ತುಮಕೂರು
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ತುಮಕೂರು ನಗರದ 30 ನೇ ವಾರ್ಡ್ ವ್ಯಾಪ್ತಿಯ ಸಪ್ತಗಿರಿ ಬಡಾವಣೆಯ ದಕ್ಷಿಣದ ಕೊನೆಯಲ್ಲಿ ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಗಾರೆ ನರಸಯ್ಯನ ಕಟ್ಟೆಗೆ ನೀರು ಹರಿದು ಬಂದಿದ್ದು, ಈ ಭಾಗದ ನಾಗರಿಕರಲ್ಲಿ ಉಲ್ಲಾಸವನ್ನು ಮೂಡಿಸಿದೆ.
ಅನೇಕ ವರ್ಷಗಳಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಈ ಕಟ್ಟೆಯಲ್ಲಿ ಇದೀಗ ಏಕಾಏಕಿ ನೀರು ತುಂಬಿಕೊಂಡಿರುವುದು ಸುತ್ತಮುತ್ತಲಿನ ನಾಗರಿಕರಲ್ಲಿ ಹರ್ಷವನ್ನು ತಂದಿದೆ.
ಅಂತರ್ಜಲ ವೃದ್ಧಿಗೆ ಸಹಾಯ
ಈ ಕಟ್ಟೆಗೆ ಬರುವ ಕಾಲುವೆಯನ್ನು ಮತ್ತು ಈ ಭಾಗದ ಮಳೆನೀರಿನ ಚರಂಡಿಗಳನ್ನು ಪೌರಕಾರ್ಮಿಕರು ಪರಿಶ್ರಮದಿಂದ ಸ್ವಚ್ಛಗೊಳಿಸಿದ ಪರಿಣಾಮದಿಂದ ಮಳೆಯ ನೀರು ವ್ಯರ್ಥವಾಗದೆ ಇಲ್ಲಿಗೆ ಹರಿದು ಬಂದು ಕಟ್ಟೆಯನ್ನು ಸೇರಿದೆ. ಇಲ್ಲಿ ಅನೇಕ ವರ್ಷಗಳ ಬಳಿಕ ಇದೇ ಮೊದಲಿಗೆ ನೀರು ನಿಂತಿದ್ದು, ಇದರಿಂದ ಇಲ್ಲಿನ ಪರಿಸರಕ್ಕೆ ಶೋಧ ಉಂಟಾಗಿದೆ ಹಾಗೂ ಅಂತರ್ಜಲ ವೃದ್ಧಿಗೊಂಡು ಸುತ್ತಮುತ್ತಲಿನ ಬಡಾವಣೆಗಳ ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಲಿದೆ” ಎಂದು 30 ನೇ ವಾರ್ಡ್‍ನ ಕಾರ್ಪೊರೇಟರ್ ವಿಷ್ಣುವರ್ದ ನ ಅವರು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.
ಗಾರೆನರಸಯ್ಯನ ಕಟ್ಟೆಗೆ ಸಂಬಂಧಿಸಿದ ಎಲ್ಲ ಕಾಲುವೆಗಳನ್ನು ಮತ್ತೆ ಸ್ವಚ್ಛಗೊಳಿಸಲು ಉದ್ದೇಶಿಸಿದ್ದು, ಈ ಮಳೆಗಾಲದಲ್ಲಿ ಸುರಿಯುವ ಮಳೆ ನೀರನ್ನು ಇಲ್ಲಿ ಸಂಗ್ರಹಿಸಲು ಆದ್ಯ ಗಮನ ಕೊಡಲಾಗುತ್ತಿದೆ. ಮಳೆ ನೀರಿನಿಂದ ಈ ವರ್ಷ ಈ ಕಟ್ಟೆ ಸಂಪೂರ್ಣ ಭರ್ತಿ ಆಗಬೇಕೆಂಬುದು ನಮ್ಮ ಆಸೆಯಾಗಿದೆ. ಈ ಕಟ್ಟೆಯ ಜಾಗ ಹಾಗೂ ಕಾಲುವೆಗಳ ಬಗ್ಗೆ ಸರ್ವೇ ಮಾಡಿಸಲಾಗುವುದು” ಎಂದೂ ಅವರು ಹೇಳಿದ್ದಾರೆ.
ಕ್ರಿಕೆಟ್ ಕ್ರೀಡಾಂಗಣಕ್ಕೆ ಬೇಡಿಕೆ
ಮಳೆ ಇಲ್ಲದೆ ಹಾಗೂ ಮಳೆಯ ನೀರು ಇಲ್ಲಿಗೆ ಹರಿದು ಬರದೆ ಅನೇಕ ವರ್ಷಗಳಿಂದ ಗಾರೆ ನರಸಯ್ಯನ ಕಟ್ಟೆ ಬರಿದಾಗಿತ್ತು. ಅಕ್ಷರಶಃ ಪಾಳುಬಿದ್ದಂತಾಗಿತ್ತು. ಅಲ್ಲದೆ ಈ ಜಾಗ ಒತ್ತುವರಿ ಆಗಿದೆಯೆಂಬ ಕೂಗುಗಳೂ ಕೇಳಿಬಂದಿತ್ತು. ಇದರ ನಡುವೆ ಈ ಜಾಗದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಈ ಜಾಗವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಲಿಗೆ ಬಿಟ್ಟುಕೊಡುವ ಬಗ್ಗೆ ವಿವಿಧ ಹಂತಗಳಲ್ಲಿ ಪ್ರಯತ್ನವೂ ನಡೆಯಿತು.
ಆದರೆ ಈ ಮಧ್ಯ ಕೆರೆ, ಕಟ್ಟೆಗಳನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸುವಂತಿಲ್ಲವೆಂಬ ನ್ಯಾಯಾಲಯದ ಆದೇಶ ಹೊರಬಂದ ಹಿನ್ನೆಲೆಯಲ್ಲಿ ಗಾರೆನರಸಯ್ಯನ ಕಟ್ಟೆಯ ಜಾಗ ಹಾಗೆಯೇ ಉಳಿದಿತ್ತು. ಈ ಬಾರಿ ಎರಡು ಮೂರು ಬಾರಿ ಸುರಿದ ಮಳೆಯಿಂದಲೇ ದೊಡ್ಡ ಪ್ರಮಾಣದಲ್ಲಿ ನೀರು ಇಲ್ಲಿಗೆ ಹರಿದು ಬಂದಿದ್ದು, ಜನರನ್ನು ಆಕರ್ಷಿಸುತ್ತಿದೆ.