ಕಾರಕ್ಕೆ ತಕ್ಷಣ ತೊಂದರೆಯಾಗದಿದ್ದರೂ ಗೃಹ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂಕಟಕ್ಕೆ ನೀವು ಗುರಿಯಾಗಬಹುದು ಎಂಬುದು ವರಿಷ್ಟರ ಕಟ್ಟೆಚ್ಚರ.
ಸಾಮಾನ್ಯವಾಗಿ ಗೃಹ ಖಾತೆಯನ್ನು ಶೋಷಿತ ಸಮುದಾಯಗಳಿಗೆ ಹೆಚ್ಚಾಗಿ ನೀಡಲಾಗುತ್ತದೆ.ಕೆಲವೊಂದು ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿದರೆ ಈ ಖಾತೆಯನ್ನು ಶೋಷಿತ ಸಮುದಾಯದ ನಾಯಕರೇ ಹೆಚ್ಚಾಗಿ ವಹಿಸಿಕೊಂಡಿದ್ದಾರೆ.
ಆದರೆ ಈ ಬಾರಿ ಶೋಷಿತ ಸಮುದಾಯಗಳ ನಾಯಕ,ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಕೈಯ್ಯಿಂದ ಈ ಖಾತೆಯನ್ನು ಕಿತ್ತುಕೊಂಡು ಬಲಿಷ್ಟ ಸಮುದಾಯಕ್ಕೆ ನೀಡಿದ ನಿಮಗೆ ವಹಿಸಲಾಗಿದೆ.
ಈ ಸಂದರ್ಭದಲ್ಲಿ ನೀವು ಗೃಹ ಖಾತೆಯನ್ನು ಕಟ್ಟೆಚ್ಚರದಿಂದ ನಿರ್ವಹಿಸಬೇಕು. ಅದರಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ವಿಷಯದಲ್ಲಿ ಯಾವುದೇ ಚಳವಳಿಗೆ ಮುಂದಾಗಬೇಡಿ. ಹಾಗೇನಾದರೂ ನೀವು ಮುಂದಾದರೆ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಸಮಾಜ ಘಾತಕ ಶಕ್ತಿಗಳು ಮುಂದಾಗಬಹುದು.
ಅಂತಹ ಪರಿಸ್ಥಿತಿಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಮಂತ್ರಿಗಿರಿಗೆ ತಲೆದಂಡ ಒಪ್ಪಿಸಲು ನೀವು ಸಜ್ಜಾಗಬೇಕಾಗುತ್ತದೆ ಎಂದು ಕೈ ಪಾಳೆಯದ ವರಿಷ್ಟರು ಗೃಹ ಸಚಿವರಿಗೆ ಕಟ್ಟೆಚ್ಚರ ನೀಡಿದ್ದು ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಅಂದ ಹಾಗೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಬೇಕು ಎಂಬ ಮಹತ್ವಾಕಾಂಕ್ಷೆ ಇರಿಸಿಕೊಂಡಿರುವ ಎಂ.ಬಿ.ಪಾಟೀಲ್, ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ನಂತರ ಸಮುದಾಯದ ನಾಯಕರಾಗಲು ಸಜ್ಜಾಗಿದ್ದಾರೆ.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಚಳವಳಿಯ ರೂಪದಲ್ಲಿ ಮುನ್ನಡೆಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಈ ಚಳವಳಿಯ ಫಲವಾಗಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು. ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂದು ಹಿಂದಿನ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತಾದರೂ,ಇತ್ತೀಚೆಗೆ ಕೇಂದ್ರ ಸರ್ಕಾರ ಅದನ್ನು ತಿರಸ್ಕರಿಸಿದೆ.
ಇದನ್ನೇ ಮುಖ್ಯವಾಗಿಟ್ಟುಕೊಂಡ ಎಂ.ಬಿ.ಪಾಟೀಲ್ ಮರಳಿ, ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಚಳವಳಿಯನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಲು ಸ್ಕೆಚ್ ಹಾಕಿದ್ದರು.ಆದರೆ ಇದೀಗ ಗೃಹ ಖಾತೆ ಸಚಿವರಾದ ನಂತರ ಕೈ ಪಾಳೆಯದ ವರಿಷ್ಟರೇ ಈ ಕುರಿತು ಎಂ.ಬಿ.ಪಾಟೀಲರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಈ ಚಳವಳಿಯನ್ನು ಪ್ರಾರಂಭಿಸುವ ಮೂಲಕ ನೀವು ಲಿಂಗಾಯತ ನಾಯಕತ್ವಕ್ಕಾಗಿ ನಡೆಸುವ ಪ್ರಯತ್ನ ತಪ್ಪೇನಲ್ಲ. ಆದರೆ ಈ ಚಳವಳಿಯನ್ನು ಸಮಾಜ ಘಾತಕ ಶಕ್ತಿಗಳು ದುರ್ಬಳಕೆ ಮಾಡಿಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದರೆ ಅದರಿಂದ ನಿಮ್ಮ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳಿವೆ.
ಹಾಗೆಯೇ ಇದರಿಂದಾಗುವ ಅನಾಹುತ ಮಿತಿ ಮೀರಿದರೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೂ ಅದರ ಶಾಕ್ ತಗಲಬಹುದು.ಹೀಗಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿಯನ್ನು ಮರಳಿ ಆರಂಭಿಸುವ ಬಗ್ಗೆ ಸಧ್ಯಕ್ಕೆ ಯೋಚಿಸಬೇಡಿ ಎಂದು ಹೈಕಮಾಂಡ್ ವರಿಷ್ಟರು ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ