ಸರ್ಕಾರಿ ಭೂಮಿ ಒತ್ತುವರಿ ತೆರವು ಗ್ರಾಮಸ್ಥರ ಸಂಚಾರ ರಸ್ತೆಗೆ ಅನುವು

ಕುಣಿಗಲ್

      ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಸೊಮೇದೇವರಪಾಳ್ಯ ಗ್ರಾಮದ ಸ.ನಂ.13ರ ಗ್ರಾಮಸ್ಥರ ಹಾದಿ ಹಾಗೂ ಗೋಮಾಳವನ್ನು ಗ್ರಾಮದ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ದೂರಿನ ಮೇರೆಗೆ ಒತ್ತುವರಿದಾರರ ವಿರೋಧಕ್ಕೆ ಸೆಡ್ಡೊಡೆದ ತಹಸೀಲ್ದಾರ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸರ್ಕಾರಿ ಭೂಮಿಯನ್ನ ವಶಕ್ಕೆ ಪಡೆದಿದ್ದಾರೆ.

      ಸದರಿ ಗ್ರಾಮದ ಪಟ್ಟಭದ್ರ ವ್ಯಕ್ತಿಗಳು ಹಲವು ವರ್ಷಗಳಿಂದ ಅಕ್ರಮವಾಗಿ ವಶಪಡಿಸಿಕೊಂಡು ತಮ್ಮ ವಶದಲ್ಲಿಟ್ಟುಕೊಂಡ ಪರಿಣಾಮ ಗ್ರಾಮಸ್ಥರ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರನ್ನು ಪರಿಗಣಿಸಿ ಸರ್ಕಾರಿ ಭೂಮಿಯನ್ನು ತಹಸೀಲ್ದಾರ್ ನಾಗರಾಜ್ ಪೊಲೀಸ್ ಬಂದೋಬಸ್ತ್‍ನಲ್ಲಿ ವಶಕ್ಕೆ ಪಡೆದು ನೂತನವಾಗಿ ರಸ್ತೆ ನಿರ್ಮಿಸಲು ಅನುವುಮಾಡಿದ್ದಾರೆ.

     ಗೋಮಾಳದಲ್ಲಿ ಇರುವ ಕಲ್ಯಾಣಿ ಮತ್ತು ಅದರ ಸುತ್ತಲಿನ ಪ್ರದೇಶ ನಮಗೆ ಸೇರಿದ್ದು ಎಂದು ನಿಂಗೇಗೌಡ , ಹೇಮ ಸೇರಿದಂತೆ ಕೆಲವರು ಜೆಸಿಪಿಯನ್ನು ತಡೆದು ಪ್ರತಿಭಟಿಸಿದರು. ಇದನ್ನು ಪ್ರಶ್ನಿಸಲು ಹೋಗಿದ್ದ ಲೋಕೇಶ್ ಎಂಬುವರಿಗೆ ಹೇಮ ಎಂಬಾಕೆ ಚಾಕುವಿನಿಂದ ಗಾಯಗೊಳಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದಂತೆ ಕುಣಿಗಲ್ ಸಿಪಿಐ ಅಶೋಕ್ ನೇತೃತ್ವದಲ್ಲಿ ಪಿಎಸ್ಸೈ ಪುಟ್ಟೇಗೌಡ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗಲಭೆಯನ್ನು ಹತೋಟಿಗೆ ತಂದರು.

      ನಿಂಗೇಗೌಡ ನಾವು ಪುರಾತನ ಕಾಲದಿಂದ ಅನುಭವದಲ್ಲಿ ಇದ್ದೇವೆ. ಆದ್ದರಿಂದ ಈ ಭಾಗ ನಮ್ಮ ಸ್ವಂತದ್ದು ಎಂದು ತಹಸೀಲ್ದಾರ್ ಹಾಗೂ ಪೊಲೀಸರ ಮೇಲೆ ವಾಗ್ವಾದಕ್ಕೆ ಇಳಿದರು.

      ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಎಸ್ ನಾಗರಾಜ್ ಜಿಲ್ಲಾಧಿಕಾರಿಗಳ ಆದೇಶದಂತೆ ರಸ್ತೆಯನ್ನು ಮಾಡಲು ಅವಕಾಶವಿದೆ ಅದನ್ನು ತಡೆಯಬೇಡಿ ಎಂದು ಮನವಿ ಮಾಡಿದರೂ ಸ್ಪಂದಿಸದ ಕಾರಣ ಸರ್ಕಾರಿ ಕೆಲಸಕ್ಕೆ ತೊಂದರೆ ನೀಡುವ ವ್ಯಕ್ತಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದರು.

      ಸರ್ಕಾರಿ ಜಮೀನು ನನ್ನದು ಎಂದು ಹೇಳುವ ನಿಂಗೇಗೌಡ ಎಂಬುವರ ಬಳಿ ಯಾವುದೇ ದಾಖಲಾತಿಗಳಿಲ್ಲ. ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂಬುದನ್ನು ಮನಗಂಡ ತಹಸೀಲ್ದಾರ್ ಎಸ್.ನಾಗರಾಜ್ ರಸ್ತೆ ನಿರ್ಮಿಸದೆ ಕದಲುವುದಿಲ್ಲ ಎಂದು ಸ್ಥಳದಲ್ಲಿ ಪೊಲೀಸರೊಂದಿಗೆ ಟಿಕಾಣಿ ಹೂಡಿದರು.

       ಜೆಸಿಪಿಗೆ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರ ನೆರವಿನಿಂದ ಹೊರಹಾಕಿ ರಸ್ತೆ ನಿರ್ಮಾಣ ಮಾಡಲಾಯಿತು. ಇಷ್ಟಾದರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ನಿಂಗೇಗೌಡ ಎಂಬ ವ್ಯಕ್ತಿ ರಸ್ತೆಯನ್ನು ಮುಚ್ಚುತ್ತಿದ್ದು ಅಲ್ಲಿದ್ದ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.

      ಸರ್ವೆ ನಂ.13 ರ ಜಮೀನು ಮೂಲತಃ ಸರ್ಕಾರಿ ಜಮೀನಾಗಿದ್ದು ಇದರಲ್ಲಿ ಓಡಾಡಲು ರಸ್ತೆ ಅವಶ್ಯಕತೆ ಇರುವುದು ಕಂಡುಬಂದಿರುವುದರಿಂದ ತಹಸೀಲ್ದಾರ್ ಖುದ್ದು ಸ್ಥಳ ಪರಿಶೀಲನೆ ನಡೆಸಿ ನಂತರ ದಾರಿಯನ್ನು ಕುಲ್ಲಾ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿದ್ದು ಈ ಸಂಬಂಧ ತಹಸೀಲ್ದಾರ್, ಕಂದಾಯ ನಿರೀಕ್ಷಕರಾದ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಯೊಂದಿಗೆ ಒತ್ತುವರಿ ತೆರವುಗೊಳಿಸಿದರು.

      ಅಕ್ರಮವಾಗಿ ಭೂಮಿ ಪಡೆದ ನೀವು ಯಾವುದೇ ದಾಖಲಾತಿಗಳು ನಿಮ್ಮ ಬಳಿ ಇಲ್ಲದಿದ್ದರೂ ಅನಗತ್ಯವಾಗಿ ಗೊಂದಲ ಉಂಟುಮಾಡುತ್ತಾ ಇರುವುದು ಸರಿಯಲ್ಲ ಎಂದು ಮನವೊಲಿಸಲು ಪ್ರಯತ್ನಿಸಿದರು. ಒಪ್ಪದ ಕಾರಣ ನಿಂಗೇಗೌಡನನ್ನು ಪೆÇಲೀಸರು ಬಂಧಿಸಲು ಮುಂದಾದಾಗ ಸ್ಥಳೀಯರ ಮನವಿ ಮೇರೆಗೆ ವಾಪಸ್ ಬಿಡಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap