ದಾವಣಗೆರೆ :
ಬಾಕಿ ವೇತನ ಬಿಡುಗಡೆ ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಡಿಸೆಂಬರ್ 11ರಿಂದ 13ರ ವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಅತಿಥಿ ಉಪನ್ಯಾಸಕರ ಸಂಘ ನಿರ್ಧರಿಸಿದೆ.
ನಗರದ ಎಸ್‍ಬಿಸಿ ಮಹಿಳಾ ಪದವಿ ಕಾಲೇಜಿನಲ್ಲಿ ಶುಕ್ರವಾರ ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗಾಗಿ ಹೋರಾಟ ರೂಪಿಸಲು ನಡೆಸಿದ ಅತಿಥಿ ಉಪನ್ಯಾಸಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್ ಶಿವಮೊಗ್ಗ, ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡುವ ಮೂಲಕ ಭವಿಷ್ಯದ ಪ್ರಜೆಗಳನ್ನು ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅತಿಥಿ ಉಪನ್ಯಾಸಕರೇ ಸೇವಾ ಭದ್ರತೆ ಸೇರಿದಂತೆ ಯಾವುದೇ ಸೌಲಭ್ಯ ಇಲ್ಲದಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ 412 ಸರ್ಕಾರ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 13 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಕಳೆದ ಹಲವು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಹೀಗಾಗಿ ಇವರು ದೈನಂದಿನ ಜೀವನ ನಡೆಸುವುದು ಸಹ ದುಸ್ತರವಾಗಿದೆ. ನ್ಯಾಯಯುತ ಬೇಡಿಕೆಗಳಿಗಾಗಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಡಿಸೆಂಬರ್ 11ರಿಂದ 13ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು. ಇದಕ್ಕೂ ಸರಕಾರ ಬಗ್ಗದೇ ಹೋದರೆ ಬೆಳಗಾವಿ ಚಲೋ ಹಮ್ಮಿಕೊಂಡು ಡಿ.17ರಂದು ಕುಟುಂಬ ಸಮೇತ ಸತ್ಯಾಗ್ರಹ ಮಾಡುವುದಲ್ಲದೇ ದಯಾಮರಣ ನೀಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.
ಕಳೆದ 15 ವರ್ಷದಿಂದ ಅತಿಥಿ ಉಪನ್ಯಾಸಕರು ಸೇವಾಭದ್ರತೆಗಾಗಿ ಸಾಕಷ್ಟು ಬಾರಿ ಹೋರಾಟ ನಡೆಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ಇದುವರೆಗೂ ಬಂದ ಸರಕಾರಗಳು ನಮ್ಮನ್ನು ನಿರ್ಲಕ್ಷಿಸಿದೆ. ಆದರೆ ನಮ್ಮ ಸುದೀರ್ಘ ಹೋರಾಟದ ಪರಿಣಾಮ ಮಾಜಿ ಸಿಎಂ ಸಿದ್ದರಾಮಯ್ಯ ಸೇವಾಭದ್ರತೆಗಾಗಿ ಮನಸ್ಸು ಮಾಡಿದ್ದರು. ಆದರೆ, ಇನ್ನೇನೂ ಕನಸು ನನಾಸಗಿರುವಷ್ಟರಲ್ಲಿ ಚುನಾವಣೆ ಬಂದಿತು. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಅತಿಥಿ ಉಪನ್ಯಾಸಕರ ಹೋರಾಟ `ಮಾಡು ಇಲ್ಲವೇ ಮಡಿ’ ಹಂತವನ್ನು ತಲುಪಿದೆ. ಜೀವನ ನಿರ್ವಹಣೆ ಸಾಧ್ಯವಾಗದೆ, ಕೆಲ ಅತಿಥಿ ಉಪನ್ಯಾಸಕರು ಮೃತಪಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ ತಮ್ಮ ಪ್ರಣಾಳಿಕೆಯಲ್ಲಿ ಸೇವಾಭದ್ರತೆ ಒದಗಿಸುವುದಾಗಿ ಭರವಸೆ ನುಡಿದಿದ್ದರು. ಆದರಂತೆ ಕೊಟ್ಟ ಮಾತಿನಂತೆ ನಡೆದುಕೊಂಡು ನಮಗೆ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‍ಕುಮಾರ್ ಮಾತನಾಡಿ, ಸೇವಾಭದ್ರತೆ, ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ಸರಕಾರ ಶೀಘ್ರ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ತೀರ್ಮಾನ ಕೈಗೊಳ್ಳದಿದ್ದರೆ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಬೆಳಗಾವಿ ವಿಧಾನ ಮಂಡಲ ಕಲಾಪ ನಡೆಯಲು ಬಿಡುವುದಿಲ್ಲ ಎಂದು ಹೇಳಿದರು.
ರಾಜ್ಯ ಪದವಿ ಖಾಸಗಿ ಕಾಲೇಜುಗಳ ಸಂಘದ ಅಧ್ಯಕ್ಷ ಮುರುಗೇಂದ್ರಪ್ಪ ಮಾತನಾಡಿ, ಅತಿಥಿ ಉಪನ್ಯಾಸಕರ ಹೋರಾಟವನ್ನು ರಾಜ್ಯಾದ್ಯಂತ ತೀವ್ರವಾಗಿ ಬಲಪಡಿಸಬೇಕು. ಬೇಡಿಕೆ ಈಡೇರುವವರೆಗೂ ಈ ಹೋರಾಟವನ್ನು ನಿಲ್ಲಿಸಬಾರದು. ಇದಕ್ಕೆ ಬೇಕಾದ ರೂಪುರೇಷಗಳನ್ನು ಈಗಲೇ ತಯಾರುಮಾಡಿಕೊಳ್ಳಿ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಸಭೆಯಲ್ಲಿ ಮುಖಂಡರಾದ ಕೊಟ್ರೇಶ್, ದೇವೆಂದ್ರಪ್ಪ, ಡಾ.ಎಂ.ಪ್ರಭಾಕರ್, ಅರುಣ್‍ಕುಮಾರ್, ಡಿ.ಜಿ.ಮಲ್ಲಿಕಾರ್ಜುನ್, ಡಾ.ಕೆ.ಎಂ.ಮಂಜುನಾಥ್, ಮಂಜುಳಾ, ಸಿದ್ದಮ್ಮ, ಡಾ.ಭಾರತಿ, ಸಿ.ಕೆ.ಪಟೇಲ್, ಸುರೇಶ್, ಡಾ.ಎ.ಕೆ.ಬಸವರಾಜ್, ಮಲ್ಲಯ್ಯ ಹಿರೇಮಠ್, ಡಾ.ಬಸವರಾಜ್, ಡಾ.ಪ್ರಶಾಂತ್ ಶರ್ಮ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ