ಬೆಂಗಳೂರು
ಕೇರಳದ ಕಾಸರಗೋಡಿನ ಯುವತಿಯೊಬ್ಬರನ್ನು ನಗರಕ್ಕೆ ಕರೆತಂದು ಅತ್ಯಾಚಾರವೆಸಗಿ ಬೆದರಿಸಿ ಮತಾಂತರಕ್ಕೆ ಯತ್ನಿಸಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಸಂತ್ರಸ್ತ ಯುವತಿಯು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಬೆನ್ನಲ್ಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ದಾಖಲೆ ಪತ್ರಗಳನ್ನು ಮಂಗಳವಾರ ಕಳುಹಿಸಲಾಗಿದೆ .ಕಾಸರಗೋಡಿನ ಯುವತಿಯನ್ನು ನಗರಕ್ಕೆ ಕರೆತಂದಿದ್ದ ಕೇರಳದ ರಿಷಬ್ (23) ಹಾಗೂ ದುಷ್ಕರ್ಮಿಗಳಿಗೆ ಉಳಿದುಕೊಳ್ಳಲು ಜಾಗ ನೀಡಿದ ಅನ್ಸರ್ ಅಲಿಯಾಸ್ ನಾಸೀರ್‌ನನ್ನು ಪ್ರಕರಣದ ಸಂಬಂಧ ತನಿಖೆ ಕೈಗೊಂಡಿದ್ದ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದರು.
ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ದುಷ್ಕರ್ಮಿಯನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ ಬೆನ್ನಲ್ಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದ್ದು, ಇಲ್ಲಿಯವರೆಗಿನ ತನಿಖೆಯ ವಿವರಗಳನ್ನು ಸಿಐಡಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಇಶಾಪಂತ್ ಅವರು ತಿಳಿಸಿದ್ದಾರೆ.
ಬಂಧಿತ ಕೇರಳ ಮೂಲದ ರಿಷಬ್ ಮತ್ತೊಬ್ಬ ಆರೋಪಿಯ ಜತೆ ಸೇರಿ ಕಾಸರಗೋಡು ಮೂಲದ ಯುವತಿಯನ್ನು ನಗರಕ್ಕೆ ಕರೆದುಕೊಂಡು ಬಂದು ಮತ್ತೊಬ್ಬ ಬಂಧಿತ ನಾಸೀರ್‌ನ ಪರಪ್ಪನ ಅಗ್ರಹಾರದ ಮನೆಯಲ್ಲಿಟ್ಟುಕೊಂಡು ಅತ್ಯಾಚಾರವೆಸಗಿದ್ದರು. ಅತ್ಯಾಚಾರದ ಬಗ್ಗೆ ದೂರು ನೀಡದಂತೆ ಬೆದರಿಸಿ ಮತಾಂತರ ನಡೆಸಲು ಯತ್ನಿಸಿದ್ದು, ಸಂತ್ರಸ್ತ ಯುವತಿ ಸಂಸದೆ ಶೋಭಾಕರಂದ್ಲಾಜೆ ಅವರನ್ನು ಭೇಟಿಯಾಗಿ ನೋವು ತೋಡಿಕೊಂಡಿದ್ದು, ಆಕೆಯನ್ನು ಸಂಸದರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಗೆ ಕರೆದೊಯ್ದು,ದುಷ್ಕೃತ್ಯದ ವಿವರ ನೀಡಿದ್ದರು.
ಇದಲ್ಲದೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೂ ಸಂತ್ರಸ್ತ ಯುವತಿಯು ಕಳೆದ ಭಾನುವಾರ ದೂರು ನೀಡಿ ಕಾಸರಗೋಡಿನ ಯುವಕರಿಬ್ಬರು ನನ್ನ ಮೇಲೆ ಅತ್ಯಾಚಾರವೆಸಗಿ ಅವರ ಧರ್ಮಕ್ಕೆ ಮತಾಂತರವಾಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದರು.
ದುಷ್ಕರ್ಮಿಗಳು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಬಂಧಿಸಿ. ಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಭಾಸ್ಕರ್‌ರಾವ್ ಅವರು ತನಿಖೆ ನಡೆಸುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು.ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಮತ್ತೊಬ್ಬನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದ ಬೆನ್ನಲ್ಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
