ಹುಳಿಯಾರು
ಹುಳಿಯಾರಿನ ಗುಂಡಿ ಬಿದ್ದು ಓಡಾಡಲು ದುಸ್ತರವಾಗಿರುವ ಡಾಂಬರ್ ಕಾಣದ ರಸ್ತೆಗಳಿಗೆ ಕಾಯಕಲ್ಪ ನೀಡಲು ತಾವು ಮುಂದಾಗಿದ್ದು ಸದ್ಯಕ್ಕೆ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಗಾಂಧಿ ಪೇಟೆ ರಸ್ತೆ ಹಾಗೂ 14 ನೇ ಹಣಕಾಸು ಯೋಜನೆ ಅಡಿ ರಾಜಕುಮಾರ್ ರಸ್ತೆಯ ಆಸ್ಪತ್ರೆ ಕಾಂಪೌಂಡ್ ಪಕ್ಕದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಲು ಹಣ ಬಿಡುಗಡೆಗೊಳಿಸುವಂತೆ ಪತ್ರ ಬರೆಯಲಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರಿನ 7ನೇ ಬ್ಲಾಕ್ ಹಾಗೂ 8 ನೇ ಬ್ಲಾಕಿನಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ ಹುಳಿಯಾರಿನಲ್ಲಿ ಅಗತ್ಯವಾಗಿ ಆಗಬೇಕಿರುವ ರಸ್ತೆ ಕಾಮಗಾರಿಯ ಪಟ್ಟಿ ಮಾಡಲು ಪಿಡಬ್ಲ್ಯುಡಿ ಎಂಜಿನಿಯರ್ ಅವರಿಗೆ ತಿಳಿಸಿದ್ದು ಪಪಂ ಅನುಧಾನ, ಎಸ್‍ಸಿ, ಎಸ್‍ಟಿ, ಎತ್ತಿನಹೊಳೆ ಅನುಧಾನ ಬಳಸಿ ಹುಳಿಯಾರಿನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದರು.
ಕ್ಷೇತ್ರದಲ್ಲಿ ಈಗಾಗಲೇ ಕೋಟ್ಯಾಂತರ ರೂಪಾಯಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಕಂಡು ಬಂದಿಲ್ಲ ಎಂದ ಅವರು ಎಸ್ ಟಿ ಪಿ ಯೋಜನೆಯಡಿ 68.5 ಲಕ್ಷ ರೂ. ಎಸಿಪಿ ಯೋಜನೆಯಡಿ 89 ಲಕ್ಷ ರೂ. ಹಾಗೂ ಟಿಎಸ್‍ಪಿ ಯೋಜನೆಯಡಿ 42 ಲಕ್ಷ ರೂ ಸೇರಿದಂತೆ ಒಟ್ಟು 190 ಲಕ್ಷ ರೂ ಬಿಡುಗಡೆಯಾಗಿದೆ. ಇವಿಷ್ಟು ಹಣವನ್ನು ಗುಣ ಮಟ್ಟದ ಕಾಂಕ್ರೀಟ್ ರಸ್ತೆಗಳು ಹಾಗೂ ಸಿಮೆಂಟ್ ಚರಂಡಿ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದೆ ಎಂದರು.
ಹುಳಿಯಾರು ಪಪಂ ಆಗಿ ಮೇಲ್ದರ್ಜೆಗೇರಿರುವುದರಿಂದ ಅನುದಾನ ಬಿಡುಗಡೆಯಲ್ಲಿ ಸ್ವಲ್ಪ ತಾಂತ್ರಿಕ ಸಮಸ್ಯೆ ಕಂಡು ಬಂದಿದ್ದು ಈ ಬಗ್ಗೆ ಈಗಾಗಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಳಿ ಮಾತನಾಡಾಗಿದೆ ಎಂದರಲ್ಲದೆ ಹುಳಿಯಾರಿನಲ್ಲಿ ಗ್ರಾಪಂ ಇದ್ದಾಗ ಬಿಡುಗಡೆಯಾಗಿದ್ದ ಒಂದು ಕೋಟಿ ರೂ. ಅನುದಾನವನ್ನು ಈ ಹಿಂದೆಯೇ ಕೆಲಸ ಆರಂಭಿಸಿರುವುದರಿಂದ ಗ್ರಾಂಟ್ ಹಿಂಪಡೆಯಲು ಸಾಧ್ಯವಿಲ್ಲ. ಹಾಗಾಗಿ ಗ್ರಾಮ ವಿಕಾಸ ಯೋಜನೆಯ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದಿದ್ದು 14 ನೇ ಹಣಕಾಸು ಯೋಜನೆಯಡಿ ಬಳಕೆಯಾಗಬೇಕಾಗಿರುವ 40 ಲಕ್ಷ ರೂ ಸೇರಿ ಒಟ್ಟು 1.40 ಕೋಟಿ ರೂ ಶೀಘ್ರವೇ ಬಿಡುಗಡೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರುಗಳಾದ ಹೇಮಂತ್, ಬಡ್ಡಿ ಪುಟ್ಟರಾಜು, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಬಸವರಾಜು, ಬರಕನಾಳ್ ವಿಶ್ವನಾಥ, ಗುರುಪ್ರಸಾದ್, ಎಲಕ್ಟ್ರಿಕ್ ಚಿಕ್ಕಣ್ಣ, ಪಟ್ಟಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಪಿಡಬ್ಲ್ಯೂಡಿ ಎಇಇ ಸಿ.ಎಸ್.ಚಂದ್ರಶೇಖರ್, ದಾಸಪ್ಪ ಸೇರಿದಂತೆ ಗುತ್ತಿಗೆದಾರರು ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ