ಶ್ರೀಗಳ ಪುಣ್ಯಸ್ಮರಣೆ: ಅಪಾರ ಭಕ್ತರ ನಿರೀಕ್ಷೆ

ತುಮಕೂರು:

       ಸಿದ್ಧಗಂಗೆಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಸಕಲ ರೀತಿಯಲ್ಲಿಯೂ ಮಠ ಸಜ್ಜುಗೊಂಡಿದೆ. ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ತುಮಕೂರು ಮಾತ್ರವಲ್ಲದೆ, ಹೊರಗಿನಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ.

        ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತರಿಗೆ ಯಾವುದೇ ಕೊರತೆಯಾಗದಂತೆ ಎಲ್ಲರಿಗೂ ಪ್ರಸಾದ ವಿನಿಯೋಗಿಸುವ ವ್ಯವಸ್ಥೆ ಮಾಡಲಾಗಿದೆ. 250 ಕ್ವಿಂಟಾಲ್ ಸಿಹಿ ಬೂಂದಿ, ಖಾರಾ ಬೂಂದಿ, 2 ಲಕ್ಷಕ್ಕೂ ಅಧಿಕ ಜಹಂಗೀರ್, ಇದರ ಜೊತೆಗೆ ಪಾಯಸ, ಮಾಲ್ದಿಪುಡಿ ಸಿದ್ಧಪಡಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದಲೂ ಸಿಹಿ ತಿಂಡಿ ತಯಾರಿಸುವ ಪ್ರಕ್ರಿಯೆಗಳು ನಡೆದವು. ಮಠದ ನಾಲ್ಕು ಕಡೆಗಳಲ್ಲಿ ಬಾಣಸಿಗರು ಈ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

         ತುಮಿಳುನಾಡಿನ ಬಾಣಸಿಗರೂ ಸೇರಿದಂತೆ 120 ಮಂದಿ ಜಹಂಗೀರ್ ತಯಾರಿಕೆಯಲ್ಲಿ ನಿರತರಾಗಿದ್ದರು. ಬುಧವಾರ ರಾತ್ರಿಯ ಮೆನುವಿನಲ್ಲಿ ಜಹಂಗೀರ್, ಗುರುವಾರ ಬೆಳಗ್ಗೆ ಬೂಂದಿ, ಮಾಲ್ದಿ ಬಡಿಸಲಾಗುತ್ತದೆ. ಅಂದಾಜು 3 ರಿಂದ 4 ಲಕ್ಷ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು, 10 ಕಡೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕಡೆಯೂ ಒಂದರಿಂದ ಎರಡು ಸಾವಿರ ಜನ ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಕೈಗೊಳ್ಳಲಾಗಿದೆ.

         ಹರಿದು ಬಂದ ದವಸ ಧಾನ್ಯ: ಶ್ರೀಗಳ ಪುಣ್ಯ ಸ್ಮರಣೆ ಅಂಗವಾಗಿ ತುಮಕೂರು ಜಿಲ್ಲೆ ಮಾತ್ರವಲ್ಲದೆ, ನಾಡಿನ ವಿವಿಧೆಡೆಗಳಿಂದ ದವಸ ಧಾನ್ಯ ನಿರಂತರವಾಗಿ ಹರಿದು ಬರುತ್ತಿದೆ. ಯಾರಲ್ಲೂ ಕೇಳಿಲ್ಲ. ಆದರೂ ಮಠದ ಮೇಲಿನ ಭಕ್ತಿ, ಶ್ರೀಗಳ ಮೇಲಿನ ಅಪಾರ ಭಕ್ತಿಯಿಂದಾಗಿ ನಾಡಿನ ವಿವಿಧ ಕಡೆಗಳಿಂದ ಕಳೆದ ಒಂದು ವಾರದಿಂದಲೂ ದವಸ ಧಾನ್ಯ ಬರುತ್ತಲೇ ಇದೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಅನೇಕ ಕಡೆಗಳಿಂದ ಎಪಿಎಂಸಿ ವರ್ತಕರು, ವಿವಿಧ ಅಂಗಡಿಗಳವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಲಾರಿಗಳಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಇತ್ಯಾದಿಗಳನ್ನು ಮಠಕ್ಕೆ ಸಮರ್ಪಿಸುತ್ತಿದ್ದಾರೆ. ತುಮಕೂರಿನಲ್ಲಿಯೂ ಹಾಲಿ, ಮಾಜಿ ಶಾಸಕರುಗಳು ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ದವಸ ಧಾನ್ಯ ನೀಡಿದ್ದಾರೆ.

ಮಠದಲ್ಲಿ ಸ್ವಚ್ಛತೆ:

         ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದಲೂ ಸ್ವಚ್ಛತಾ ಕಾರ್ಯ ನಡೆಯಿತು. ಮಕ್ಕಳು ಲಗುಬಗೆಯಿಂದ ಈ ಕಾರ್ಯದಲ್ಲಿ ನಿರತರಾಗಿದ್ದರು.

          ಪುಣ್ಯ ಸ್ಮರಣೆಯ ಅಂಗವಾಗಿ ಬೆಳಗ್ಗೆ 8.30ಕ್ಕೆ ಸ್ವಾಮೀಜಿಯವರ ಭಾವಚಿತ್ರವನ್ನು ಗದ್ದುಗೆಯಿಂದ ಗೋಸಲ ಸಿದ್ದೇಶ್ವರ ವೇದಿಕೆಯವರೆಗೆ ಮೆರವಣಿಗೆ ಮಾಡಲಾಗುವುದು. ನಂತರ ಗಣ್ಯರು ಹಾಗೂ ನಾಡಿನ ಮಠಾಧೀಶರು ಗದ್ದುಗೆಯ ದರ್ಶನ ಪಡೆದು ಕಾರ್ಯಕ್ರಮದ ಸ್ಥಳಕ್ಕೆ ಬರುವರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link