ಚಿತ್ರದುರ್ಗ :
ಚಿತ್ರದುರ್ಗ ಜಿಲ್ಲೆ 2014-15 ವರ್ಷವನ್ನು ಹೊರತುಪಡಿಸಿ, ಉಳಿದಂತೆ ಕಳೆದ 07 ವರ್ಷಗಳಿಂದಲೂ ಸತತ ಬರ ಪರಿಸ್ಥಿತಿಗೆ ತುತ್ತಾಗಿದ್ದು, ಜಿಲ್ಲೆಯ ಮಳೆಯ ಪ್ರಮಾಣ ಆಧರಿಸಿ, ಇಲ್ಲಿನ ಹವಾಗುಣಕ್ಕೆ ಅನುಗುಣವಾಗಿ ರೈತರ ಕೃಷಿ ಬದುಕು ಹಸನಾಗಿಸಲು ಸಲಹಾತ್ಮಕ ಪ್ಯಾಕೇಜ್ ರೂಪಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಕೃಷಿ, ತೋಟಗಾರಿಕೆ, ಬೆಳೆ ವಿಮೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು, ಕೃಷಿ, ತೋಟಗಾರಿಕೆ ತಜ್ಞರು, ಪ್ರಗತಿಪರ ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆ ಕಳೆದ 07-08 ವರ್ಷಗಳಿಂದಲೂ ಸತತವಾಗಿ ಬರ ಪರಿಸ್ಥಿತಿಗೆ ಸಿಲುಕಿದ್ದು, ಇಲ್ಲಿನ ರೈತರ ಕೃಷಿ ಬದುಕು ವರ್ಷದಿಂದ ವರ್ಷಕ್ಕೆ ಆತಂಕದಲ್ಲಿಯೇ ಮುಂದುವರೆದಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಕುಡಿಯುವ ನೀರಿಗೂ ಸಮಸ್ಯೆ ಇದೆ. ಜಿಲ್ಲೆಯ ವರ್ಷದ ವಾಡಿಕೆ ಮಳೆ 750 ಮಿ.ಮೀ. ಇದ್ದು, ಸರಿಸುಮಾರು ವರ್ಷಕ್ಕೆ 550 ಮಿ.ಮೀ. ನಷ್ಟು ಮಳೆಯಾಗುತ್ತಿದೆಯಾದರೂ, ಅದು ರೈತರಿಗೆ ಬೇಕಾದ ಕಾಲಕ್ಕೆ ಆಗುತ್ತಿಲ್ಲ ಎಂದು ಹೇಳಿದರು
ಕೇವಲ ಅಂಕಿ-ಅಂಶಗಳಲ್ಲಿ ಮಳೆಯ ಪ್ರಮಾಣ ದಾಖಲಾಗುತ್ತಿದೆಯಾದರೂ, ಭೂಮಿಯಲ್ಲಿ ಇಂಗಿ, ಕೃಷಿ ಬೆಳೆಗಳಿಗೆ ಅಥವಾ ಅಂತರ್ಜಲ ವೃದ್ಧಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ತೀವ್ರವಾದ ಮಳೆ ಆಗುತ್ತಿಲ್ಲ. ಜಿಲ್ಲೆಯ ರೈತರು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ್ದು, ಪ್ರತಿ ವರ್ಷ ಮುಂಗಾರು ಹಂಗಾಮಿಗೆ ಭೂಮಿ ಸಿದ್ಧಪಡಿಸಿ, ಬಿತ್ತನೆ ಮಾಡಿ, ಮಳೆ ಹಾಗೂ ಬೆಳೆಗೆ ಕಾಯುವ ಸ್ಥಿತಿ ಇದೆ. ಮಳೆಯ ಕೊರತೆಯಿಂದ ಬಿತ್ತಿದ ಬೆಳೆ ರೈತನ ಕೈ ಸೇರುತ್ತಿಲ್ಲ.
ಹೀಗಾಗಿ ಜಿಲ್ಲೆಯಲ್ಲಿನ ಹಿಂದಿನ ಮಳೆಯ ಪ್ರಮಾಣ, ಹವಾಗುಣ ಹಾಗೂ ಭೂಮಿಯ ಗುಣಮಟ್ಟಕ್ಕೆ ಅನುಗುಣವಾಗಿ ಕೃಷಿ ತಜ್ಞರು, ವಿಜ್ಞಾನಿಗಳು, ಸಂಶೋಧನೆ ನಡೆಸಿ, ಇಲ್ಲಿನ ರೈತರು ಯಾವ ಬೆಳೆಗಳನ್ನು ಬೆಳೆಯಬೇಕು. ಕೃಷಿ, ತೋಟಗಾರಿಕೆ ಅಥವಾ ಅರಣ್ಯೀಕರಣ, ಹೈನುಗಾರಿಕೆಯಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು, ಬೆಳೆಗಳ ಮಾದರಿ ಕುರಿತು ರೈತರಿಗೆ ಸಲಹಾತ್ಮಕವಾದ ಪ್ಯಾಕೇಜ್ ಅನ್ನು ಸಿದ್ಧಪಡಿಸಿ, ಅದನ್ನು ಪ್ರತಿಯೊಂದು ಗ್ರಾಮಗಳಿಗೂ ತಲುಪಿಸುವ ಕಾರ್ಯ ಆಗಬೇಕು ಎಂದು ಸೂಚಿಸಿದರು
ಅಂತಿಮವಾಗಿ ಯಾವ ಬೆಳೆ ಬೆಳೆಯುವುದು ಸೂಕ್ತ, ಯಾವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ ಎಂಬುದರ ಅಂತಿಮ ನಿರ್ಧಾರ ರೈತರದೇ ಆಗಿರಬೇಕು. ರೈತರಿಗೆ ಇಂತಹದೇ ಬೆಳೆ ಬೆಳೆಯುವಂತೆ ಒತ್ತಾಯ ಹೇರುವುದು ಸೂಕ್ತ ಹಾಗೂ ಸಮಂಜಸವೂ ಅಲ್ಲ. ಈ ದಿಸೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯ ಇಲಾಖೆಗಳು ತೋಟಗಾರಿಕೆ ವಿವಿ, ಕೃಷಿ ವಿಜ್ಞಾನ ಕೇಂದ್ರದ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು ಕೂಡಲೆ ಕಾರ್ಯ ಆರಂಭಿಸಬೇಕು. ಇದರಲ್ಲಿ ಪ್ರಗತಿಪರ ರೈತರ ಸಲಹೆಗಳಿಗೂ ಆದ್ಯತೆ ನೀಡಬೇಕು. ಸಾಧ್ಯವಾದಲ್ಲಿ ಜಿಲ್ಲೆಯಲ್ಲಿ ರೈತರ ಕ್ಲಬ್‍ಗಳನ್ನು ಪ್ರಾರಂಭಿಸಿದಲ್ಲಿ, ರೈತರೊಂದಿಗೆ ಕೃಷಿ ಚಟುವಟಿಕೆಗಳು, ತಂತ್ರಜ್ಞಾನಗಳ ವಿಚಾರ ವಿನಿಮಯಕ್ಕೆ ಸೂಕ್ತ ವೇದಿಕೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
ಆರ್ಥಿಕ ಸಬಲತೆಗೆ ಉಪಕಸುಬು :
ರೈತರು ಕೇವಲ ಕೃಷಿಯ ಮೇಲೆ ಅವಲಂಬಿತರಾಗದೆ, ಜೊತೆಗೆ ಹೈನುಗಾರಿಕೆ, ಪುಷ್ಪಕೃಷಿ, ಅಣಬೆ ಕೃಷಿ, ಮುಂತಾದ ನಿತ್ಯವೂ ಆದಾಯ ತರಬಲ್ಲ ಉಪಕಸುಬನ್ನು ಕೈಗೊಳ್ಳಲು ರೈತರಿಗೆ ಅಗತ್ಯ ಸಲಹೆ ಹಾಗೂ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳು ದೊರಕಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಬೆಳೆ ಸಾಲ ಪಡೆಯುವ ರೈತರಿಗೆ ಬೆಳೆ ವಿಮೆಗೆ ನೊಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ಬೆಳೆ ವಿಮೆಗೆ ನೊಂದಣಿ ಮಾಡಿಕೊಳ್ಳುವಾಗ ಹಾಗು ವಿಮಾ ಕಂತು ಪಾವತಿಯಾದಾಗ ಸಂಬಂಧಿಸಿದ ರೈತರ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶ ಬರುತ್ತದೆ. ಬಳಿಕ, ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತ ವಿಮೆ ಪರಿಹಾರ ದೊರಕುವ ಕುರಿತು ಯಾವುದೇ ಸಂದೇಶ ದೊರಕುವುದಿಲ್ಲ. ಬೆಳೆ ವಿಮೆ ರೈತರಿಗೆ ದೊರೆಯುತ್ತದೆಯೇ ಅಥವಾ ಇಲ್ಲವೆ ಎಂಬುದರ ಬಗ್ಗೆ ಬ್ಯಾಂಕ್ ಅಧಿಕಾರಿಗಳಾಗಲಿ, ಕೃಷಿ ಅಧಿಕಾರಿಗಳಾಗಲಿ ಮಾಹಿತಿ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ, ಇನ್ನು ವಿಮಾ ಕಂಪನಿಯವರು ಕೈಗೇ ಸಿಗುವುದಿಲ್ಲ. ಹೀಗಾಗಿ ಬೆಳೆ ವಿಮೆ ಬಗ್ಗೆ ರೈತರು ಭ್ರಮನಿರಸನರಾಗುತ್ತಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕೆಲವು ಪ್ರಗತಿಪರ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ರೈತರ ಅಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ, ಜಂಟಿಕೃಷಿ ನಿರ್ದೇಶಕ ಲಕ್ಷ್ಮಣ್ ಕಳ್ಳೆನವರ್, ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓಂಕಾರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
