ಇತಿಹಾಸ ತಿರುಚದಿರಲು ಎಸ್‍ಎಆರ್ ಸಲಹೆ

ದಾವಣಗೆರೆ:

      ಇತಿಹಾಸಕಾರರು ಇತಿಹಾಸ ತಿರುಚುವ ಕೆಲಸ ಮಾಡಬಾರದು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಸಲಹೆ ನೀಡಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆರಂಭವಾದ ದಾವಣಗೆರೆ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಕುರಿತ 2 ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

        ಈ ಡಾಕ್ಟ್ರೇಟ್ ಪಡೆದವರಿಗೆ, ಇತಿಹಾಸಕಾರರಿಗೆ ಕೆಟ್ಟದನ್ನು ಎತ್ತಿ ತೋರಿಸುವುದೇ ಒಂದು ಸ್ವಭಾವವಾಗಿದೆ. ಇತಿಹಾಸಕಾರರು ಕೆಟ್ಟದನ್ನು ಎತ್ತಿ ಹಿಡಿದು ಇತಿಹಾಸ ತಿರುಚಬಾರದು. ಇಂಥಹ ವಿಚಾರ ಸಂಕಿರಣದಲ್ಲಿ ಒಳ್ಳೆಯ ವಿಷಯಗಳ ಬಗ್ಗೆ ಚಿಂಥನ, ಮಂಥನ ನಡೆಸಿ ಒಳ್ಳೆಯ ಇತಿಹಾಸ ಸೃಷ್ಟಿಸಬೇಕೆಂದು ಕಿವಿಮಾತು ಹೇಳಿದರು.

        ಕರ್ನಾಟಕದ ಹಳೇಯ ಮೈಸೂರು ಹಾಗೂ ಉತ್ತರ ಕರ್ನಾಟಕದ ಮಧ್ಯೆ ಇರುವ ಈ ಭಾಗದಲ್ಲಿ ಮಂಡ್ಯ, ಹಾಸನದಿಂದ ಎತ್ತುಗಳನ್ನು ಒಡೆದುಕೊಂಡು ಬರುವವರು ಇಲ್ಲಿದ್ದ ಕರೆಯ ದಂಡೆಯ ಮೇಲೆ ಎತ್ತುಗಳನ್ನು ಕಟ್ಟಿ, ವಿಶ್ರಾಂತಿ ಪಡೆದು ಬೆಳಿಗ್ಗೆ ಎದ್ದು ಹೋಗುತ್ತಿದ್ದರಂತೆ, ಅದಕ್ಕೆ ದಾವಣಗೆರೆ ಎಂಬ ಹೆಸರು ಬಂತಂತೆ. ಇದು ನನಗೆ ಹಿರಿಯರು ಹೇಳಿರುವ ಕಥೆ, ಪುಸ್ತಕದಲ್ಲಿ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ತಮ್ಮ ಜವಾರಿ ಶೈಲಿಯಲ್ಲಿ ದಾವಣಗೆರೆಗೆ ಬಂದ ಹೆಸರನ್ನು ವಿಶ್ಲೇಷಿಸಿದರು.

       ಮಾಜಿ ಸಚಿವ, ಭಾರತ್ ಸ್ಕೌಟ್ಸ್ & ಗೈಡ್ಸ್‍ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ , ಚರಿತ್ರೆಯ ದಾಖಲಾತಿ ಅತ್ಯವಶ್ಯವಾಗಿದೆ. ಇದು ಇಲ್ಲದಿದ್ದರೆ, ಏನೂ ಮಾಡಲಾಗುವುದಿಲ್ಲ. ಭೂತಕಾಲವನ್ನು ತಿಳಿಯದವರಿಂದ ಹಾಗೂ ವರ್ತಮಾನವನ್ನು ವಿಶ್ಲೇಷಿಸದವರಿಂದ ಭವಿಷ್ಯ ಕಟ್ಟಲಾಗುವುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಬೆಳೆಯಬೇಕಾದರೆ, ಇತಿಹಾಸದ ಬಗ್ಗೆ ತಿಳಿದು ಕೊಳ್ಳುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.

       ಸಾಮಾನ್ಯವಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರಧಾನ್ಯವನ್ನು ಬಳಕೆ ಮಾಡುತ್ತಾರೆ. ಆದರೆ, ದಾವಣಗೆರೆಯಲ್ಲಿ ಅಕ್ಕಿ, ರಾಗಿ, ಜೋಳ, ಗೋಧಿ ಸೇರಿದಂತೆ ಎಲ್ಲ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಹೀಗಾಗಿಯೇ ದಾವಣಗೆರೆಯು ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಹಾಗೂ ಮೈಸೂರು ಕರ್ನಾಟಕದ ಸಾಂಸ್ಕತಿಕ ಕೊಂಡಿಯಾಗಿದೆ ಎಂದು ವಿಶ್ಲೇಷಿಸಿದರು.

        ನಾಡಿನ ದೂರದೃಷ್ಟಿ ಇರುವ ನಾಯಕರ ಪೈಕಿ ದಾವಣಗೆರೆಯ ಜೆ.ಹೆಚ್.ಪಟೇಲರು ಸಹ ಒಬ್ಬರಾಗಿದ್ದಾರೆ. ಹೃದಯವಂತಿಕೆಯನ್ನು ಹೊಂದಿದ್ದ ಅವರು ಸದಾ ಸಮಾಜ ಪರಿವರ್ತನೆಗಾಗಿ ತುಡಿಯುತ್ತಿದ್ದರು. ಶಿವಮೊಗ್ಗ, ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಕೆಲ ತಾಲೂಕುಗಳನ್ನು ಕಿತ್ತು ದಾವಣಗೆರೆ ಜಿಲ್ಲೆಗೊಂದು ಮೂರ್ತಿ ಸ್ವರೂಪಕೊಟ್ಟರು. ಒಂದು ಲೆಕ್ಕದಲ್ಲಿ ನೋಡಿದರೆ, ಅವರ ಪ್ರತಿಮೆ ವಿಧಾನಸೌಧ ಎದುರು ನಿರ್ಮಾಣವಾಗಬೇಕು. ಆದರೆ, ಈ ಜಿಲ್ಲೆಯ ಜನತೆ ಜಿಲ್ಲಾ ಪಂಚಾಯತ್ ಎದುರು ಪಟೇಲರ ಪುತ್ಥಳಿ ನಿರ್ಮಿಸಿರುವುದು. ಇಲ್ಲಿಯ ಜನರ ಸಹೃದಯತೆಯ ಪ್ರತೀಕವಾಗಿದೆ ಎಂದು ಹೇಳಿದರು.

      ಈ ಜಿಲ್ಲೆಯಲ್ಲಿ ಜಾತಿ ಆಧಾರಿತ ರಾಜಕಾರಣ ಎಂದೂ ನಡೆದಿಲ್ಲ ಮತ್ತು ಮುಂದೆಯೂ ನಡೆಯಲ್ಲ. ಸಾಮಾನ್ಯ ಜನ ಯಾರೂ ಸಹ ಜಾತಿಯನ್ನು ನೋಡುವುದಿಲ್ಲ. ಹೀಗೆ ಜಾತಿಯನ್ನು ನೋಡುವುದಾಗಿದ್ದರೆ, ಜೆ.ಹೆಚ್.ಪಟೇಲರು, ಪಂಪಾಪತಿಯವರು, ನಾಗಮ್ಮ ಕೇಶವಮೂರ್ತಿ, ಕೆ.ಮಲ್ಲಪ್ಪ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. 1952ರಿಂದ ಇಂದಿನ ವರೆಗಿನ ಚುನಾವಣಾ ಫಲಿತಾಂಶವನ್ನು ಒಮ್ಮೆ ಅವಲೋಕಿಸಿ ನೋಡಿ, ಚುನಾವಣೆಯಲ್ಲಿ ನಿಂತಿರೊರಲ್ಲಿ ಉತ್ತಮರು ಯಾರು ಎಂಬುದನ್ನು ನೋಡಿಕೊಂಡು ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಕೆಲವರಿಗೆ ಜಾತಿಯ ಹಿತಾಸಕ್ತಿ ಇರಬಹುದು ಅದನ್ನು ಅಲ್ಲೆಗೆಳೆಯಲಾಗದು ಎಂದರು.

       ಈ ಭಾಗದಲ್ಲಿರುವ ಸಿರಿಗೆರೆ, ಮುರುಘಾ ಹಾಗೂ ಸಿದ್ಧರೂಢ ಮಠಗಳು ಇಲ್ಲಿಯ ಜನರನ್ನು ಆಧ್ಯಾತ್ಮಿಕವಾಗಿ ಬೆಳೆಸುವ ಮೂಲಕ ಸನ್ಮಾಗದಲ್ಲಿ ನಡೆಸುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.

         ಈಗ ಕೆಲವರು ಕರ್ನಾಟಕವನ್ನು ಇಬ್ಭಾಗ ಮಾಡುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಎರಡು ಆಗಬೇಕೆಂದು ಮಾತನಾಡುವವರು ಹೋಗಬಹುದು. ಆದರೆ, ಕರ್ನಾಟಕ ಎಂದಿಗೂ ಇಬ್ಭಾಗವಾಗಲು ಸಾಧ್ಯವೇ ಇಲ್ಲ. ಕರ್ನಾಟಕ ಎಂದಿಗೂ ಒಂದೇ ಆಗಿರಲಿದೆ ಎಂದರು.

          ಆಶಯ ನುಡಿಗಳನ್ನಾಡಿದ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ, ಅಶೋಕನ ಕಾಲದಿಂದ ಬರವಣಿಗೆ ಬಂದ ಕಾರಣ ಅಂದಿನಿಂದ ಮಾತ್ರ ಭಾರತದ ಇತಿಹಾಸ ದಾಖಲಾಗಿದ್ದು, ಅಶೋಕನ ಕಾಲದ ನಂತರವೇ ಪುರಾಣ ಬರೆವಣಿಗೆಯ ರೂಪ ಪಡೆದದ್ದು. ಬುದ್ಧ, ಮಹಾವೀರರ ವಿಚಾರಧಾರೆಗಳು ಸಹ ಮಾತಿನ ರೂಪದಲ್ಲಿದ್ದವು. ಆದರೆ, ಆನಂತರ ಅವರ ಅನುಯಾಯಿಗಳು ಅವುಗಳನ್ನು ಬರವಣಿಗೆ ರೂಪದಲ್ಲಿ ದಾಖಲಿಸಿದರು. ಆದ್ದರಿಂದ ಅಶೋಕನ ಕಾಲದ ಮುಂಚಿನ ಇತಿಹಾಸದ ಕೊಂಡಿ ಕಳಚಿ ಹೋಗಿದೆ. ಹೀಗಾಗಿ ಇತಿಹಾಸಕಾರರು ಕ್ರಿ.ಪೂ. 2ನೇ ಶತಮಾನದ ಪೂರ್ವದ ಇತಿಹಾಸದ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕೆಂದು ಕಿವಿಮಾತು ಹೇಳಿದರು.

        ಕಾಲೇಜಿನ ಪ್ರಾಂಶುಪಾಲ ದಾದಾಪೀರ್ ನವಿಲೇಹಾಳ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಾವಣಗೆರೆ ವಿವಿಯ ಕುಲಪತಿ ಪ್ರ.ಶರಣಪ್ಪ ವಿ. ಹಲಸೆ, ರಾಜ್ಯ ಪತ್ರಗಾರ ಇಲಾಖೆ ನಿರ್ದೇಶಕಿ ಡಾ.ಅನುಜಾಕ್ಷಿ.ಎಸ್, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಪ್ರಸಾದ್.ಕೆ, ಇತಿಹಾಸ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಡಾ.ಬಿ.ಪಿ.ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ.ಶಕುಂತಲಾ ಎನ್ ಪ್ರಾಸ್ತಾವಿಕ ಮಾತನಾಡಿದರು. ನೇಸರ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರೊ.ತೊಪ್ಪಲು ಕೆ. ಮಲ್ಲಿಕಾರ್ಜುನಗೌಡ ನಿರೂಪಿಸಿದರು. ಪ್ರೊ.ಬಾಬು ಕೆ.ಎ. ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ