ಶಿಕ್ಷಕ ಸ್ನೇಹಿ ವರ್ಗಾವಣೆಗೆ ಚಿಂತನೆ : ಸಚಿವ ಸುರೇಶ್ ಕುಮಾರ್

ಕೊರಟಗೆರೆ
     ಶಿಕ್ಷಕರ ವರ್ಗಾವಣೆ ಅತ್ಯಂತ ಕ್ಲಿಷ್ಟಕರ ಸಮಸ್ಯೆಯಾಗಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಕಾಯ್ದೆ ಜಾರಿ ಮಾಡುವ ಉದ್ದೇಶ ಸರ್ಕಾರ  ಹೊಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸುರೇಶ್‍ಕುಮಾರ್ ತಿಳಿಸಿದರು.
     ಅವರು ತಾಲ್ಲೂಕು ಬಿಇಓ ಕಚೇರಿಗೆ   ಭೇಟಿ ನೀಡಿ, ನಂತರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣ ಇಲಾಖೆ ಅತಿ ದೊಡ್ಡ ಇಲಾಖೆಯಾಗಿದೆ.  ಇಲಾಖೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಶಿಕ್ಷಕರಿದ್ದು, ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
     ಶೇ. 70 ರಷ್ಟು ಮಹಿಳಾ ಶಿಕ್ಷಕಿಯರನ್ನು ಹೊಂದಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯ ವರ್ಗಾವಣೆ ನೀತಿಯಲ್ಲಿ ಶಿಕ್ಷಕರು ದ್ವಿಮನಸ್ಥಿತಿ ಹೊಂದಿದ್ದಾರೆ.  ಗ್ರಾಮೀಣ ಭಾಗದವರು ನಗರ ಪ್ರದೇಶಗಳಿಗೆ ಹೋಗುವ ಇಚ್ಚೆ ಹೊಂದಿದ್ದರೆ, ನಗರ ಪ್ರದೇಶದವರು ವೃತ್ತಿ ಕಡೆಯ  ಸೇವಾವಧಿಯಲ್ಲಿ ಗ್ರಾಮೀಣ ಪ್ರದೇಶಕ್ಕೆ  ಹೋಗಲು ಇಷ್ಟ  ಪಡುತ್ತಿಲ್ಲ. ಈಗಾಗಲೆ ಸುಮಾರು 10 ಸಾವಿರ ಶಿಕ್ಷಕರ  ಜೊತೆ ಇದರ ಬಗ್ಗೆ ಸಮಾಲೋಚನೆ ಹಾಗೂ ಸಂವಾದ ನಡೆಸಲಾಗಿದೆ.  ಮುಂದಿನ ದಿನಗಳಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಕಾಯ್ದೆ ಜಾರಿ ತರುವ ಉದ್ದೇಶ ಹೊಂದಲಾಗಿದೆ ಎಂದರು.
      ಈಗಾಗಲೆ ಜಾರಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅವರ ಅವರ ಕ್ಷೇತ್ರಗಳಿಗೆ ಹೆಚ್ಚಾಗಿ ನೀಡುವಂತೆ ಶಾಸಕರುಗಳಿಂದ ಒತ್ತಡ ಬರುತ್ತಿದೆ. ಮತ್ತೊಂದು ಕಡೆ ಕನ್ನಡ ಸಂಘಟನೆಗಳು, ಸಾಹಿತಿಗಳಿಂದ ಕಡ್ಡಾಯ ಕನ್ನಡ ಮಾಧ್ಯಮ ಕಲಿಕೆಗೆ ಒತ್ತಾಯಿಸುತ್ತಿದ್ದಾರೆ. ಸಾರ್ವಜನಿಕರು ಮತ್ತು ಗ್ರಾಮೀಣ ಭಾಗದ ಬಹುತೇಕ ಜನರು ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಸರ್ಕಾರಿ ಶಾಲೆಯಲ್ಲೂ ಸಹ ಇಂಗ್ಲೀಷ್ ಮಾಧ್ಯಮಕ್ಕೆ ಒತ್ತು ನೀಡಬೇಕು.
      ನಮ್ಮ ಮಕ್ಕಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲೀಷ್ ಶಿಕ್ಷಣ ದಿಂದ ವಂಚಿತರಾಗುತ್ತಿದ್ದಾರೆ. ಯಾರು ಹೋರಾಟ ಮಾಡುತ್ತಿದ್ದಾರೊ  ಬಹುತೇಕ ಅವರ ಮಕ್ಕಳೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು  ಆರೋಪಿಸುತ್ತಿದ್ದಾರೆ.  ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
     ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಮಕ್ಕಳು ಪಠ್ಯ ಪುಸ್ತಕಗಳೂ, ಸಮವಸ್ತ್ರಗಳು ಕಳೆದುಕೊಂಡಿದ್ದು,  ಕೂಡಲೆ ಅವರಿಗೆ ಪಠ್ಯಪುಸ್ತಕಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು. ಪ್ರವಾಹದಿಂದ ತರಗತಿಗಳಿಗೆ ಹಾಜರಾಗದೆ ಇದ್ದಲ್ಲಿ ಮುಂಬರುವ ಪರೀಕ್ಷೆ ಬರೆಯಲು ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದು.  ಪ್ರತಿ ವರ್ಷವೂ ಶಾಲೆ ಪ್ರಾರಂಭವಾಗುವ ದಿನಗಳಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಶಾಲೆ ಪ್ರಾರಂಭವಾಗುವ ದಿನದಂದೆ ಇವುಗಳನ್ನು ಪೂರೈಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು. 
   
     ವಿದ್ಯಾರ್ಥಿಗಳಿಗೆ ನೀಡುವ ಸೈಕಲ್ ಕಳಪೆ ಮಟ್ಟದ್ದು ಎಂದು ಆರೋಪ ಕೇಳಿಬರುತ್ತಿದ್ದು, ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಸೈಕಲ್‍ಗಳನ್ನು ವಿತರಣೆ ಮಾಡುವ ಗುಂಪಿನಲ್ಲಿ ಶೇ.10 ಭಾಗವನ್ನು ಸ್ಥಳೀಯ ಹತ್ತಿರದ ಎಂಜಿನಿಯರಿಂಗ್  ಕಾಲೇಜಿನ  ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಗುಣ ಮಟ್ಟ ಪರೀಕ್ಷಿಸಲಾಗುವುದು ಎಂದರು. 
      ಶಿಕ್ಷಕರಂತೆ  ಮಕ್ಕಳೊಂದಿಗೂ ಸಹ ಶಿಕ್ಷಣ ಮತ್ತು ಹಕ್ಕುಗಳ ಬಗ್ಗೆ 58 ಶಾಲೆಗಳ 300 ಮಕ್ಕಳೊಂದಿಗೆ ಮಾತನಾಡಿದ್ದು, ಅವರಿಗೂ ಸಹ ಕಲಿಕಾ ಪರಿಸರವನ್ನು ನಿರ್ಮಿಸಿ ಕೊಡಬೇಕಿದೆ. ಗುಣಾತ್ಮಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಅತಿ ಹೆಚ್ಚಾಗಿದೆ.  ಅವರ ಪರಿಶ್ರಮ ಅಗತ್ಯತೆ ಶಾಲೆಗಳಿಗಿದೆ. ಇದಕ್ಕಾಗಿಯೇ ಇಂದು ರಾಜ್ಯದ ಗಡಿ ಭಾಗದ ಪಾವಗಡ  ತಾಲ್ಲೂಕಿನ ಕಡೆಯ ಗಡಿ ಶಾಲೆಗಳಿಗೆ  ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಸಮಾಲೋಚಿಸಿ ಸಮಸ್ಯೆಗಳನ್ನು ಅರಿತುಕೊಳ್ಳಲಾಗುವುದು.
     ಕೆಲವು ಗ್ರಾಮಗಳಲ್ಲಿ ಶಾಲೆಗಳ ಕೊಠಡಿಗಿಂತ ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದು,  ಆ ಮಕ್ಕಳು, ಮಕ್ಕಳ ಪರಿಸರದಿಂದ ವಂಚಿತರಾಗುತ್ತಿದ್ದು ಅಂತಹ ಶಾಲೆಗಳನ್ನು ಗುರುತಿಸಿ ಹತ್ತಿರದ ಶಾಲೆಗಳಿಗೆ ಕೊಂಡೊಯ್ಯುವ ವ್ಯವಸ್ಥೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
 
     ಈ ಸಂದರ್ಭದಲ್ಲಿ ತಹಸೀಲ್ದಾರ್ ಗೋವಿಂದರಾಜು, ಬಿಇಓ ಗಂಗಾಧರ್, ಲೋಕೋಪಯೋಗಿ ಎಇಇ ಗಂಗಾಧರಕೊಡ್ಲಿಯವರ್, ಬಿಆರ್‍ಸಿ ಸುರೇಂದ್ರನಾಥ್, ಪ್ರಾಂಶುಪಾಲ ನಾಗರಾಜು,  ಪ.ಪಂ.ಸದಸ್ಯ ಪ್ರದೀಪ್ ಕುಮಾರ್, ಮುಖಂಡರುಗಳಾದ ತಿಮ್ಮಜ್ಜ, ವಿಜಯ್‍ಕುಮಾರ್, ಪ್ರಕಾಶ್ ರೆಡ್ಡಿ, ಸುಶೀಲಮ್ಮ, ಚಂದ್ರಣ್ಣ, ಯುವಮೋರ್ಚಾ ಅಧ್ಯಕ್ಷ ಗುರುದತ್,  ಗೋಪಿನಾಥ್, ಉಲ್ಲಾಸ್, ನಂಜುಂಡ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link