ತುಮಕೂರು
ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಲಿ (ಕೆ.ಎಂ.ಎಫ್.) ಅಧಿಕಾರಿಗಳು ಜಂಟಿಯಾಗಿ ಶುಕ್ರವಾರ ಬೆಳಗ್ಗೆ ತುಮಕೂರು ನಗರದ ಘೋಷಿತ 27 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಒಟ್ಟು 7,548 ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ವಿತರಣೆ ಮಾಡಿದರು.
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಲು ಮಾರಾಟವು ಕಡಿಮೆಯಾಗಿ ಪ್ರತಿದಿನದ ಹೆಚ್ಚುವರಿ ಹಾಲು ವಿಲೇವಾರಿಯಾಗದೆ ಇರುವುದನ್ನು ರಾಜ್ಯದ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶದಲ್ಲಿ ವಾಸಿರುವವರಿಗೆ ಪ್ರತಿ ಕುಟುಂಬಕ್ಕೆ ತಲಾ 1 ಲೀಟರ್‍ನಂತೆ ಉಚಿತವಾಗಿ ವಿತರಿಸಲು ನಿರ್ಧರಿಸಲಾಗಿದೆಯೆಂದು ಬೆಂಗಳೂರಿನ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದು, ಅದನ್ನು ಆಧರಿಸಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಘೋಷಿತ ಮತ್ತು ಅಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ಪ್ರತಿ ಕುಟುಂಬಕ್ಕೆ 1 ಲೀಟರ್ ಹಾಲನ್ನು ಏಪ್ರಿಲ್ 14 ರವರೆಗೆ ವಿತರಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಅದರಂತೆ ಶುಕ್ರವಾರದಂದು ಹಾಲು ವಿತರಣೆ ಆರಂಭವಾಗಿದೆ.
27 ಕೊಳಚೆ ಪ್ರದೇಶಗಳಲ್ಲಿ
ತುಮಕೂರು ನಗರದ ಜಯನಗರ (ಎಚ್.ಎಂ.ಎಸ್.ಪಾಲಿಟೆಕ್ನಿಕ್ ಎದುರು), ಲೇಬರ್ ಕಾಲೋನಿ, ಅಳಶೆಟ್ಟಿಕೆರೆಪಾಳ್ಯ, ಕುರಿಪಾಳ್ಯ, ಗೂಡ್ಸ್‍ಶೆಡ್ ಕಾಲೋನಿ, ನಜರಾಬಾದ್, ಅಂಬೇಡ್ಕರ್ ನಗರ, ಕ್ಯಾತಸಂದ್ರ, ಫಕೀರ್ ಪಾಳ್ಯ, ಜಿ.ಸಿ.ಆರ್. ಕಾಲೋನಿ, ಕ್ಯಾತಸಂದ್ರದ ಎ.ಕೆ.ಕಾಲೋನಿ, ದೇವರಾಯಪಟ್ಟಣ, ಮರಳೂರು ಜನತಾ ಕಾಲೋನಿ, ವೀರಸಾಗರ, ಉಪ್ಪಾರಹಳ್ಳಿ, ಸ್ವೀಪರ್ಸ್ ಕಾಲೋನಿ, ಭಾರತಿ ನಗರ, ಮಾರುತಿನಗರ, ದಿಬ್ಬೂರು ಜನತಾ ಕಾಲೋನಿ, ದಿಬ್ಬೂರು, ಎನ್.ಆರ್.ಕಾಲೋನಿ, ಸಂತೆ ಮೈದಾನ, ಈದ್ಗಾ ಮೊಹಲ್ಲ, ಶಿರಾಗೇಟ್ ಎ.ಕೆ.ಕಾಲೋನಿ, ಬಿದಿರುಮೆಳೆ ತೋಟ, ಭಾಗ್ಯಮಂದಿರ ಮತ್ತು ಎಸ್.ಎನ್.ಪಾಳ್ಯ _ ಈ 27 ಘೋಷಿತ ಕೊಳಚೆ ಪ್ರದೇಶಗಳಲ್ಲಿ ಉಚಿತವಾಗಿ ನಂದಿನಿ ಹಾಲಿನ ಒಂದು ಲೀಟರ್‍ನ ಪ್ಯಾಕೇಟ್‍ಗಳನ್ನು ವಿತರಿಸಲಾಯಿತು.
ಪಾಲಿಕೆ ವ್ಯಾಪ್ತಿಯ ಹಾಲು ವಿತರಣೆಗೆ ಮೇಲ್ವಿಚಾರಣೆ ಅಧಿಕಾರಿಗಳನ್ನಾಗಿ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ರಾಮಾಂಜಿನಪ್ಪ ಮತ್ತು ಪಾಲಿಕೆಯ ಕಚೇರಿ ವ್ಯವಸ್ಥಾಪಕ ಮಹೇಶ್ ಅವರನ್ನು ಜಿಲ್ಲಾಧಿಕಾರಿಗಳು ನೇಮಿಸಿದ್ದಾರೆ. ಇನ್ನು ಪ್ರತಿ ಕೊಳಚೆ ಪ್ರದೇಶಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ಪಾಲಿಕೆಯ ಅಧಿಕಾರಿಗಳನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗಿದೆ. ಈ ಕೆಲಸಕ್ಕೆ ಕೆ.ಎಂ.ಎಫ್. ವತಿಯಿಂದ ಕೆ.ಎಂ.ಎಫ್. ಅಧಿಕಾರಿಗಳಾದ ಭರತ್, ನರಸಿಂಹೇಗೌಡ, ರವಿಕಿರಣ, ಪವನ್, ವಿಶ್ವನಾಥ್ ಮತ್ತು ನಾಗರಾಜು ನಿಯುಕ್ತರಾಗಿದ್ದಾರೆ. ಈ ಅಧಿಕಾರಿಗಳಿಗೆ ಸ್ಥಳೀಯ ಸ್ವಯಂಸೇವಕರು ಹಾಲು ವಿತರಣೆ ಸಂದರ್ಭದಲ್ಲಿ ಅಗತ್ಯ ಸಹಕಾರ ನೀಡುವರು.
3 ಮಾರ್ಗಗಳಲ್ಲಿ ವಿತರಣೆ
ಶುಕ್ರವಾರ ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಹಾಲು ವಿತರಣೆ ಕಾರ್ಯ ನಡೆಯಿತು. ಇದಕ್ಕಾಗಿ ಒಟ್ಟು 3 ಮಾರ್ಗ (ರೂಟ್)ಗಳನ್ನು ಕೆ.ಎಂ.ಎಫ್. ಮಾಡಿಕೊಂಡಿದೆ. ಒಂದನೇ ಮಾರ್ಗದಲ್ಲಿ 2802 ಲೀಟರ್, ಎರಡನೇ ಮಾರ್ಗದಲ್ಲಿ 2226 ಲೀಟರ್ ಮತ್ತು ಮೂರನೇ ಮಾರ್ಗದಲ್ಲಿ 2520 ಲೀಟರ್ ಹಾಲು ಸೇರಿ ಒಟ್ಟು 7548 ಲೀಟರ್ ಹಾಲು ವಿತರಣೆ ಆಗಿದೆ. ಹಾಲು ವಿತರಣೆ ಮಾಡುವಾಗ ಪುಸ್ತಕವೊಂದರಲ್ಲಿ ಫಲಾನುಭವಿ ಹೆಸರು ಮತ್ತು ಅವರ ಮೊಬೈಲ್ ಸಂಖ್ಯೆಯನ್ನು ಬರೆದುಕೊಂಡು ಅವರ ಸಹಿಯನ್ನು ಪಡೆದುಕೊಳ್ಳಲಾಗಿದೆ.
2.86 ಲಕ್ಷ ರೂ ಮೌಲ್ಯದ ಹಾಲು
ಸಾಧಾರಣ ಹಾಲಿನ 1 ಲೀ. ಪ್ಯಾಕೆಟ್ ದರ 38 ರೂ. ಇದ್ದು, ಶುಕ್ರವಾರ ಒಟ್ಟು 7548 ಲೀ. ಹಾಲು ವಿತರಿಸಿದ್ದು, ಈ ಹಾಲಿನ ದರವು ಒಟ್ಟಾರೆ 2,86,824 ರೂ. ಆಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








