ಹಂಪಿ ಉತ್ಸವ ನಡೆಸಲು ಸರಕಾರ ಬದ್ಧ: ಉಗ್ರಪ್ಪ

ಬಳ್ಳಾರಿ

        ಜಿಲ್ಲೆಯ ಜನರ ನಾಡಹಬ್ಬದಂತಿರುವ ಹಂಪಿ ಉತ್ಸವ ನಡೆಸಲು ಸರಕಾರ ಬದ್ಧವಾಗಿದ್ದು, ಈ ಕುರಿತು ಇಂದು ಜಿಲ್ಲಾ ಉಸ್ತುವಾರಿ ಸಚಿವರ ಸಚಿವ ಡಿ.ಕೆ.ಶಿವಕುಮಾರ ಅವರ ಜೊತೆ ದೂರವಾಣಿ ಮೂಲಕ ತಾವು ಮಾತನಾಡಿದ್ದು, ಉತ್ಸವ ನಡೆಸಲು ಅವರು ಸಮ್ಮತಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆಯೂ ಸಮಾಲೋಚನೆ ನಡೆಸಿರುವುದಾಗಿ ನೂತನ ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

        ನಗರದಲ್ಲಿಂದು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜಿಲ್ಲೆಯ ಸಾಹಿತಿಗಳು, ಕಲಾವಿದರು, ಸಾರ್ವಜನಿಕರು ಹಂಪಿ ಉತ್ಸವ ನಡೆಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ತಾವು ಸಚಿವ ಶಿವಕುಮಾರ ಅವರ ಜೊತೆ ಮಾತನಾಡಿದಾಗ, ಉತ್ಸವವನ್ನು ಎಂದು, ಯಾವಾಗ, ಎಷ್ಟು ದಿನ, ಯಾವ ರೀತಿ ನಡೆಸಬೇಕು ಎಂಬುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದು, ಉತ್ಸವ ನಡೆಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ತಿಳಿಸಿದರು.

        ಉತ್ಸವ ನಡೆಸದಿರಲು ತೆಗೆದುಕೊಂಡ ತೀರ್ಮಾನದ ಬಗ್ಗೆ ಬಿಜೆಪಿ ಹೇಳಿಕೆಯನ್ನು ಸುದ್ದಿಗಾರರು ಉಗ್ರಪ್ಪನವರ ಗಮನಕ್ಕೆ ತಂದಾಗ, 2013 ರಲ್ಲಿ ಅವರೇಕೆ ಉತ್ಸವ ನಡೆಸಲಿಲ್ಲ. ಇಂತಹ ವಿಷಯಗಳನ್ನು ರಾಜಕೀಕರಣ ಮಾಡುವುದು ಬೇಡ ಎಂದರು.
ಉತ್ಸವ ಎಂದರೆ ಹಂಪಿಯಲ್ಲಿ ಕೇವಲ ಕಲಾ ಪ್ರದರ್ಶನ ಅಷ್ಟೇ ಆಗದೇ, ಅಲ್ಲಿ ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದರು.

         ಪತ್ರಕರ್ತರೊಬ್ಬರು ತೆಲಂಗಾಣ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕಾರಣಕ್ಕೆ ಸಚಿವರು ಉತ್ಸವವನ್ನು ರದ್ದು ಮಾಡಿದರೇ ಎಂಬ ಪ್ರಶ್ನೆಗೆ ಸಂವಿಧಾನದ ಕಾಯ್ದೆ 19 ಪ್ರಕಾರ ವಾಕ್ ಸ್ವಾತಂತ್ರ್ಯವಿದೆ. ನೀವು ಯಾವುದೇ ಪದ ಬಳಕೆ ಮಾಡಬಹುದು. ಆದರೆ, ರಾಜಕೀಯದಲ್ಲಿದ್ದವರು ಪಕ್ಷ ಹೇಳಿದಾಗ ಅದನ್ನು ನಿರ್ವಹಿಸುವ ಜವಾಬ್ದಾರಿ ಮುಖಂಡರುಗಳದ್ದಾಗಿರುತ್ತದೆ ಎಂದರು.

50 ಪ್ರಶ್ನೆ:

       ಸಧ್ಯದಲ್ಲೇ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ತಾವು 25 ಗುರುತಿನ ಮತ್ತು 25 ಗುರುತು ರಹಿತ ಪ್ರಶ್ನೆಗಳಿಗೆ ಉತ್ತರ ನೀಡಲು ಕೋರಿದ್ದು, ಇದರಲ್ಲಿ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿ ಹೂಳು ತುಂಬಿರುವುದರಿಂದ ಉಂಟಾಗುತ್ತಿರುವ ನೀರಿನ ಸಮಸ್ಯೆ ಬಗ್ಗೆ, ಹೊಸಪೇಟೆ, ಚಿತ್ರದುರ್ಗ ಮಧ್ಯೆ ಮತ್ತು ಹೊಸಪೇಟೆ ಗುತ್ತಿ ನಡುವೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವಿಳಂಬ, ಹೊಸಪೇಟೆ-ಕೊಟ್ಟೂರು-ಹರಿಹರ ಮಧ್ಯೆ ಪ್ರಾಯಾಣಿಕರ ರೈಲು ಓಡಿಸುವುದು, ಹೊಸಪೇಟೆ-ಹುಬ್ಬಳ್ಳಿ ಮಧ್ಯೆ ಇಂಟರ್‍ಸಿಟಿ ರೈಲು ಆರಂಭಿಸುವ, ಹಂಪಿ ಸ್ವಚ್ಛತೆ ಹಗು ಮೂಲಭೂತ ಸೌಕರ್ಯಗಳಿಗೆ ಯಾವ ಕ್ರಮ, ರಾಜ್ಯದ ಬರಗಾಲ, ನೋಟು ರದ್ದತಿ ಪರಿಣಾಮ ಮೊದಲಾದ ಅಂಶಗಳನ್ನು ಹೊಂದಿದೆ. ಇನ್ನೂ ಪ್ರಮಾಣ ವಚನ ಸ್ವೀಕರಿಸದ ಕಾರಣ ಪೃಶ್ನೆ ಕೇಳಲು ಅವಕಾಶ ನೀಡುವ ಬಗ್ಗೆ ಆಕ್ಷೇಪ ಇದೆ. ಅವಕಾಶ ಸಿಕ್ಕರೆ ಪ್ರಶ್ನೆ ಕೇಳಲು ಸಿದ್ಧನಿದ್ದೇನೆ ಎಂದರು.

         ಈಗ ನಾನು ಗುರುತಿಸಿರುವ ಸಮಸ್ಯೆಗಳಲ್ಲದೆ, ಸೃಳೀಯ ಇನ್ನಿತರೆ ಜನಪ್ರತಿನಿಧಿಗಳು, ಮಾಧ್ಯಮದವರು ನನಗೆ ಸಲಹೆ ನೀಡಿದಲ್ಲಿ ಅವುಗಳ ಬಗ್ಗೆಯೂ ಸಂಸತ್‍ನಲ್ಲಿ ಗಮನ ಸೆಳೆಯುವೆ ಎಂದರು.

          ತಾವು ಇಂದು ನಡೆಸಿದ ಜನ ಸಂಪರ್ಕ ಸಭೆಯಲ್ಲಿ ಅನೇಕ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದು, ಇವುಗಳಲ್ಲಿ ಹಾಸ್ಟೆಲ್ ಸೌಲಭ್ಯ, ಮನೆಯ ನಿವೇಶನ ಖಾತೆ ಬದಲಾವಣೆ, ಚರಂಡಿ ವ್ಯವಸ್ಥೆ, ಅತಿಥಿ ಶಿಕ್ಷಕರ ಖಾಯಂಗೊಳಿಸುವುದು, ಬೇಸಿಗೆ ನೀರು ಸರಬರಾಜು, ಚುನಾವಣೆ ಸಂದರ್ಭದಲ್ಲಿ ಜಿಲ್ಲಾಡಳಿತ ಟಾಕ್ಸಿ ವಾಹನಗಳನ್ನು ತೆಗೆದುಕೊಂಡು ಇನ್ನೂ ಬಾಡಿಗೆ ಹಣ ನೀಡದಿರುವುದು ಮುಂತಾದವುಗಳು ಸೇರಿವೆ. ಇವುಗಳ ಬಗ್ಗೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳ ಗಮನ ಸೆಳೆದು ಪರಿಹರಿಸವುದಾಗಿ ಹೇಳಿದರು.ವೀರಭದ್ರಗೌಡ ಎನ್ ಬಳ್ಳಾರಿ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap