ಶಿರಾ
ಪ್ರಕೃತಿಯಲ್ಲಿ ದೇವರನ್ನು ಕಂಡ ಕುವೆಂಪುರವರ ಆಧ್ಯಾತ್ಮಿಕತೆ, ವೈಚಾರಿಕತೆ, ದೇಶಪ್ರೇಮ, ಪ್ರಕೃತಿ ಪ್ರೇಮಗಳೆಲ್ಲವೂ ಅವರ ಸಾಹಿತ್ಯದಲ್ಲಿ ಮೇಳೈಸಿಕೊಂಡಿವೆ. ಜಗದ ಕವಿ ಯುಗದ ಕವಿ ಎಂದು ಬೇಂದ್ರೆಯಿಂದ ಕರೆಸಿಕೊಂಡ ಕುವೆಂಪುರವರು ದಾರ್ಶನಿಕರು ಹೌದು. ದೇವರನ್ನು ಕಾಣಲು ದೇವಾಲಯ, ಮಸೀದಿ, ಚರ್ಚ್‍ಗಳಿಗೆ ಹೋಗಬೇಕಾಗಿಲ್ಲ. ಆತ್ಮ ಪರಿಶುದ್ಧಿಯಿಂದ ದೇವರನ್ನು ಕಾಣಲು ಸಾಧ್ಯ ಎಂದು ಇಡೀ ಜಗತ್ತಿಗೆ ಸಾರಿದ ಕವಿ ಕುಂಪು ಎಂದು ಪ್ರೊ||ಕೆ.ಹನುಮಂತರಾಯಪ್ಪ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಕುವೆಂಪು ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿರಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆಯವರು ‘ಕುವೆಂಪುರವರ ರಾಮಾಯಣ ದರ್ಶನಂ’ ಕೃತಿ ಕುರಿತು ಉಪನ್ಯಾಸ ನೀಡುತ್ತಾ ವಾಲ್ಮೀಕಿ ರಾಮಾಯಣದಲ್ಲಿ ಕಾಣದ ಅನೇಕ ಅಂಶಗಳು ಶ್ರೀ ರಾಮಾಯಣ ದರ್ಶನಂನಲ್ಲಿ ಕಾಣಸಿಗುತ್ತವೆ. ಅದಕ್ಕೆ ಉದಾಹಣೆಯಾಗಿ ಮಂಥರೆ ಮತ್ತು ಊರ್ಮಿಳೆಯ ಪಾತ್ರಗಳೇ ಸಾಕ್ಷಿ. ಮೂಲ ರಾಮಾಯಣದ ಮಂಥರೆಯ ಪಾತ್ರಕ್ಕಿಂತ ಭಿನ್ನವಾಗಿ ಚಿತ್ರಿಸಿ, ಮಮತೆಯ ಸುಳಿ ಮಂಥರೆಯೆಂದು ಕರೆದಿದ್ದಾರೆ. ಊರ್ಮಿಳೆಯನ್ನು ತ್ಯಾಗಮಯಿಯಾಗಿ ಚಿತ್ರಿಸಿದ್ದಾರೆ.
ಗುಬ್ಬಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ. ಗಂಗಾಧರಯ್ಯನವರು ‘ಕುವೆಂಪುರವರ ವಿಚಾರ ಸಾಹಿತ್ಯ’ ಕುರಿತು ಉಪನ್ಯಾಸ ನೀಡುತ್ತಾ ಯುವಕರಿಗೆ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆಕೊಟ್ಟ ಕುವೆಂಪುರವರು ಮಾನವನ ಬದುಕಿಗೆ ಮಾರಕವಾದ ಮೌಢ್ಯಗಳನ್ನು ಬಿಟ್ಟು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಯೋಚಿಸಿದಾಗ ಮಾತ್ರ ಸಮಾಜವು ಪ್ರಗತಿಯತ್ತ ಸಾಗಲು ಸಾಧ್ಯ. ಯಾವುದೋ ಕಾಲದಲ್ಲಿ ಯಾರೋ ಹೇಳಿದ ಶಾಸ್ತ್ರಗಳು ಆ ಕಾಲಕ್ಕೆ ಸರಿಹೊಂದಬಹುದು. ಆ ಶಾಸ್ತ್ರಗಳು ಈ ಕಾಲಕ್ಕೆ ಪ್ರಸ್ತುತವೇ ಎಂಬುದನ್ನು ತಿಳಿಯಬೇಕು. ಅವು ಸ್ವಸ್ಥ ಸಮಾಜಕ್ಕೆ ಮಾರಕವಾಗಿದ್ದರೆ ಅವನ್ನು ಮುಲಾಜಿಲ್ಲದೆ ತಿರಸ್ಕರಿಸಿದರೆ ಮಾತ್ರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಡೇನಹಳ್ಳಿ ಟಿ. ಗೋವಿಂದಯ್ಯನವರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಪಿ.ಹೆಚ್. ಮಹೇಂದ್ರಪ್ಪನವರು ಮಾತನಾಡಿದರು. ತಾಲ್ಲೂಕು ಕಸಾಪದ ಅಧ್ಯಕ್ಷರಾದ ಡಾ.ಎನ್. ನಂದೀಶ್ವರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಚಂಗಾವರದ ನಿವೃತ್ತ ಶಿಕ್ಷಕರಾದ ಕೃಷ್ಣಪ್ಪನವರು ಪ್ರಾರ್ಥನೆ ಮಾಡಿದರೆ, ರಕ್ಷ್ಮಿಕುಮಾರ್‍ರವರು ಕುವೆಂಪು ಗೀತೆಗಳನ್ನು ಹಾಡಿದರು. ದ್ವಾರನಕುಂಟೆ ಲಕ್ಷಣ್‍ರವರು ಸ್ವಾಗತಿಸಿದರೆ, ಕಸಾಪ ಕಾರ್ಯದರ್ಶಿ ಕೆ.ಎಸ್. ಚಿದಾನಂದರವರು ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ