ಚಿತ್ರದುರ್ಗ:
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಮಟೆ ಬಾರಿಸಿಕೊಂಡು ಗಾಂಧಿವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಸುರೇಶ್‍ರವರ ಮೂಲಕ ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಯನ್ನು ಕೂಡಲೆ ಜಾರಿಗೆ ತರಬೇಕು. ರೈತರ ಮೇಲಿರುವ ಎಲ್ಲಾ ಸಾಲಗಳನ್ನು ಮನ್ನಾ ಮಾಡಿ ಋಣಮುಕ್ತರನ್ನಾಗಿಸಬೇಕು. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ ರೈತರಿಗೆ ಅಗತ್ಯವಾಗಿರುವ ನೀರು ಮತ್ತು ವಿದ್ಯುತ್ತನ್ನು ಪೂರೈಸಬೇಕು. ಬಗರ್‍ಹುಕುಂ ಸಾಗುವಳಿದಾರರಿಗೆ ಮತ್ತು ನಿವೇಶನರಹಿತರಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗಧಿಪಡಿಸಿ 25 ವರ್ಷ ಮೇಲ್ಪಟ್ಟ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಸಿಗುವತನಕ ಕನಿಷ್ಟ ನಿರುದ್ಯೋಗ ಭತ್ಯೆ ನೀಡಬೇಕು. ವಿಧಾನಸಭೆ ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಶೇ.40 ರಷ್ಟು ಮೀಸಲಾತಿ ಸಿಗಬೇಕು. ಚಿತ್ರದುರ್ಗಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದರು.
ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಓ.ನರಸಿಂಹಮೂರ್ತಿ, ಮಹಮದ್‍ಗೌಸ್‍ಪೀರ್, ಇಮಾಂಸಾಬ್, ಚಂದ್ರಪ್ಪ, ರುದ್ರಪ್ಪಸ್ವಾಮಿ, ಮಾರುತೇಶ್‍ರೆಡ್ಡಿ, ಜಬೀವುಲ್ಲಾ, ಖಮರುನ್ನಿಸಾ, ಜಯಮ್ಮ, ಗೀತ, ವನಜಾಕ್ಷಮ್ಮ, ಎಸ್.ವೆಂಕಟೇಶ್, ಮೈಲಾರಪ್ಪ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
