ಪ್ರತಿ ಹಳ್ಳಿಗೂ ಶಾಶ್ವತ ಕುಡಿಯುವ ನೀರು ಯೋಜನೆಗೆ ದೇವೇಗೌಡರ ಭರವಸೆ

ತುಮಕೂರು

     ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ತಡೆಹಿಡಿದಿದ್ದಾರೆ ಎಂದು ಬಿಜೆಪಿಯವರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಇಂತಹ ಅಪಪ್ರಚಾರದಿಂದ ತಮಗೆ ಯಶಸ್ಸು ಸಿಗುತ್ತದೆ ಎಂದು ಅಂದುಕೊಂಡಿದ್ದಾರೆ. ಅದು ಸಾಧ್ಯವಿಲ್ಲ. ಬಿಜೆಪಿಯವರ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದು ಮಾಜಿ ಪ್ರಧಾನಿ, ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ದೇವೇಗೌಡರು ಹೇಳಿದರು.

      ನಗರದಲ್ಲಿ ಭಾನುವಾರ ನಡೆದ ಕಾಂಗ್ರೆಸ್, ಜೆಡಿಎಸ್‍ನ ಅಲ್ಪಸಂಖ್ಯಾತರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನ ಪ್ರಣಾಳಿಕೆಯಲ್ಲಿ ಪ್ರತಿ ಹಳ್ಳಿಗೂ ಶಾಶ್ವತ ಕುಡಿಯುವ ನೀರು ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ, ಅದನ್ನು ಕಾರ್ಯಗತ ಮಾಡುತ್ತೇವೆ ಬಿಜೆಪಿಯ ಅಪಪ್ರಚಾರಗಳಿಗೆ ಕಿಮ್ಮತ್ತು ಕೊಡಬೇಡಿ ಎಂದು ವಿನಂತಿಸಿದರು.

      ಸೋನಿಯಾಗಾಂಧಿ, ರಾಹುಲ್ ಗಾಂಧಿಯವರ ಅಪೇಕ್ಷೆ ಮೇರೆಗೆ ರಾಜ್ಯದಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಈ ಚುನಾವಣೆ ಎದುರಿಸುತ್ತಿದ್ದೇವೆ, ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ 89, ಜೆಡಿಎಸ್‍ನ 37 ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಶಕ್ತಿಯನ್ನು ಕಮ್ಮಿ ಮಾಡಬಹುದು. ಎರಡು ಪಕ್ಷ ಒಟ್ಟಾಗಿರುವ ಕಾರಣ ಈ ಚುನಾವಣೆಯಲ್ಲಿ ಬಿಜೆಪಿಯನ್ನು 10 ಸ್ಥಾನ ಮೀರದಂತೆ ತಡೆಯಲು ಸಾಧ್ಯವಿದೆ. ರಾಜ್ಯದ ಎಲ್ಲಾ ಸಚಿವರು, ಶಾಸಕರು ಒಡಕು ಬಾರದ ರೀತಿ ಕೆಲಸ ಮಾಡಿ ಮೈತ್ರಿ ಪಕ್ಷಗಳಿಗೆ ಹೆಚ್ಚು ಸ್ಥಾನ ದೊರೆಯುವಂತೆ ಶ್ರಮಿಸಬೇಕು ಎಂದು ಹೇಳಿದರು.

      ಇಂಗ್ಲೀಷ್ ಹಾಗೂ ಹಿಂದಿ ಭಾಷೆಯ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಮೋದಿ ಬಿಟ್ಟು ಇನ್ನಾರೂ ದೇಶದಲ್ಲಿ ಅಧಿಕಾರ ನಡೆಸಲು ಸಮರ್ಥರಲ್ಲ ಎಂದು ಬಿಂಬಿಸುತ್ತಿವೆ. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಯವರು ಮುಂದಾಲೋಚನೆಯಿಂದ ಮಾಡಿಕೊಂಡಿರುವ ಮೈತ್ರಿಗೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ದೊರೆಯಬೇಕು. ಇದರಲ್ಲಿ ರಾಜ್ಯದ ಮೈತ್ರಿ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಎರಡೂ ಪಕ್ಷಗಳ ಮಂತ್ರಿ, ಶಾಸಕರು ಭಿನ್ನಾಭಿಪ್ರಾಯ ಬಾರದ ರೀತಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದು ದೇವೇಗೌಡರು ಹೇಳಿದರು.

     ಮಾಧ್ಯಮಗಳು ಮೋದಿ ಪರವಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಮೋದಿಯ ಪರವಾಗಿ ಭ್ರಮೆ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ, ನಮ್ಮ ಯುವಜನ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

      ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಮಾತನಾಡಿ, ನಮ್ಮ ಕರೆಗೆ ಹ್ಞೂಂಗುಟ್ಟಿ ದೇವೇಗೌಡರು ತುಮಕೂರಿಗೆ ಅಭ್ಯರ್ಥಿಯಾಗಿ ಬಂದಿದ್ದಾರೆ, ಇವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

      ದೇಶದಲ್ಲಿ ಶೇಕಡ 18ರಷ್ಟು ಮುಸ್ಲೀಮರಿದ್ದಾರೆ. ಇವರು ಇಲ್ಲೇ ಹುಟ್ಟಿ ಇಲ್ಲೇ ಸಾಯುತ್ತಾರೆ. ಆದರೆ ಇವತ್ತಿನ ರಾಜಕೀಯ ವಿದ್ಯಾಮಾನದಿಂದ ಭಾರತ ಹಾಗೂ ಪಾಕಿಸ್ತಾನ ಬೇರೆಯಾದ ಘಟನೆ ಮರೆತರೂ ಅಂತಹ ಪರಿಸ್ಥಿತಿ ನಿರ್ಮಾಣ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ದೇಶದ 650 ಜಿಲ್ಲೆಗಳ ಪೈಕಿ 120 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಐದು ವರ್ಷದಲ್ಲಿ ಮೋದಿಯರು ಈ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ, ಇವರ ಬಡತನ ನಿವಾರಣೆಗೆ ಯಾವ ಕಾರ್ಯಕ್ರಮ ಹಾಕಿಕೊಂಡಿದ್ದರು ಎಂದು ಪ್ರಶ್ನಿಸಿದ ಡಾ. ಪರಮೇಶ್ವರ್, ಬಿಜೆಪಿಯವರು ಪ್ರಚೋದನೆ ಮಾಡಿ ಧರ್ಮ ಒಡೆದು ಶಾಂತಿಯಿಂದ ಬದುಕಲಾಗದಂತಹ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

      ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗೋದ್ರ ಘಟನೆ ವಿಶ್ವದಲ್ಲೇ ತಲೆ ತಗ್ಗಿಸುವಂತಾದ್ದು, ಆದರೆ ಮೋದಿ ದೇಶದ ಮುಸ್ಲೀಮರ ಕ್ಷಮೆ ಕೇಳಲಿಲ್ಲ. 14 ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ನೋಟು ಅಮಾನ್ಯಕರಣ, ಜಿಎಸ್‍ಟಿ ಮುಂತಾದವುಗಳನ್ನು ಮಾಡಿ ಮೋದಿ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದರು.

      ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಮೂರು ಬಾರಿ ಸಂಸದರಾಗಿ ಏನು ಕೊಡುಗೆ ಕೊಟ್ಟಿದ್ದಾರೆ. ನನ್ನನ್ನು ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಬಸವರಾಜು ಕೇಳಿದ್ದಾರೆ. ತುಮಕೂರಿಗೆ ವಿಶ್ವವಿದ್ಯಾಲಯ ತಂದಿದ್ದೇನೆ, ನಮ್ಮ ಸರ್ಕಾರದಿಂದ 67 ಲಕ್ಷ ರೂಗಳಲ್ಲಿ ಕ್ಯಾನ್ಸರ್ ಆಸ್ಪತ್ರೆ ತರುತ್ತಿದ್ದೇವೆ. 13 ಸಾವಿರ ಕೋಟಿ ರೂಗಳ ಎತ್ತಿ ಹೊಳೆ ಯೋಜನೆ ಪೂರ್ಣಗೊಳಿಸಿ ಇನ್ನೆರಡು ವರ್ಷಗಳಲ್ಲಿ ನೀರು ಬರುವ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

        ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ದೇವೇಗೌಡರು ತನಗೆ ರಾಜಕೀಯ ಗುರು. ಹಿಂದೆ ನನ್ನ ಗೆಲುವಿಗೆ ಶ್ರಮಿಸಿ ನನಗೆ ರಾಜಕೀಯ ಬದುಕು ನೀಡಿದವರು, ಇವರ ಋಣ ತೀರಿಸಬೇಕಾಗಿದೆ. ಇವರನ್ನು ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

      ಸಚಿವ ಎಸ್ ಆರ್ ಶ್ರೀನಿವಾಸ್, ಶಾಸಕರಾದ ಎನ್ ಎ ಹ್ಯಾರೀಸ್, ಎಂವಿ ವೀರಭದ್ರಯ್ಯ, ಬೆಮೆಲ್ ಕಾಂತರಾಜು, ಚೌಡರೆಡ್ಡಿ, ವೇಣುಗೋಪಾಲ್, ಮಾಜಿ ಸಚಿವ ಟಿ ಬಿ ಜಯಚಂದ್ರ, ಹೆಚ್ ಸಿ ನಿರಾವರಿ, ಮಾಜಿ ಶಾಸಕರಾದ ಡಾ. ರಫಿಕ್ ಅಹಮದ್, ಷಫಿ ಅಹಮದ್, ರಮೇಶ್ ಬಾಬು, ಹೆಚ್ ನಿಂಗಪ್ಪ, ಸುಧಾಕರಲಾಲ್, ಷಡಕ್ಷರಿ, ಮುಖಂಡರಾದ ಗೋವಿಂದರಾಜು, ಮಾಜಿ ಸಂಸದ ಮೂಡಲಗಿರಿಯಪ್ಪ ಮತ್ತಿತರ ಮುಖಂಡರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap