ಕಪ್ಪು ವಲಯ ಪಟ್ಟಿಯಲ್ಲಿ ತುಮಕೂರು ಜಿಲ್ಲೆ

ತುಮಕೂರು

      ಅತಿಯಾದ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ನಗರಗಳಲ್ಲಿ ತುಮಕೂರು ಒಂದಾಗಿದೆ. ಕಳೆದ 15 ವರ್ಷಗಳ ಹಿಂದೆ 300 ರಿಂದ 500 ಅಡಿಗಳ ಅಂತರದಲ್ಲಿ ಸಿಗುತ್ತಿದ್ದ ಅಂತರ್ಜಲ ಈಗ 800 ಅಡಿಗಳನ್ನು ದಾಟಿದೆ. 1000 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ.

     ಅಷ್ಟರ ಮಟ್ಟಿಗೆ ಇಲ್ಲಿ ಅಂತರ್ಜಲದ ಸಮಸ್ಯೆ ಸೃಷ್ಟಿಯಾಗಿದೆ. ಈ ಕಾರಣಕ್ಕಾಗಿಯೇ ತುಮಕೂರು ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಪ್ಪು ವಲಯ (ಡಾರ್ಕ್ ಜೋನ್) ಎಂದು ಗುರುತಿಸಿದೆ. ಅಂದರೆ ಕಪ್ಪು ವಲಯ ಪಟ್ಟಿಯಲ್ಲಿ ಇರುವ ಪ್ರದೇಶಗಳಲ್ಲಿ ಕೊಳವೆ ಬಾವಿಗಳನ್ನು ಹೇಗೆಂದರೆ ಹಾಗೆ ಕೊರೆಯಲು ಅವಕಾಶವಿಲ್ಲ. ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ.

       ಕರ್ನಾಟಕದ 75 ತಾಲ್ಲೂಕುಗಳು ಅಂತರ್ಜಲದ ಕೊರತೆ ಎದುರಿಸುತ್ತಿವೆ. ಈ ತಾಲ್ಲೂಕುಗಳಲ್ಲಿ ದಿನೆ ದಿನೆ ನೀರಿನ ಪ್ರಮಾಣ ಕುಸಿಯುತ್ತಿದೆ. ಹಿಂದೆ ಬೋರ್‍ವೆಲ್ ಗಳಲ್ಲಿ ಯತ್ತೇಚ್ಚವಾಗಿ ನೀರು ಸಿಗುತ್ತಿತ್ತು. ಈಗ ಬೋರ್‍ವೆಲ್‍ಗಳು ಬರಿದಾಗುತ್ತಿವೆ. ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಪಾಳು ಬಿದ್ದಿರುವ, ದುರಸ್ಥಿಯಾಗದೇ ಹಾಳಾಗಿರುವ ಬೋರ್‍ವೆಲ್‍ಗಳು ನಮ್ಮನ್ನು ಸ್ವಾಗತಿಸುತ್ತವೆ. ದೂರದಲ್ಲಿ ಮತ್ತೊಂದು ಬೋರ್‍ವೆಲ್ ಕಾಣಿಸುತ್ತದೆ. ಅದರಲ್ಲಿಯೂ ಕೆಲ ಕಾಲ ನೀರು ಕಾಣಿಸಿಕೊಂಡು ಕ್ರಮೇಣ ಭತ್ತಿ ಹೋಗುತ್ತದೆ. ಇದರಿಂದಾಗಿ ನೀರಿನ ಹಾಹಾಕಾರ ಬಹುತೇಕ ಹಳ್ಳಿಗಳಲ್ಲಿ ಸೃಷ್ಟಿಯಾಗಿದೆ.

       ಇದು ಮಳೆಗಾಲ ಮೇ ಮಧ್ಯ ಭಾಗದಿಂದಲೇ ಮಳೆ ಆಗಮನವಾಗಬೇಕಿತ್ತು. ಜೂನ್ ತಿಂಗಳಿನಲ್ಲಿ ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಮುಂಗಾರು ಬೆಳೆ ಬೀಜ ಹಾಕುತ್ತಿದ್ದರು. ಈ ಬಾರಿ ಎಲ್ಲಿಯೂ ಅಂತಹ ವಾತಾವರಣ ಇಲ್ಲ. ಎಲ್ಲಾ ಕಡೆಯು ಬರಗಾಲದ ಸ್ಥಿತಿಯೇ ಕಂಡು ಬರುತ್ತಿದೆ. ಆಗೊಮ್ಮೆ ಈಗೊಮ್ಮೆ ಸೋನೆ ಮಳೆ ಬಂದಿರುವ ಕಾರಣ ಮೇಲ್ನೋಟಕ್ಕೆ ಹಸಿರು ಕಾಣಿಸಬಹುದು. ಮರಗಳು ಹಸಿರಿನಿಂದ ಕಂಗೊಳಿಸುತ್ತಿರಬಹುದು. ಆದರೆ ಮಳೆ ಬಾರದೇ ಇದೇ ಸ್ಥಿತಿ ಮುಂದುವರೆದರೆ ಮುಂದಿನ ಭವಿಷ್ಯ ಅತ್ಯಂತ ಭಯಾನಕವಾಗಲಿದೆ. ಆಗ ಎದುರಾಗುವ ನೀರಿನ ಸಮಸ್ಯೆಯನ್ನು ಊಹಿಸಲು ಸಾಧ್ಯವಾಗುವುದಿಲ್ಲ.

      ನಗರಗಳಲ್ಲಿ ಹೆಚ್ಚು ನೀರು ಪೋಲಾಗುತ್ತಿದೆ. ಶೇಕಡಾ. 50ಕ್ಕಿಂತ ಹೆಚ್ಚು ಪಟ್ಟು ಕುಡಿಯುವ ನೀರು ನಗರ ಪ್ರದೇಶಗಳಲ್ಲಿ ಅಪವ್ಯಯವಾಗುತ್ತಿರುವ ಬಗ್ಗೆ ವರದಿಗಳು ತಿಳಿಸುತ್ತವೆ. ನಮ್ಮ ದೇಶದಲ್ಲಿ ಏಳು ಮಹಾನಗರಗಳು ಇಂತಹ ಸಮಸ್ಯೆ ಎದುರಿಸುತ್ತಿವೆ. ಮುಂಬೈ ಸಹ ಈ ಮಹಾನಗರಗಳ ಪಟ್ಟಿಯಲ್ಲಿದ್ದು, ಅಲ್ಲಿ ನೀರಿನ ಜಾಗ್ರತೆ ಉಂಟಾದ ಪರಿಣಾಮವಾಗಿ ನೀರಿನ ಬಳಕೆಯ ಎಚ್ಚರಿಕೆ ಉಂಟಾಗಿದೆ. ಹೀಗಾಗಿ ಮುಂಬೈನಲ್ಲಿ ಶೇಕಡಾ 13ರಷ್ಟು ಕುಡಿಯುವ ನೀರು ಪೋಲಾಗುತ್ತಿದೆ. ಇತರೆ ಆರು ಮಹಾನಗರಗಳಲ್ಲಿ ಶೇಕಡಾ 15ಕ್ಕಿಂತಲೂ ಹೆಚ್ಚು ಪಟ್ಟು ಕುಡಿಯುವ ನೀರು ಅಪವ್ಯಯವಾಗುತ್ತಿವೆ.

       ಅತಿ ಹೆಚ್ಚು ನೀರಿನ ದುರ್ಬಳಕೆ ಮಾಡುತ್ತಿರುವುದರಿಂದ ನೀರಿನ ಮೌಲ್ಯ ಬಹಳಷ್ಟು ಜನರಿಗೆ ಅರ್ಥವಾಗುತ್ತಿಲ್ಲ. ಆದರೆ ನೀರಿನ ಕೊರತೆ ಮತ್ತೊಷ್ಟು ತೀವ್ರವಾದಾಗ ಇದರ ನಿಜವಾದ ಸಮಸ್ಯೆ ಏನೆಂಬುದು ಅರಿವಾಗಲಿದೆ. ಈ ಕಾರಣಕ್ಕಾಗಿ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನಗಳು ಹೆಚ್ಚಬೇಕಿದೆ. ಸರ್ಕಾರಗಳು ಮತ್ತು ಸಂಘಸಂಸ್ಥೆಗಳು ಜಲಾಂದೋಲನ ಕೈಗೆತ್ತಿಕೊಳ್ಳಬೇಕಿದೆ. ಎಲ್ಲೆಲ್ಲಿ ನೀರು ಅಪವ್ಯಯವಾಗುತ್ತದೆಯೋ ಅಂತಹ ಕಡೆಗಳಲ್ಲಿ ನೀರು ಅಭಿಯಾನ ಮಾಡುವ ಮೂಲಕ ನೀರಿನ ಮಹತ್ವದ ಅರಿವು ಮೂಡಿಸಬೇಕಿದೆ. ಹನಿ ಹನಿ ನೀರು ಮುಖ್ಯವಾಗಿರುವ ಈ ದಿನಗಳಲ್ಲಿ ಜೀವ ಜಲವನ್ನು ಸುರಕ್ಷಿತವಾಗಿ ಕಾಪಾಡದೇ ಹೋದರೆ ಮುಂದಿನ ದಿನಗಳಲ್ಲಿ ಎದುರಾಗುವ ನಾನಾ ರೀತಿಯ ಸಮಸ್ಯೆಗಳಿಗೆ ನಾವೇ ಹೊಣೆಗಾರರಾಗಬೇಕಾಗುತ್ತದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap