ದಾವಣಗೆರೆ:
ಪಾಲಿಕೆಯ 270 ಜನ ಗುತ್ತಿಗೆ ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು ಇಲ್ಲಿನ ಪಾಲಿಕೆ ಆವರಣದಲ್ಲಿ ಶನಿವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಪಾಲಿಕೆ ಆವರಣದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ, ಜಿಲ್ಲಾ ಮುಖಂಡರಾದ ಎನ್.ನೀಲಗಿರಿಯಪ್ಪ ಇತರರ ನೇತೃತ್ವದಲ್ಲಿ ಅನಿರ್ಧಿಷ್ಟಾವದಿ ಧರಣಿ ಸತ್ಯಾಗ್ರಹ ಆರಂಭಿಸಿದ ಪೌರ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡ ಎಲ್.ಎಂ.ಹನುಮಂತಪ್ಪ, ಪಾಲಿಕೆಯಲ್ಲಿ 270 ಜನ ನೇರ ಪಾವತಿ ಪೌರ ಕಾರ್ಮಿಕರ ಕೆಲಸ ಕಾಯಂಗೊಳಿಸಬೇಕು. ಈಗ ಕಾಯಂ ಆಗಿರುವ 34 ಜನರೊಂದಿಗೆ ಇನ್ನುಳಿದ 236 ಜನ ನೇರ ಪಾವತಿ ಪೌರ ಕಾರ್ಮಿಕರನ್ನೂ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 2018ರ ಜನಸಂಖ್ಯೆ ಆದಾರದಲ್ಲಿ ಪ್ರತಿ 700 ಜನರಿಗೆ ಒಬ್ಬರಂತೆ ಅಥವಾ 500 ಜನರಿಗೆ ಒಬ್ಬರಂತಾದರೂ ನೇರ ಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ಪಾಲಿಕೆಯಿಂದ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು. 6 ತಿಂಗಳು ಕೆಲಸ ಮಾಡಿದ 89 ಜನ ಗುತ್ತಿಗೆ ಪೌರ ಕಾರ್ಮಿಕರನ್ನು ನೇರ ಪಾವತಿಯಲ್ಲಿ ತಕ್ಷಣವೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ನೇರ ಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಇನ್ನೂ ತೀವ್ರ ಸ್ವರೂಪದ ಹೋರಾಟ ನಡೆಸುವುದು ನಿಶ್ಚಿತ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಧರಣಿಯಲ್ಲಿ ದಾವಣಗೆರೆ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ, ಮಹಾ ನಹಗರ ಪಾಲಿಕೆ ಪೌರ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡರಾದ ಎನ್.ನೀಲಗಿರಿಯಪ್ಪ, ಎಲ್.ಎಚ್.ಸಾಗರ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ