ಹರಿಹರ:
ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಇಲ್ಲಿನ ಸಿವಿಲ್ ಮತ್ತು ಜೆಎಂಎಪ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿದ್ದರಾಜು ಹೇಳಿದರು.ನಗರದ ಎಂಕೆಇಟಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದುಶ್ಚಟಗಳಿಂದ ಮನಸ್ಸಿನ ಏಕಾಗ್ರತೆ ಭಂಗ ಬರುವುದರಿಂದ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದು, ಬಹುಕಾಲ ನೆನಪಿನಲ್ಲಿ ಉಳಿಯುವುದಿಲ್ಲ ಎಂದರು.
ತಂಬಾಕು ಸೇವನೆ ಮತ್ತಿತರ ದುಶ್ಚಟಗಳು ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತವೆ. ಸದೃಢ ದೇಹ ಮತ್ತು ಮನಸ್ಸು ಇಲ್ಲದಿದ್ದರೆ ಬದುಕಿನಲ್ಲಿ ಯಾವುದೇ ಸಾಧನೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮೊದಲ ಸಲವೆಂಬ ಕುತೂಹಲಕ್ಕಾಗಲಿ, ಸಹವಾಸ ದೋಷದಿಂದಾಗಲಿ ಯಾವುದೇ ದುಶ್ಚಟಕ್ಕೆ ಕೈ ಹಾಕಬಾರದು ಎಂದರು.
ಉಪನ್ಯಾಸ ನೀಡಿದ ವಕೀಲರಾದ ಜಿ.ಹೆಚ್.ಭಾಗೀರಥಿ, ತಂಬಾಕು ಸೇವನೆಯಿಂದಾಗವು ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು 1987 ರಿಂದ ಮೇ.31 ರಂದು ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ. ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಈ ವರ್ಷದ ಘೋಷ ವಾಕ್ಯವಾಗಿದೆ. ಪ್ರತಿ ದಿನ, ಪ್ರತಿ ಕ್ಷಣ ತಂಬಾಕು ತ್ಯಜಿಸಿ, ತಂಬಾಕು ರಹಿತ ವಿಶ್ವ ಸೃಷ್ಟಿಯಾಗಬೇಕಿದೆ ಎಂದರು.
ತಂಬಾಕು ನಿಷೇಧಕ್ಕೆ ಏನೇ ಕಾನೂನು ರೂಪಿಸಿದರೂ ಉತ್ಪಾದಕರು, ವ್ಯಾಪಾರಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ದುಶ್ಚಟಗಳಿಗೆ ದಾಸನಾದ ವ್ಯಕ್ತಿಯ ಆರೋಗ್ಯ ಹಾಳಾಗುವುದಲ್ಲದೆ ಅವರ ಕುಟುಂಬದ ಆರೋಗ್ಯ ಮತ್ತು ಆರ್ಥಿಕತೆಯೂ ಹಾಳಾಗುತ್ತದೆ. ದುಶ್ಚಟ ಮಾಡುವವರಿಂದ ಇಡಿ ಪರಿಸರ ಮಲಿನವಾಗುತ್ತಿದ್ದು, ಇತರ ಅಮಾಯಕರ ಆರೋಗ್ಯ ಪೂರ್ಣ ಬದುಕುವ ಹಕ್ಕಿಗೂ ಚ್ಯುತಿಯಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಆರೋಗ್ಯಾದಿಕಾರಿ ಡಾ|ಚಂದ್ರಮೋಹನ, ಪ್ರತ್ಯಕ್ಷ ಹಾಗೂ ಪರೋಕ್ಷ ಧೂಮಪಾನದಲ್ಲಿ ಸುಮಾರು 4000 ರಾಸಾಯನಿಕಗಳಿದ್ದು, ಕ್ಯಾನ್ಸರ್‍ಕಾರಕ 69 ಪದಾರ್ಥಗಳಿವೆ. ತಂಬಾಕು ಸೇವಿಸುವವರ ಆಯುಶ್ಯ ಕ್ಷೀಣಿಸುವುದಲ್ಲದೆ ಬಾಯಿ, ಅನ್ನನಾಳ, ಶ್ವಾಸಕೋಶಗಳಿಗೆ ಕ್ಯಾನ್ಸರ್, ಲಕ್ವಾ ಹೃದಯಾಥಾಗವಾಗುವ ಸಾಧ್ಯತೆ ಹೆಚ್ಚು ಎಂದರು.
ವಕೀಲರ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಭಾರತದಲ್ಲಿ ತಂಬಾಕು ಸೇವನೆಯಿಂದ ಪ್ರತಿವರ್ಷ 10 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಇವರಲ್ಲಿ ಶೇ.70ರಷ್ಟು 30-65 ವಯಸ್ಸಿನವರಾಗಿದ್ದಾರೆ ಎಂದರು. ಶಾಲೆಯ ಮುಖ್ಯ ಶಿಕ್ಷಕ ಆರ್.ಎನ್.ರಘು ಮಾತನಾಡಿ, ಸಮಾಜದ ಎಲ್ಲರೂ ಜಾಗೃತರಾಗಿ ಮನುಕುಲಕ್ಕೆ ಶಾಪವಾಗಿ ಪರಿಣಮಿಸಿರುವ ತಂಬಾಕು ಉತ್ಪನ್ನಗಳನ್ನು ತ್ಯಜಿಸುವ ಮೂಲಕ ತಂಬಾಕು ರಹಿತ ಬದುಕಿಗೆ ಪಣ ತೊಡಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಹಿರಿಯ ಆರೋಗ್ಯ ಸಹಾಯಕರಾದ ಎಂ.ವಿ.ಹೊರಕೇರಿ, ಕಾರ್ಲಿನ, ಬಿಆರ್‍ಪಿ ಗಿರೀಶ್, ಶಿಕ್ಷಕಿ ರಮಾ ಮತ್ತಿತರರು ಮಾತನಾಡಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
