22 ನೇ ವಾರ್ಡ್:ಮುಗಿಯದ ಅಭ್ಯರ್ಥಿ ಆಯ್ಕೆಗೆ ಕಸರತ್ತು

ತುಮಕೂರು

       ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 22 ನೇ ವಾರ್ಡ್ (ಬಟವಾಡಿ)ನಲ್ಲಿ ತೆರವಾಗಿರುವ ಕಾರ್ಪೊರೇಟರ್ ಸ್ಥಾನಕ್ಕೆ ಇದೇ ಮೇ 29 ರಂದು ಉಪಚುನಾವಣೆ ನಡೆಯಲಿದ್ದು, ಮೂರು ಪ್ರಮುಖ ಪಕ್ಷಗಳಲ್ಲೂ ಇನ್ನೂ ಅಭ್ಯರ್ಥಿ ಆಯ್ಕೆ ಅಂತಿಮವಾಗಿಲ್ಲ. ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಿವೆ.

        ಕಳೆದ ವರ್ಷ ತುಮಕೂರು ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆಯಲ್ಲಿ 22 ನೇ ವಾರ್ಡ್‍ನಿಂದ ಮಾಜಿ ಮೇಯರ್ ಎಚ್.ರವಿಕುಮಾರ್ (ಜೆಡಿಎಸ್) ವಿಜೇತರಾಗಿದ್ದರು. ಆಯ್ಕೆಗೊಂಡ ಹೊಸತರಲ್ಲೇ ಅವರು ಹತ್ಯೆಗೊಳಗಾದ ಹಿನ್ನೆಲೆಯಲ್ಲಿ ಆ ವಾರ್ಡ್‍ನ ಕಾರ್ಪೊರೇಟರ್ ಸ್ಥಾನವು ತೆರವಾಯಿತು. ಇದೀಗ ಆ ಒಂದು ಸ್ಥಾನವನ್ನು ಭರ್ತಿ ಮಾಡಲು ಮೇ 29 ರಂದು ಉಪಚುನಾವಣೆ ನಿಗದಿಯಾಗಿದೆ.

          ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ. ಅಷ್ಟರಲ್ಲಿ ಪಕ್ಷಗಳ ಅಭ್ಯರ್ಥಿಗಳು ಯಾರೆಂಬುದು ಪ್ರಕಟವಾಗಬೇಕಾಗಿದೆ. ಆದರೆ ಈವರೆಗೆ ಈ ಮೂರೂ ಪ್ರಮುಖ ಪಕ್ಷಗಳಿಗೆ ತಮ್ಮ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲು ಸಾಧ್ಯವಾಗಿಲ್ಲ.

        “ಜೆಡಿಎಸ್‍ನಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಬೆಳ್ಳಿ ಲೋಕೇಶ್ ಮತ್ತು ಶ್ರೀನಿವಾಸ್ ಅವರ ನಡುವೆ ಮಧ್ಯ  ಟಿಕೆಟ್‍ಗಾಗಿ ತೀವ್ರ ಪೈಪೋಟಿ ನಡೆದಿದೆ. ಈ ಇಬ್ಬರಲ್ಲಿ ಒಬ್ಬರನ್ನು ಪರಿಗಣಿಸುವ ಅಧಿಕಾರ ಸಚಿವ ಎಸ್.ಆರ್.ಶ್ರೀನಿವಾಸ್ ಅವರ ಮೇಲಿದೆ. ಈ ವಿಷಯದಲ್ಲಿ ಸಚಿವರ ತೀರ್ಮಾನವೇ ಅಂತಿಮ’` ಎಂಬುದು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿರುವ ಮಾತುಗಳು.

           ಬಿಜೆಪಿಯಲ್ಲೂ ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. “ಕಳೆದ ಬಾರಿ ಇದೇ ವಾರ್ಡ್‍ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಂದೀಪ್ ಗೌಡ 800 ಕ್ಕೂ ಅಧಿಕ ಓಟುಗಳನ್ನು ಪಡೆದುಕೊಂಡಿದ್ದರು. ಅವರೇ ಈ ಉಪಚುನವಣೆಯಲ್ಲೂ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರಲ್ಲದೆ ಇನ್ನೂ ಇಬ್ಬರು-ಮೂವರು ಟಿಕೆಟ್ ಕೇಳುತ್ತಿದ್ದು, ಮೇ 14 ರಂದು ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ನೇತೃತ್ವದಲ್ಲಿ ನಡೆಯುವ ಬಿಜೆಪಿ ಸಭೆಯಲ್ಲಿ ಯಾರಿಗೆ ಟಿಕೆಟ್ ಎಂಬುದು ಖಚಿತವಾಗಲಿದೆ” ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

        ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಅಂತಹ ಡಿಮ್ಯಾಂಡ್ ಇರುವಂತೆ ಕಂಡುಬರುತ್ತಿಲ್ಲ. “ನಾರಾಯಣ ಗೌಡರಿಗೆ ಟಿಕೆಟ್” ಎಂಬ ಸುದ್ದಿ ಹರಡಿದೆಯಾದರೂ, ಇನ್ನೂ ಖಚಿತವಾಗಿಲ್ಲ. “ಈವರೆಗೆ ಎಂಟು-ಹತ್ತು ಆಕಾಂಕ್ಷಿಗಳು ಟಿಕೆಟ್ ಬೇಕೆಂದು ಮೌಖಿಕವಾಗಿ ಕೇಳಿದ್ದಾರೆ. ಆದರೆ ಕೇವಲ ನಾಲ್ಕು ಜನರು ಮಾತ್ರ ಅರ್ಜಿ ಪಡೆದುಕೊಂಡಿದ್ದು, ಆ ಬಳಿಕ ಯಾರೂ ಪಕ್ಷವನ್ನು ಮತ್ತೆ ಸಂಪರ್ಕಿಸಿಲ್ಲ” ಎಂಬುದು ಕಾಂಗ್ರೆಸ್ ಮುಖಂಡರೊಬ್ಬರ ಪ್ರತಿಕ್ರಿಯೆ. ಇಲ್ಲೂ ಸಹ ಮೇ 14 ರಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮತ್ತು ಇತರ ಮುಖಂಡರ ನೇತೃತ್ವ ಸಭೆ ನಡೆಯಲಿದ್ದು, ಅಭ್ಯರ್ಥಿ ಬಗ್ಗೆ ನಿರ್ಧಾರಿಸಲಾಗುವುದು ಎಂದು ಹೇಳಲಾಗುತ್ತಿದೆ.

          ಈ ಮಧ್ಯ ಇದೇ ವಾರ್ಡ್‍ನ ಮಾಜಿ ನಗರಸಭೆ ಸದಸ್ಯ ಸತೀಶ್ (ಟೋಪಿ) ಸಹ ಈ ಬಾರಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದು, ತಮ್ಮದೇ ಬೆಂಬಲಿಗರ ಜೊತೆ ಯಾವುದಾದರೊಂದು ಪಕ್ಷದ ಟಿಕೆಟ್ ಪಡೆದುಕೊಳ್ಳಲು ಯತ್ನಿಸುತ್ತಿರುವುದು ಗುಟ್ಟೇನಲ್ಲ. ಒಂದು ವೇಳೆ ಪಕ್ಷದ ಟಿಕೆಟ್ ಲಭಿಸದಿದ್ದರೆ, ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆಂಬ ಮಾತು ಕೇಳಿಬರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap