ಬುಗುಡನಹಳ್ಳಿ ಕೆರೆಗೆ ಹೇಮಾವತಿ

ತುಮಕೂರು

    ಹೆಮಾವತಿ ನೀರು ಭಾನುವಾರ ಬೆಳಿಗ್ಗೆ ಬುಗುಡನಹಳ್ಳಿ ಕೆರೆ ತಲುಪಿತು. ಇದರೊಂದಿಗೆ ನಗರದ ಕುಡಿಯುವ ನೀರಿನ ಆತಂಕ ನಿವಾರಣೆಯಾದಂತಾಯಿತು. ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದು ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಗುರುವಾರದಿಂದ ತುಮಕೂರು ನಾಲೆಗೆ ನೀರು ಹರಿಸಲಾಯಿತು.

    ಬಗುಡನಹಳ್ಳಿ ಕೆರೆಗೆ ನೀರು ತಲುಪಿದ ವೇಳೆ ಬೆಳಿಗ್ಗೆ ನಗರಪಾಲಿಕೆ ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ ಹಾಗೂ ಸದಸ್ಯರು ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿದರು. ನಗರ ಪಾಲಿಕೆ ಸದಸ್ಯರಾದ ಮಂಜುಳಾ, ದೀಪಶ್ರೀ, ಮಹೇಶ್, ಜೆ ಕುಮಾರ್, ಮಂಜುನಾಥ್, ಶಿವರಾಮು, ನರಸಿಂಹಮೂರ್ತಿ, ಶ್ರೀನಿವಾಸ್, ಶಶಿಕಲಾ, ನವೀನಾ, ಇಂಜಿನಿಯರ್ ವಸಂತ್ ಮೊದಲಾದವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

    ಬುಗುಡನಹಳ್ಳಿ ಕೆರೆಯಲ್ಲಿ ನೀರು ಸಂಪೂರ್ಣ ಖಾಲಿಯಾಗಿ ನಗರಕ್ಕೆ ಕುಡಿಯುವ ನೀರು ಸರಬರಾಜಿನ ಆತಂಕ ಸೃಷ್ಠಿಯಾಗಿತ್ತು. ಸುಮಾರು ನಾಲ್ಕು ಲಕ್ಷ ಜನಸಂಖ್ಯೆ ಇರುವ ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸುವುದು ನಗರಪಾಲಿಕೆಗೆ ಸವಾಲಾಗಿತ್ತು.

   ಹೇಮಾವತಿ ನೀರು ಹೊರತಾಗಿ ನೀರು ಸರಬರಾಜಿಗೆ ಕೊಳವೇ ಬಾವಿಗಳ ನೀರೇ ಅನಿವಾರ್ಯವಾಗಿತ್ತು. ಈ ಬಾರಿ ಮುಂಗಾರು ಮಳೆ ಬಾರದೆ ಕುಡಿಯುವ ನೀರಿಗೆ ಅಭಾವ ಎದುರಾಗಬಹುದು ಎಂಬ ಆತಂಕದಲ್ಲಿ ಮುಂಜಾಗ್ರತೆ ಕ್ರಮವಾಗಿ ನಗರ ಪಾಲಿಕೆ ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯುವ ಕಾಂiÀರ್i ಆರಂಭಿಸಿತ್ತು. ಕೆಲವೆಡೆ ಕೊರೆದು ಪಂಪು ಮೋಟಾರ್ ಅಳವಡಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದು ಬಂದಿರುವುದು ನಿಟ್ಟುಸಿರು ಬಿಟ್ಟಂತಾಗಿದೆ.

   ಇದೇ ಪ್ರಮಾಣದಲ್ಲಿ ನೀರು ಹರಿದು ಬಂದರೆ ಒಂದು ವಾರದಲ್ಲಿ ಬುಗುಡನಹಳ್ಳಿ ಕೆರೆ ಭರ್ತಿಯಾಗಲಿದೆ. ಹೊಸ ನೀರು ಐದಾರು ದಿನಗಳ ಕಾಲ ಕೆರೆಯಲ್ಲಿ ನಿಂತು ತಿಳಿಯಾದ ನಂತರ ಶುದ್ಧೀಕರಿಸಿ ಕುಡಿಯಲು ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

     ಹೆಮಾವತಿ ನೀರು ಹರಿದು ಬಂದಿದ್ದು ಜಿಲ್ಲೆಯ ರೈತರಿಗೆ ಸಂತಸ ತಂದಿದೆ. ಕುಡಿಯುವ ನೀರಿನ ಉದ್ದೇಶದ ಕೆರೆಗಳಿಗೆ ನೀರು ತುಂಬಿಸಿದರೂ ಆ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ, ರೈತರ ತೊಟದ ಕೊಳವೆಬಾವಿಗಳು ಜಲಾವೃತವಾಗಲಿವೆ. ಆದರೆ, ಕೆಲವೆಡೆ ನಾಲೆಯಿಂದ ಅನಧಿಕೃತವಾಗಿ ನೀರು ಪಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ತಡೆಯಲು ಅಧಿಕಾರಿಗಳ ತಂಡ ಎಚ್ಚರ ವಹಿಸಿದೆ. ನಾಲೆಗೆ ಪಂಪು ಮೋಟಾರ್ ಹಾಕಿ ನೀರು ಕದಿಯುವ ಪ್ರಯತ್ನ ಮಾಡಿದವರ ಪಂಪ್‍ಸೆಟ್ಟಿನ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

     ಜಿಲ್ಲೆಯ ಕುಡಿಯುವ ನೀರಿನ ಯೋಜನೆಯ ಎಲ್ಲಾ ಕೆರೆಗಳಿಗೂ ನೀರು ತುಂಬಿಸಿ ನಂತರ ನಗರದ ಅಮಾನಿಕೆರೆ, ಹೆಬ್ಬಾಕ ಕೆರೆಗಳಿಗೆ ನೀರು ಹರಿಸಿ ಸಂಗ್ರಹಿಸಲಾಗುವುದು ಎಂದು ಸಂಸದ ಜಿ ಎಸ್ ಬಸವರಾಜು ಹೇಳಿದ್ದಾರೆ. ನೀರಿನ ಒತ್ತಡದಲ್ಲಿ ನಾಲೆ ಒಡೆಯದಂತೆ ಇಂಜಿನಿಯರ್‍ಗಳು ಗಮನಹರಿಸಬೇಕು, ಎಲ್ಲೂ ಗೊಂದಲ, ಗಲಾಟೆಯಾಗದಂತೆ ಕೆರೆಗಳಿಗೆ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

     ಹೇಮಾವತಿ ಜಲಾಶಯದಲ್ಲಿ ಸಂಗ್ರಹವಾಗಬಹುದಾದ ನೀರಿನ ಪ್ರಮಾಣ ಆಧರಿಸಿ, ಯಾವ ಕೆರಗಳಿಗೆ ಆದ್ಯತೆ ಮೇಲೆ ನೀರು ಹರಿಸಬೇಕು ಎಂದು ತೀರ್ಮಾನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿ ಯಾವುದೇ ಗೊಂದಲ ವಾಗದಂತೆ ಕೆರಗಳಿಗೆ ಹೇಮಾವತಿ ನೀರು ಹರಿಸಲು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ನಾಲೆ ವ್ಯಾಪ್ತಿಯಲ್ಲಿ ಕಟ್ಟೆಚ್ಚರವಹಿಸಿ, ನಿಯಮಾನುಸಾರ ನೀರು ಹರಿಸಲು ನಿರ್ಧಾರ ಮಾಡಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap