ಬೆಂಗಳೂರು
ಬರುವ ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶವನ್ನು ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದ ದಿನಾಂಕನ್ನು ನಿರ್ಧಾರ ಮಾಡುವ ಅಧಿಕಾರ ಮುಖ್ಯಮಂತ್ರಿ ಅವರಿಗೆ ಬಿಟ್ಟುಕೊಡಲಾಯಿತು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮಹಿಳಾ ಸದಸ್ಯರನ್ನು ನೇಮಕಮಾಡಲು ಹಾಗೂ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 450 ಹಾಸಿಗೆಗಳ ಸಾಮಥ್ರ್ಯದ ಆಸ್ಪತ್ರೆಯನ್ನು 141.20 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿತು.
ಹುಬ್ಬಳಿ-ಧಾರವಾಡ ಬಿಆರ್‍ಟಿಎಸ್ ಕಂಪನಿಯ ಸ್ಥಾಪನೆಯಾಗುವವರೆಗೆ ಪತ್ಯೇಕ ಹುಬ್ಬಳಿ-ಧಾರವಾಡ ನಗರ ಸಾರಿಗೆ ಸೇವೆಗಳ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದ್ದು ಮೊದಲ 6 ತಿಂಗಳ ಕಾಲ ವಹಿವಾಟು ನಡೆಸಲು ಅಗತ್ಯವಾದ 35 ಕೋಟಿ ರೂಪಾಯಿ ಹಣವನ್ನು ನೀಡಲು ಸಂಪುಟ ಅನುಮೋದನೆ ನೀಡಿತು ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಆಸ್ತಿಗಳನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಸಮೀಕ್ಷೆ ಮಾಡಲು ಹಾಗೂ ರಾಜ್ಯದ ನಗರ ಪ್ರದೇಶಗಳಲ್ಲಿ 250 ಹೊಸ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಇದಕ್ಕೆ ಅಗತ್ಯವಾದ 17.50 ಕೋಟಿ ರೂಪಾಯಿ ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿತು ಎಂದು ಸಚಿವ ಕಾಶಂಪುರ್ ತಿಳಿಸಿದರು.
ರಾಜ್ಯ ಬಜೆಟ್‍ನಲ್ಲಿ ಘೋಷಿಸಿದಂತೆ ಶೂನ್ಯ ಬಂಡವಾಳ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ತರಬೇತಿ ನೀಡಲು 50 ಕೋಟಿ ರೂ ಬಿಡುಗಡೆಗೆ ಸಂಪುಟ ಅನುಮತಿ ನೀಡಿತು ಎಂದು ಹೇಳಿದರು.
ರಾಷ್ಟ್ರೀಯ ಅದಿರು ಅಭಿವೃದ್ಧಿ ನಿಗಮ ವತಿಯಿಂದ ರಾಜ್ಯದಲ್ಲಿ ಗಣಿಗಾರಿಕೆ ಗುತ್ತಿಗೆಯನ್ನು ನವೀಕರಿಸುವ ಬದಲು ಹರಾಜು ಮೂಲಕ ಗುತ್ತಿಗೆ ಮುಂದುವರೆಸುವ ಬಗ್ಗೆ ಹಣಕಾಸು ಇಲಾಖೆ ನೀಡಿರುವ ಶಿಪಾರಸ್ಸಿಗೆ ಸಂಪುಟ ಒಪ್ಪಿಗೆ ನೀಡಿತು ಎಂದರು.
ಬಡ್ತಿ ಮೀಸಲಾತಿ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದ್ದು ಈ ಕುರಿತಂತೆ ಸುಪ್ರೀಂ ಕೋರ್ಟ್ ಮುಂದೆ ದಿನಪ್ರತಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪಿನ ವಿವರ ಬಂದ ಬಳಿಕ ಅಗತ್ಯ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ