ತುಮಕೂರು
ಡಾ ಶಿವಕುಮಾರಸ್ವಾಮಿಗಳು ಅನನ್ಯ ಸಾಧನೆ ಮಾಡಿದ ಕರ್ಮಯೋಗಿ, ಈ ಜಗತ್ತಿನ ಅಚ್ಚರಿ, ಆ ವಯಸ್ಸಿನಲ್ಲೂ ವೈದ್ಯಕೀಯ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಶ್ರೀಗಳು ವೈದ್ಯರಲ್ಲೇ ಅಚ್ಚರಿ ಮೂಡಿಸಿದಂತಹ ದಿವ್ಯ ಚೇತನ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸಿದ್ಧಗಂಗಾಮಠದಲ್ಲಿ ನಡೆದ ಡಾ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭಾವೈಕ್ಯತೆಯನ್ನು ಎಲ್ಲಿಯೂ ಹುಡುಕಬೇಕಿಲ್ಲ, ಅದು ಸಿದ್ಧಗಂಗಾಮಠದಲ್ಲೇ ನಿತ್ಯ ಕಂಡುಬರುತ್ತದೆ. ಮಠದಲ್ಲಿ ಎಲ್ಲಾ ಜಾತಿಯ ಮಕ್ಕಳಿಗೆ ವಿದ್ಯೆ ವಸತಿ ಅನ್ನ ನೀಡುತ್ತಾ ಸೇವೆಯಲ್ಲಿ ತೊಡಗಿದ ಶ್ರೀಗಳು ಜಾತಿ ಮತದ ಬೇಧ ಮಾಡದೆ ಇವ ನಮ್ಮವ ಇವ ನಮ್ಮವ ಎಂದು ಸಾರಿದ ಬಸವಣ್ಣನವರ ತದ್ರೂಪಿ. 12ನೇ ಶತಮಾನದ ಬಸವಾದಿ ಶರಣರ ತತ್ವಸಿದ್ಧಾಂತಗಳ ಪ್ರಸ್ತುತತೆಯನ್ನು ಎತ್ತಿಹಿಡಿದಿದ್ದಾರೆ ಎಂದರು.
ಸಿದ್ಧಲಿಂಗಸ್ವಾಮೀಜಿಗಳು ಹಿರಿಯ ಶ್ರೀಗಳ ಸ್ಥಾನ ತುಂಬುವ ಹಾದಿಯಲ್ಲೇ ಸಾಗುತ್ತಿದ್ದಾರೆ, ಭಕ್ತರು ಈ ಶ್ರೀಗಳಿಗೂ ಅದೇ ರೀತಿಯ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಕೋರಿದರು.
ಭಾರತ ರತ್ನ ಕೇಳಬೇಡಿ
ನಿತ್ಯ ಹತ್ತು ಸಾವಿರ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಡಾ ಶಿವಕುಮಾರಸ್ವಾಮಿಗಳ ಸೇವೆ ಪರಿಗಣಿಸಿ ಅವರೇ ಭಾರತ ರತ್ನ ಕೊಡಬೇಕಾಗಿತ್ತು. ಅವರಿಗೆ ಭಾರತ ರತ್ನ ಕೊಡಿ ಎಂದು ಭಕ್ತರು ಪದೇಪದೆ ಕೇಳಬಾರದು, ಶ್ರೀಗಳೇ ಒಂದು ಭಾರತ ರತ್ನ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
ಶ್ರೀಗಳ ಹೆಸರಿನಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕೆಂಬ ವಿಚಾರ ಪ್ರಸ್ತಾಪವಾಗಿದೆ, ಅಧ್ಯಯನ ಕೇಂದ್ರವೇಕೆ, ವಿಶ್ವವಿದ್ಯಾಲಯಕ್ಕೆ ಶ್ರೀಗಳ ಹೆಸರಿಟ್ಟು ಅವರ ಶೈಕ್ಷಣಿಕ ಸೇವೆ ಸ್ಮರಿಸಬೇಕು ಎಂದರು.
ಕಾವ್ಯ ನಮನ
ಮಾಜಿ ಮಖ್ಯಮಂತ್ರಿ, ಸಂಸದ ಎಂ ವೀರಪ್ಪಮೊಯ್ಲಿ ಅವರು ಡಾ. ಶಿವಕುಮಾರಸ್ವಾಮಿಗಳನ್ನು ಕುರಿತು ಬರೆದ ಕಾವ್ಯ ವಾಚಿಸಿ, ನಮನ ಸಲ್ಲಿಸಿದರು.
ಶ್ರೀಗಳು ಭಾರತ ರತ್ನ, ನೊಬೆಲ್ ಪಾರಿತೋಷಕ ಮೀರಿದವರು. ಜಗತ್ತಿನಾದ್ಯಂತ ಇವರ ಸೇವಾ ಸಾಧನೆ ಹೆಸರಾಗಿದೆ, ಯಾವುದೇ ಪ್ರಶಸ್ತಿ, ಪುರಸ್ಕಾರ ಮೀರಿ ಶ್ರೀಗಳು ಬೆಳಕಾಗಿದ್ದಾರೆ ಎಂದರು.
ಸಿದ್ಧಗಂಗಾಮಠವನ್ನು ಧರ್ಮ ಮತ್ತು ಸಾಮಾಜಿಕ ಜಾಗೃತಿಗಾಗಿ ಉಪಯೋಗಿಸೋಣ, ಸ್ವಾರ್ಥ ಧರ್ಮಕ್ಕೆ, ರಾಜಕಾರಣಕ್ಕೆ ಬಳಕೆಯಾಗದಂತೆ ಎಚ್ಚರಿಕೆ ವಹಿಸೋಣ ಎಂದು ಹೇಳಿದರು.
ಸೇವೆ ಸಾರ್ಥಕಗೊಳಿಸಿ
ಡಾ. ಶಿವಕುಮಾರಸ್ವಾಮಿಗಳು ನಾಡಿಗೆ ನೀಡಿದ ಸೇವೆ ಸ್ಮರಿಸುವ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು. ಏಪ್ರಿಲ್ 1ರಂದು ಶ್ರೀಗಳ ಜನ್ಮ ದಿನವನ್ನು ಸರ್ಕಾರ ಆಚರಿಸಲು ಆದೇಶ ಮಾಡಬೇಕು ಎಂದು ಮಾಜಿ ಸಚಿವ ವಿ ಸೋಮಣ್ಣ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಶ್ರೀಗಳು ಓದಿದ ಬೆಂಗಳೂರು ಸೆಂಟ್ರಲ್ ಕಾಲೇಜು ಈಗ ವಿವಿ ಆಗಿದೆ, ವಿವಿಯಲ್ಲಿ ಶ್ರೀಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿ, ಬೆಂಗಳೂರು, ತುಮಕೂರಿನಲ್ಲಿ ಶ್ರೀಗಳ ಹೆಸರಿನ ಸ್ಮಾರಕಗಳನ್ನು ಸ್ಥಾಪಿಸಿ, ಪ್ರತಿ ವರ್ಷ ಶ್ರೀಗಳ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.