ಭಾಷೆಯ ಮೇಲೆ ಹಿಡಿತ ಸಾಧಿಸಲು ಪತ್ರಿಕೆಗಳು ಸಹಕಾರಿ:ತುಷಾರ್.ಬಿ.ಹೊಸೂರ್

ಹೊನ್ನಾಳಿ:

    ಭಾಷೆಯ ಮೇಲೆ ಹಿಡಿತ ಸಾಧಿಸಲು ಪತ್ರಿಕೆಗಳು ಸಹಕಾರಿಯಾಗುತ್ತವೆ ಎಂದು ತಹಸೀಲ್ದಾರ್ ತುಷಾರ್.ಬಿ.ಹೊಸೂರ್ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ನಮ್ಮಲ್ಲಿನ ಎಲ್ಲಾ ಕನ್ನಡ ಪತ್ರಿಕೆಗಳೂ ವಾರದ ಒಂದೊಂದು ದಿನವೂ ಒಂದೊಂದು ವಿಶೇಷ ಪುರವಣಿಯನ್ನು ಹೊರತರುತ್ತವೆ. ಅವುಗಳಲ್ಲಿನ ವಿವಿಧ ವಿಷಯಗಳ ವಿವರಣೆಗಳು ನಮ್ಮಲ್ಲಿ ಆಸಕ್ತಿ ಕೆರಳಿಸುವಂತಿರುತ್ತವೆ. ಸಾಹಿತ್ಯಕ, ಸಾಂಸ್ಕೃತಿಕ ಲೋಕದ ಒಳ ಹೊರಹುಗಳನ್ನು ತೆರೆದಿಡುತ್ತವೆ. ಅದರಿಂದ ನಾವು ಪ್ರಭಾವಿತರಾಗಲು ಸಾಧ್ಯ ಎಂದು ತಿಳಿಸಿದರು.

    ಪತ್ರಿಕೆಗಳನ್ನು ಕೊಂಡು ಓದದಿದ್ದರೆ ಪತ್ರಿಕೆಗಳು ಹೇಗೆ ಬೆಳೆಯಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ನಮ್ಮಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.ಎಷ್ಟೇ ಟಿವಿ ಚಾನಲ್‍ಗಳು ಬಂದರೂ, ಸಾಮಾಜಿಕ ಜಾಲತಾಣಗಳಲ್ಲಿ ನಾವು ಎಷ್ಟೇ ವೇಗವಾಗಿ ಸುದ್ದಿಗಳನ್ನು ತಿಳಿದುಕೊಳ್ಳುವ ಸವಲತ್ತು ಬಂದಿದ್ದರೂ ಮುದ್ರಣ ಮಾಧ್ಯಮದಲ್ಲಿ ಪ್ರಕಟಗೊಂಡ ಸುದ್ದಿಗಳನ್ನು ಓದಿದಷ್ಟು ನೆಮ್ಮದಿ ಲಭಿಸುವುದಿಲ್ಲ.

     ಪ್ರತಿ ದಿನ ಬೆಳಿಗ್ಗೆ ಚಹಾ ಸೇವನೆ ಜತೆಗೆ ಪತ್ರಿಕಾ ಓದು ಅಗತ್ಯ. ಒಮ್ಮೊಮ್ಮೆ ಹಬ್ಬಗಳ ದಿನ, “ಪಬ್ಲಿಕೇಷನ್ ಹಾಲಿಡೇ” ದಿನ ಪತ್ರಿಕೆಗಳನ್ನು ತಡಕಾಡುವ ಹಾಗಾಗುತ್ತದೆ ಎಂದು ಪತ್ರಿಕೆಗಳ ವಾಚನಾಭಿರುಚಿಯ ಗೀಳಿನ ಬಗ್ಗೆ ವಿವರಿಸಿದರು.ಸರಕಾರಿ ಸೇವೆಗೆ ಸೇರುವ ಮುನ್ನ ಉತ್ತರ ಕನ್ನಡ ಜಿಲ್ಲೆಯಲ್ಲಿ ತಾವು ಕೆಲ ಕಾಲ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಸೇರಿದಂತೆ ವಿವಿಧ ಸ್ಥಳೀಯ ಪತ್ರಿಕೆಗಳಲ್ಲಿ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡ ತಹಸೀಲ್ದಾರ್ ತುಷಾರ್.ಬಿ.ಹೊಸೂರ್, ಗ್ರಾಮೀಣ ಭಾಗದ ವರದಿಗಾರರ ಬದುಕಿನ ಒಳ ಹೊರಹುಗಳನ್ನು ಬಿಚ್ಚಿಟ್ಟರು.

      ದಾವಣಗೆರೆ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಶಿವಕುಮಾರ್ ಕಣಸೋಗಿ ಪತ್ರಿಕಾ ದಿನಾಚರಣೆ ಕುರಿತು ಉಪನ್ಯಾಸ ನೀಡಿ, ಪತ್ರಕರ್ತರು ನಿರಂತರ ಓದು ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ, ಐಡೆಂಟಿಟಿ ಸಿಗುವುದಿಲ್ಲ. ಈ ಬಗ್ಗೆ ಪತ್ರಕರ್ತ ಎಚ್ಚರ ವಹಿಸಬೇಕು ಎಂದು ಹೇಳಿದರು.

       ಒಬ್ಬ ಸಾಲು ಮರದ ತಿಮ್ಮಕ್ಕನ ಬಗ್ಗೆ ಗ್ರಾಮೀಣ ವರದಿಗಾರರೊಬ್ಬರು ಬರೆದ ಸುದ್ದಿಯ ಪರಿಣಾಮ ಇಂದು ಆ ಮಹಿಳೆ ದೇಶದ ರಾಷ್ಟ್ರಪತಿಗಳನ್ನು ಆಶೀರ್ವದಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇದು ಪತ್ರಕರ್ತನ ಹಿರಿಮೆ ಹಾಗೂ ಪತ್ರಿಕೆಯ ಕೊಡುಗೆ ಎಂದು ತಿಳಿಸಿದರು. ಅದೇ ರೀತಿ ರಾಮನಗರ ಜಿಲ್ಲೆ ಒಬ್ಬ ಪ್ರಗತಿಪರ ರೇಷ್ಮೆ ಬೆಳೆಗಾರನನ್ನು ಗುರುತಿಸಿ ಲೇಖನ ಬರೆದ ಬಳಿಕ ಆತ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ ಬಗ್ಗೆಯೂ ವಿವರಿಸಿದ ಅವರು ಪತ್ರಿಕೆಗಳು ಸದಾ ಕಾಲ ಸಮಾಜಮುಖಿಯಾಗಿರಬೇಕು ಎಂದು ತಿಳಿಸಿದರು.
ತಾಲೂಕು ಮಟ್ಟದಲ್ಲಿನ ಅರೆಕಾಲಿಕ ವರದಿಗಾರರು ಹಾಗೂ ಗ್ರಾಮೀಣ ಪ್ರದೇಶಗಳ ಪತ್ರಕರ್ತರು ತಮ್ಮ ವೃತ್ತಿಯೊಂದಿಗೆ ಯೂಟ್ಯೂಬ್ ಚಾನಲ್ ಸ್ಥಾಪನೆ ಮತ್ತು ನ್ಯೂಸ್ ಆಪ್‍ಗಳನ್ನು ಅಳವಡಿಸಿಕೊಳ್ಳುವ ಮೂಲಕ ಪತ್ರಿಕೋದ್ಯಮದಲ್ಲಿ ಹೊಸ ಆಯಾಮಗಳಿಗೆ ತೆರೆದುಕೊಳ್ಳುವತ್ತ ಚಿತ್ತ ಹರಿಸಬೇಕು ಎಂದು ಹೇಳಿದರು.

      ಪಪಂ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಮಾತನಾಡಿ, ಕನ್ನಡ ಪತ್ರಿಕೆಗಳ ಓದಿನಿಂದ ಪ್ರಸಕ್ತ ವಿದ್ಯಮಾನಗಳ ಅರಿವು ಲಭಿಸುತ್ತದೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳಲ್ಲಿ ವಾಚನಾಭಿರುಚಿ ಬೆಳೆಸಬೇಕು ಎಂದು ತಿಳಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಮಾತನಾಡಿ, 1836ರಲ್ಲಿ ಹರ್ಮನ್ ಮೋಗ್ಲೆ ಧರ್ಮಪ್ರಚಾರಕ್ಕಾಗಿ ಪ್ರಾರಂಭಿಸಿದ “ಮಂಗಳೂರು ಸಮಾಚಾರ” ಪತ್ರಿಕೆ ಕನ್ನಡದ ಮೊದಲ ದಿನಪತ್ರಿಕೆ ಎಂಬ ಹೆಗ್ಗಳಿಕೆ ಪಡೆದಿದೆ. ಆ ಬಳಿಕ ಸ್ವಾತಂತ್ರ್ಯ ಗಳಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಪತ್ರಿಕಾ ಮಾಧ್ಯಮ ಬಳಕೆಯಾದ ಬಗ್ಗೆ ವಿವರಿಸಿದರು.

        ಪತ್ರಕರ್ತರ ಸಂಘ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟ್ಟಾಗಿ ಹೋರಾಡುವ ಮೂಲಕ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಹೊನ್ನಾಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಸಿ. ಮೃತ್ಯುಂಜಯ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ನ್ಯಾಮತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಎಚ್.ಎಂ. ಸದಾಶಿವಯ್ಯ, ಪಿಎಸ್‍ಐ ತಿಪ್ಪೇಸ್ವಾಮಿ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ಮುಖಂಡರು, ತಾಲೂಕಿನ ಎಲ್ಲಾ ಪತ್ರಕರ್ತರೂ ಉಪಸ್ಥಿತರಿದ್ದರು. ಸತತ ನಲವತ್ತು ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ಹೊನ್ನಾಳಿಯ ಕೆಂಚಪ್ಪ ಮತ್ತು ನ್ಯಾಮತಿಯ ಶಿವರುದ್ರಯ್ಯ ಹಿರೇಮಠ್ ಅವರನ್ನು ತಹಸೀಲ್ದಾರ್ ತುಷಾರ್.ಬಿ.ಹೊಸೂರ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link