ಬಲಿಷ್ಠ ರಾಷ್ಟ್ರಕ್ಕಾಗಿ ಕರ್ತವ್ಯ ಪಾಲಿಸಲು ಕರೆ

ದಾವಣಗೆರೆ 

           ಸಂವಿಧಾನದ ಆಶಯದಂತೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಕರ್ತವ್ಯಗಳನ್ನು ಅತ್ಯಂತ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಪಾಲಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು.

         ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವ ಸಂದೇಶ ನೀಡಿ ಮಾತನಾಡಿದ ಅವರು, ಭಾರತವನ್ನು ವಿಶ್ವಮಾನ್ಯ ಹಾಗೂ ಬಲಾಢ್ಯ ಗಣರಾಜ್ಯವನ್ನಾಗಿ ರೂಪಿಸಲು ತ್ಯಾಗ-ಬಲಿದಾನ ಗೈದ ದೇಶಾಭಿಮಾನಿಗಳ ಆಶಯದಂತೆ ರಾಷ್ಟ್ರವನ್ನು ಇನ್ನಷ್ಟು ಅಭ್ಯುದಯದ ಪಥದಲ್ಲಿ ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯ ಮೂಲಭೂತ ಕರ್ತವ್ಯವಾಗಿದ್ದಯ, ಇದನ್ನು ಪ್ರಾಮಾಣಿಕತೆಯಿಂದ ಪಾಲಿಸಬೇಕೆಂದು ಸಲಹೆ ನೀಡಿದರು.

         ನಾವು ಮಾಡಿದ ಸಾಧನೆಗಳೇ ನಮ್ಮ ಪರಿಶ್ರಮದ ಅಳತೆಗೋಲಾಗಬೇಕು. ನಮ್ಮ ಸಾಧನೆಗಳಿಂದ ಪ್ರಯೋಜನ ಪಡೆದು, ತೃಪ್ತಿಗೊಂಡ ಜನರು ನೀಡುವ ಉತ್ತೇಜನವೇ ನಮಗೆ ಶ್ರೀರಕ್ಷೆಯಾಗಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕವಾಗಿ, ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ದಿಯೂ ಆಗಲಿದೆ ಎಂದರು.

        ಭಾರತ ದೇಶವು ಸಾರ್ವಭೌಮತೆಯ, ಸಾಮಾಜಿಕ ನ್ಯಾಯದ, ಜ್ಯಾತ್ಯಾತೀತತೆ ಮತ್ತು ಪ್ರಜಾಸತ್ತಾತ್ಮಕತೆಯ ಭದ್ರ ತಳಹದಿಗಳ ಮೇಲೆ ನಿರ್ಮಿತವಾದ ಬಲಿಷ್ಠ ಗಣರಾಜ್ಯವಾಗಿದೆ.

          ದೇಶದ ಅಖಂಡತೆಯ ಪ್ರತೀಕವಾದ ನಮ್ಮ ಸಂವಿಧಾನವನ್ನು 1950ರ ಜನವರಿ 26ರಂದು ಇಡೀ ದೇಶಕ್ಕೆ ಏಕೈಕ ಪೌರತ್ವವನ್ನು ಉಪಬಂಧಿಸಿ, ಎಲ್ಲಾ ಪೌರರಿಗೆ ಮೂಲಭೂತ ಹಕ್ಕುಗಳನ್ನು ದಯಪಾಲಿಸಿ, ಪ್ರಜೆಗಳು ಜವಾಬ್ದಾರಿಯುತವಾಗಿ ವರ್ತಿಸಲು ಮೂಲಭೂತ ಕರ್ತವ್ಯಗಳನ್ನು ಸಹ ಸಂವಿಧಾನವು ನೀಡಿದೆ. ಇಂದು, ಇಂತಹ ಮಹತ್ ಪ್ರೇರಣಾದಾಯಕವಾದ ದಿನದಂದು, ನಾವು ಈ ಸಂವಿಧಾನವನ್ನು ರಚಿಸಿದ ಮತ್ತು ಈ ಸಂವಿಧಾನದ ವಿಧಿವಿಧಾನಗಳ ಅನುಷ್ಟಾನದ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲಾ ದಿಗ್ಗಜರನ್ನು ಕೃತಜ್ಞತಾಪೂರ್ವಕವಾಗಿ ನೆನೆಯಬೇಕೆಂದು ಕಿವಿಮಾತು ಹೇಳಿದರು.

          ಜಿಲ್ಲೆಯು ಕೈಗಾರಿಕೆ ವಲಯದಲ್ಲಿ ಉತ್ತಮ ಅಭಿವೃದ್ಧಿಯಾಗುತ್ತಿದ್ದು, ಒಟ್ಟು 13,133 ಕೈಗಾರಿಕೆಗಳು ನೊಂದಣಿಯಾಗಿದ್ದು, ರೂ.5,311.40 ಕೋಟಿ ಬಂಡವಾಳ ಹೂಡಿಕೆಯಾಗಿರುತ್ತದೆ ಹಾಗೂ 57,892 ಜನ ಉದ್ಯೋಗದಲ್ಲಿ ತೊಡಗಿರುತ್ತಾರೆ. ಅಲ್ಲದೆ, ಮತ್ತಷ್ಟು ಉದ್ಯೋಗ ಸೃಜಿಸುವ ಉದ್ದೇಶದಿಂದ ಮಂಗಳೂರು ರಿಫೈನರಿ & ಪೆಟ್ರೂಕೆಮಿಕಲ್ ಲಿ., ಇವರು ಕೃಷಿ ಆಧಾರಿತ ಬಯೋಪಿಯೋಲ್ ಘಟಕ ಸ್ಥಾಪಿಸಲು ಯೋಜಿಸಿದೆ. ಅಲ್ಲದೆ, ಇನ್ನಷ್ಟು ಕೈಗಾರಿಕೆಗಳನ್ನು ತರಲು ಚಿಂತನೆ ನಡೆಸಲಾಗಿದೆ ಎಂದರು.

          ಕೃಷಿಭಾಗ್ಯ ಯೋಜನೆಯಡಿ 1,543 ಫಲಾನುಭವಿಗಳಿಗೆ ಕೃಷಿ ಹೊಂಡ, ಡೀಸೆಲ್ ಪಂಪ್‍ಸೆಟ್, ತುಂತುರು ನೀರಾವರಿ ಉಪಕರಣಗಳನ್ನು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ವರ್ಗದವರಿಗೆ ಶೇ.90 ರಷ್ಟು ಹಾಗೂ ಸಾಮಾನ್ಯ ವರ್ಗದವರಿಗೆ ಶೇ.80 ರಿಯಾಯತಿ ದರದಲ್ಲಿ ಅನುಷ್ಟಾನ ಮಾಡಲಾಗಿದೆ. ಇದುವರೆಗೆ ರೂ.13.00 ಕೋಟಿ ಸಹಾಯಧನವನ್ನು ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. 2018-19 ನೇ ಸಾಲಿನಲ್ಲಿ ರೂ.870.93 ಲಕ್ಷ ಸಹಾಯಧನದಲ್ಲಿ 5,840 ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ಮತ್ತು ರೂ.684.88 ಲಕ್ಷ ಸಹಾಯಧನದಲ್ಲಿ 2,942 ಲಘು ನೀರಾವರಿ ಉಪಕರಣಗಳನ್ನು ಅರ್ಹ ರೈತರಿಗೆ ಸಹಾಯಧನ ಸೌಲಭ್ಯ ಕಲ್ಪಿಸಿ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

        ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಗರ್ಭಿಣಿ ಮತ್ತು ಬಾಣಂತಿಯರ ಅಪೌಷ್ಠಿಕ ಮಟ್ಟವನ್ನು ಸುಧಾರಿಸಲು, ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಸರ್ಕಾರವು ಜಾರಿಗೊಳಿಸಿದ್ದು, ಅಸಂಘಟಿತ ಕಾರ್ಮಿಕರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು, ಕಟ್ಟಡ ಮತ್ತು ಇತರೇ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿಸಿಕೊಂಡು, ವಿವಿಧ ಧನಸಹಾಯವನ್ನು ನೀಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಮಂಡಳಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 69,267 ಜನ ಕಟ್ಟಡ ಕಾರ್ಮಿಕರನ್ನು ನೊಂದಾಯಿಸಿಕೊಂಡು ಅವರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ ಎಂದು ವಿವರಿಸಿದರು.

          ಗ್ರಾಮ ವಿಕಾಸ ಯೋಜನೆಯಡಿ ದಾವಣಗೆರೆ ಜಿಲ್ಲೆಯ 08 ವಿಧಾನಸಭಾ ಕ್ಷೇತ್ರದ 37 ಗ್ರಾಮಗಳನ್ನು ಆಯ್ಕೆ ಮಾಡಿ, ರೂ.30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ರೂ.30 ಕೋಟಿ ಅನುದಾನವನ್ನು ವೆಚ್ಚ ಮಾಡಲಾಗಿರುತ್ತದೆ. ಹಾಗೂ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಒಟ್ಟು 38 ಗ್ರಾಮಗಳು ಆಯ್ಕೆಯಾಗಿದ್ದು, ಪ್ರತಿ ಗ್ರಾಮಕ್ಕೆ ರೂ.1.00 ಕೋಟಿಯಂತೆ ಒಟ್ಟು ರೂ.38 ಕೋಟಿ ಅನುದಾನ ನಿಗದಿಯಾಗಿರುತ್ತದೆ. ಅದರಲ್ಲಿ ಈವರೆಗೂ ಸರ್ಕಾರದಿಂದ ರೂ.15.52 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ಗ್ರಾಮಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

          ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಒಟ್ಟು 2.36 ಲಕ್ಷ ಕುಟುಂಬಗಳು ಜಾಬ್ ಕಾರ್ಡ್ ಹೊಂದಿರುತ್ತವೆ. ಇದುವರೆಗೂ 37.28 ಲಕ್ಷ ಮಾನವ ದಿನಗಳ ಸೃಜನೆಯಾಗಿದ್ದು, ಒಟ್ಟು ರೂ.157.84 ಲಕ್ಷ ವೆಚ್ಚ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಬರಪೀಡಿತ ತಾಲ್ಲೂಕುಗಳಲ್ಲಿ 100 ದಿನಗಳಿಗಿಂತಲೂ ಹೆಚ್ಚು ಅಂದರೆ ಒಂದು ಕುಟುಂಬಕ್ಕೆ 150 ದಿನಗಳ ಕೂಲಿ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಸೃಜನೆಯಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿ 6ನೇ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.

         ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯ ಹಾಗೂ ಸಂಸದೀಯ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್, ಜಿ ಪಂ ಅಧ್ಯಕ್ಷೆ ಜೆ.ಸವಿತಾ, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್ ಸಾಬ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಜಿ.ಪಂ ಸಿಇಓ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಎಸಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೊಷ್‍ಕುಮಾರ್ ಮತ್ತಿತರರು ಭಾಗವಹಿಸಿದ್ದ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap