ಹಾಸ್ಟೆಲ್ ಅವ್ಯವಸ್ಥೆ ಸರಿಪಡಿಸಲು ಎಬಿವಿಪಿ ಆಗ್ರಹ

ದಾವಣಗೆರೆ:

          ರಾಜ್ಯದ ಹಾಸ್ಟೆಲ್‍ಗಳಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ, ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ಇಲ್ಲಿನ ಡಿಆರ್‍ಆರ್ ಪಾಲಿಟೆಕ್ನಿಕ್ ಕಾಲೇಜು ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಯದೇವ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಬಳಿಕ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮುಖಂಡರು, ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳು, ಶಿಕ್ಷಣ ಪಡೆಯಲು ಅನುಕೂಲವಾಗಿರುವ ಹಾಸ್ಟೇಲ್‍ಗಳು ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿವೆ. ಈ ಹಾಸ್ಟೇಲ್‍ಗಳಿಗೆ ಕಾಯಕಲ್ಪ ನೀಡಲು ಯೋಜನೆ ರೂಪಿಸಬೇಕಾದ ಸರ್ಕಾರವು ಅಧಿಕಾರದ ದುರಾಸೆಗಾಗಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರರು.

        ರಾಜ್ಯದ ಎಸ್‍ಸಿ-ಎಸ್‍ಟಿ, ಓಬಿಸಿ ಸೇರಿದಂತೆ ಎಲ್ಲಾ ಹಾಸ್ಟೆಲ್‍ಗಳ ಪರಿಸ್ಥಿತಿ ಅತ್ಯಂತ ದುಸ್ಥಿತಿಯಲ್ಲಿವೆ. ಹೀಗಾಗಿ ಗುಣಮಟ್ಟದ ಆಹಾರ ದೊರೆಯುತ್ತಿಲ್ಲ. ಮೂಲಭೂತ ಸೌಲಭ್ಯಗಳ ಎದುರಿಸುತ್ತಿವೆ. ಹೀಗಾಗಿ ಎಸ್‍ಸಿ-ಎಸ್‍ಟಿ, ಓಬಿಸಿ, ಅಲ್ಪಸಂಖ್ಯಾತ ಹಾಸ್ಟೆಲ್‍ಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು. ವಿದ್ಯಾರ್ಥಿಗಳ ಆಹಾರ ವೆಚ್ಚವನ್ನು ತಿಂಗಳಿಗೆ ಸದ್ಯ ಇರುವ 1400 ರೂ.ಗಳಿಂದ 2 ಸಾವಿರ ರೂ.ಗಳಿಗೆ ಏರಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್‍ಗಳ ಸಂಖ್ಯೆಯಯನ್ನು ಸಹ ಹೆಚ್ಚಿಸಬೇಕು. ಖಾಲಿ ಇರುವ ನಿಲಯ ಪಾಲಕರು ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.

        ಹಾಸ್ಟೆಲ್‍ಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಪೌಷ್ಠಿಕ ಆಹಾರವನ್ನು ಒದಗಿಸಬೇಕು. ಅಲ್ಲದೇ ಸ್ವಚ್ಚತೆ ಕಾಪಾಡಬೇಕು. ಎಲ್ಲಾ ಹಾಸ್ಟೆಲ್‍ಗಳಿಗೂ ಹಾಸಿಗೆ, ಹೊದಿಕೆ ಮತ್ತು ದಿಂಬುಗಳನ್ನು ಒಗದಿಸಬೇಕು. ರಾಜ್ಯದ ಹಾಸ್ಟೆಲ್‍ಗಳಲ್ಲಿ ಗ್ರಂಥಾಲಯ ಕೇವಲ ಗೋಡೆ ಬರಹಗಳಾಗಿವೆ. ತಕ್ಷಣವೇ ಪುಸ್ತಕಗಳನ್ನು ಒದಗಿಸಬೇಕು. ವಿದ್ಯಾರ್ಥಿ ನಿಲಯಕ್ಕೆ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳ ಅಳವಡಿಸಬೇಕು. ವಿಶೇಷವಾಗಿ ಬಾಲಕಿಯರ ಹಾಸ್ಟೆಲ್‍ಗಳಿಗೆ ತಕ್ಷಣವೇ ಅಳವಡಿಸಬೇಕು. ಹಾಸ್ಟೆಲ್ ಆಯ್ಕೆ ಬಯಸಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

        ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ರಾಕೇಶ್, ಜನಾರ್ಧನ್, ಶಶಾಂಕ್, ರಾಮ್‍ಕುಮಾರ್, ಶರತ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap