ಭಾರತ ಸರ್ಕಾರ ಶ್ರೀಗಳನ್ನು ಕಡೆಗಣಿಸಿದೆ : ಮುರಳೀಧರ ಹಾಲಪ್ಪ

ತುಮಕೂರು

        ಸಿದ್ಧಗಂಗಾ ಮಠದ ಡಾ. ಶಿವಕುಮಾರಸ್ವಾಮೀಜಿಗಳಿಗೆ ಈ ಬಾರಿಯಾದರೂ ಭಾರತ ಸರ್ಕಾರ ಭಾರತರತ್ನ ನೀಡುತ್ತದೆ ಎಂಬ ಕೋಟ್ಯಾಂತರ ಭಕ್ತರ ಅಪೇಕ್ಷೆ ಈಡೇರದೆ ನಿರಾಶೆಯಾಗಿದೆ. ಶ್ರೀಗಳಿಗೆ ಭಾರತ ರತ್ನದಿಂದ ಯಾವ ಸಂತೋಷ ಆಗಿದ್ದರೂ ಅವರ ಭಕ್ತರಿಗೆ ಸಡಗರವಾಗುತ್ತಿತ್ತು, ಭಾರತ ರತ್ನ ನೀಡಿದ್ದರೆ ಶ್ರೀಗಳ ಇಷ್ಟು ವಷರ್óಗಳ ಸಾರ್ಥಕ ಸೇವೆಗೆ ಸರ್ಕಾರ ಗೌರವ ಸಲ್ಲಿಸಿದಂತಾಗುತ್ತಿತ್ತು.

        ಆದರೆ ಭಾರತ ಸರ್ಕಾರ ಶ್ರೀಗಳನ್ನು ಕಡೆಗಣಿಸಿದೆ ಎಂದು ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೇಂದ್ರ ಬಿಜೆಪಿ ಸರ್ಕಾರ ಭಾರತ ರತ್ನ ಹಾಗೂ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿರುವುದರ ಹಿಂದೆ ಲೋಕಸಭಾ ಚುನಾವಣೆಯ ರಾಜಕಾರಣ ಅಡಗಿದೆ ಎಂದು ಟೀಕಿಸಿದರು.

        ಅಕ್ಷರ, ಅನ್ನ, ಆಶ್ರಯದ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳ ಬದುಕಿಗೆ ನೆರವಾದ ಡಾ. ಶಿವಕುಮಾರಸ್ವಾಮಿಗಳು ತಮ್ಮ ಸೇವೆ ಮೂಲಕ ಜಗತ್ಪ್ರಸಿದ್ಧರಾಗಿದ್ದಾರೆ, ಕೋಟ್ಯಾಂತರ ಭಕ್ತರ ದೇವರಾಗಿದ್ದಾರೆ, ಅವರು ಭಾರತರತ್ನ ಮೀರಿದ ವಿಶ್ವ ರತ್ನ. ಆದರೂ ಭಕ್ತರ ಅಪೇಕ್ಷೆಯಂತೆ ಭಾರತ ರತ್ನ ನೀಡಿ ಶ್ರೀಗಳ ಸೇವೆ, ಸಾಧನೆ ಪರಿಗಣಿಸಬೇಕಾಗಿತ್ತು ಎಂದು ಮುರಳೀಧರ ಹಾಲಪ್ಪ ಹೇಳಿದರು.

         ಅಚ್ಚರಿಯೆಂದರೆ, ಈ ಬಾರಿ ಪದ್ಮ ವಿಭೂಷಣ, ಪದ್ಮ ಭೂಷಣ ಪುರುಸ್ಕಾರಕ್ಕೆ ಆಯ್ಕೆ ಮಾಡುವಲ್ಲಿ ಕರ್ನಾಟಕ ರಾಜ್ಯದವರನ್ನು ಕಡೆಗಣಿಸಲಾಗಿದೆ. ಸಾಲು ಮರದ ತಿಮ್ಮಕ್ಕ ಅವರಿಗೆ ಪದ್ಮಶ್ರೀ ನೀಡಲಾಗಿದೆ. ಇದರ ಹೊರತಾಗಿ ರಾಜ್ಯದ ಮೂಲದ ಇನ್ನಾರಿಗೂ ಇಂತಹ ಗೌರವ ಸಿಕ್ಕಿಲ್ಲ. ಇಲ್ಲಿಯೂ ಕನ್ನಡಿಗರ ಸೇವೆಯನ್ನು ಕೇಂದ್ರ ಸಕಾರ ನಿರ್ಲಕ್ಷಿಸಿದೆ. ಪಶ್ಚಿಮ ಬಂಗಾಲದ ಪ್ರಣಬ್ ಮುಖರ್ಜಿ, ಸಂಘ ಪರಿವಾರದ ನಾನಾಜಿ ದೇಶಮುಖ್ ಹಾಗೂ ಅಸ್ಸಾಂನ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡಿ, ಉತ್ತರ ಭಾರತದವರನ್ನು ಪ್ರಶಸ್ತಿ ಮೂಲಕ ಓಲೈಸುವ ಪ್ರಯತ್ನ ಮಾಡಲಾಗಿದೆ ಎಂದರು.

         ಕೇಂದ್ರ ಸರ್ಕಾರದ ದಬ್ಬಾಳಿಕೆ ವಿರೋಧಿಸಿ ನೀತಿ ಆಯೋಗದ ಸದಸ್ಯರು ರಾಜಿನಾಮೆ ನೀಡಿ ಹೊರಹೋಗಿದ್ದಾರೆ. ಆರ್‍ಬಿಐ ಗೌರ್ನರ್ ರಾಜಿನಾಮೆ ನೀಡಿದ್ದಾರೆ, ತಮ್ಮ ಸರ್ವಾಧಿಕಾರಿ ಧೋರಣೆಯ ಆಡಳಿತದಿಂದ ಕೆಲವು ಎಡವಟ್ಟು ಮಾಡಿಕೊಂಡಿರುವ ಪ್ರಧಾನಿ ಮೋದಿ ಸರ್ಕಾರದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಹಪಾಹಪಿ ಶುರುವಾಗಿದೆ. ಐದು ವರ್ಷಗಳಲ್ಲಿ 700 ದೇಶ ಸುತ್ತಿದ ಮೋದಿ ಈಗ ಸೆಲೆಬ್ರೆಟಿಗಳ ಮದುವೆ, ಚಲನಚಿತ್ರ ನಟನಟಿಯರ ಫೋಟೋಸೆಷನ್‍ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ, ಮುಖಂಡರಾದ ಮುಸ್ಕಾಕ್‍ಅಹಮದ್, ತರುಣೇಶ್, ಟಿ ಬಿ ಮಲ್ಲೇಶ್, ಸಿಮೆಂಟ್ ಮಂಜುನಾಥ್, ಮರಿಚೆನ್ನಮ್ಮ, ವೈ ಎನ್ ನಾಗರಾಜ್, ಮಲ್ಲಿಕಾರ್ಜುನಯ್ಯ ಮೊದಲಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap