ಚಾಮರಾಜನಗರ
ಸುಲ್ವಾಡಿ ಗ್ರಾಮದ ದೇವಸ್ಥಾನ ಪ್ರಸಾದದಲ್ಲಿ ವಿಷ ಬೆರೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಅಪರಾಧಿಗಳನ್ನು ಕೊಳ್ಳೆಗಾಲ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಡಿಸೆಂಬರ್ 13 ರಂದು ದೇವಸ್ಥಾನದ ಪ್ರಸಾದ ಸೇವಿಸಿದವರಲ್ಲಿ ಈವರೆಗೂ 17 ಮಂದಿ ಮೃತಪಟ್ಟಿದ್ದು, 100 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥಗೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮಲೆಮಹದೇಶ್ವರ ಬೆಟ್ಟದ ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಯನ್ನು, ನಿನ್ನೆ ರಾತ್ರಿ ನ್ಯಾಯಾಧೀಶ ಶ್ರೀಕಾಂತ್ ಅವರ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು.
ಪ್ರಕರಣದಲ್ಲಿ ಭಾಗಿಯಾಗಿರುವ ದೇವಸ್ಥಾನದ ವ್ಯವಸ್ಥಾಪಕ ಮಾದೇಶ, ಆತನ ಪತ್ನಿ ಅಂಬಿಕ ಮತ್ತು ದೇವಸ್ಥಾನದ ಅರ್ಚಕ ದೊಡ್ಡಯ್ಯ ಅವರುಗಳನ್ನೂ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಪೊಲೀಸ್ ವರಿಷ್ಠ ಧರ್ಮೇಂದ್ರ ಕುಮಾರ ಮೀನಾ ನೇತೃತ್ವದ ತಂಡ, ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನ ಹಾಗೂ ಪ್ರಸಾದಕ್ಕೆ ವಿಷಬೆರೆಸಿದ ಪ್ರಮುಖ ಆರೋಪಿ ಅಂಬಿಕಾ ನಿವಾಸದ ಬಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ಭದ್ರತಾ ದೃಷ್ಠಿಯಿಂದ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಪೆಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರೊಂದಿಗೆ ಸಂಸದ ಆರ್.ಧ್ರುವನಾರಾಯಣ್ ಮೈಸೂರಿನ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳ ಕ್ಷೇಮ ವಿಚಾರಿಸಿದ್ದಾರೆ.
ಮೈಸೂರಿನ ವಿವಿಧ 11 ಆಸ್ಪತ್ರೆಗಳಲ್ಲಿ 110 ಮಂದಿ ಅಸ್ವಸ್ಥರು ದಾಖಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಿಂದ ಹೊರ ಬರುವವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕ್ರಮಕೈಗೊಂಡಿದ್ದು, ಸುಲ್ವಾಡಿ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ 3 ಆಂಬ್ಯುಲೆನ್ಸ್‍ಗಳು ಸಿದ್ಧವಾಗಿವೆ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರಸಾದ್ ಹೇಳಿದ್ದಾರೆ.
ಪ್ರಸಾದದಲ್ಲಿ ವಿಷಬೆರೆಸಿರುವ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಸಾಲೂರು ಮಠದ ಪಟ್ಟದ ಗುರುಸ್ವಾಮಿ ತಿಳಿಸಿದ್ದಾರೆ. ಸಂತ್ರಸ್ಥ ಕುಟುಂಬಗಳಿಗೆ ಮಠದಿಂದ ಸಹಾಯ ಮಾಡುವುದರೊಂದಿಗೆ, ಅವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗುವುದೆಂದು ಹೇಳಿದ್ದಾರೆ.