ಹರಪನಹಳ್ಳಿ:
ಮಠ-ಮಾನ್ಯಗಳು ಭಕ್ತರ ಕಾಣಿಕೆ ಸ್ವೀಕರಿಸುವ ಅಧ್ಯಾತ್ಮಿಕ ಕೇಂದ್ರಗಳಾಗಬಾರದು. ಸರ್ವ ಧರ್ಮಗಳಲ್ಲಿ ಸಾಮರಸ್ಯ ಸಾರುವ ಕಾರ್ಖಾನೆಗಳಾಗಬೇಕು ಎಂದು ಬಳ್ಳಾರಿಯ ರುದ್ರಪ್ಪ ಮಿಸ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಅರಸಿಕೆರೆ ಕೋಲಶಾಂತೇಶ್ವರ ವಿರಕ್ತಮಠದಲ್ಲಿ ಬಸವ ಜಯಂತಿ ಪ್ರಯುಕ್ತ 35ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ, ಕೋಲಶಾಂತೇಶ್ವರ ಕೈಗಾರಿಕಾ ತರಬೇತಿ ಕೇಂದ್ರದ ನೂತನ ಕಾರ್ಯಾಗಾರ ಉದ್ಘಾಟನೆ, ಯಡಿಯೂರು ಡಂಬಳ, ಗದಗ ಪೂಜ್ಯ ಶ್ರೀ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು 60 ಸಂವತ್ಸವ ಪೂರೈಸಿದ ನೆನಪು ಹಾಗೂ ತೋಟದ ಬಸವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠ-ಮಾನ್ಯಗಳು ಬಸವಾದಿ ಶರಣರ ಆದರ್ಶ ಬಿತ್ತರಿಸುವ ಕೇಂದ್ರಗಳಾಗಬೇಕು. ಭಕ್ತರ ಕಾಣಿಕೆ ಸ್ವೀಕರಿಸಿ ಮಠದ ಅಭಿವೃದ್ಧಿ ದ್ವಿಗುಣಗೊಳಿಸುವ ಕೇಂದ್ರಗಳಾಗಬಾರದು. ಧರ್ಮ ಜಾಗರಣಾ ವೇದಿಕೆಗಳು ಜನರ ಕಷ್ಟ-ಸುಖ ಸ್ಪಂದಿಸುವ, ಚಿಂತನೆಗಳ ವಿನಿಮಯ ಸೂಕ್ತ ವೇದಿಕೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮುಖವಾಹಿನಿ ಆಗಬೇಕು ಎಂದರು.
ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯನವರು ಮಾತನಾಡಿ, ಮನುಕುಲಕ್ಕೆ ಬೆಳಕಾದ ಪವಿತ್ರ ದಿನವೇ ಬಸವ ಜಯಂತಿ. ಪೌರೋಹಿತ್ಯ, ಅಸಮಾನತೆ, ಸಂಘರ್ಷಗಳ ಅಂಧಕಾರದ ಕಾಳಘಟ್ಟದಲ್ಲಿ ಅಸಮಾನತೆ ಹೋಗಲಾಡಿಸಿ ವಿಶ್ವಕ್ಕೆ ಸಮಾನತೆ ಕ್ರಾಂತಿ ದೀಪ ಹಚ್ಚಿದ ಮಹಾಶರಣ ಬಸವಣ್ಣನವರು ಎಂದರು.
ಸಾಮೂಹಿಕ ವಿವಾಹಗಳಿಂದ ಜಾತ್ಯತೀತ ಮನೋಭಾವ ಹುಟ್ಟು ಹಾಕಿದ ಮಹಾ ಶರಣ ಬಸವಣ್ಣ, ಅಂದೇ ಐಶರಾಮಿ ವಿವಾಹಗಳು ಆರ್ಥಿಕ ಹೊರೆ ನೀಡುವುದನ್ನು ಅರಿವಿಗೆ ತಂದವರು. ಸಾಮೂಹಿಕ ವಿವಾಹ ಆರ್ಥಿಕ ಹೊರೆ ನಿರಾಳ ಮಾಡುವುದಲ್ಲದೆ, ಸಾಲದ ಹೊರೆ ಕಡಿಮೆ ಮಾಡುತ್ತದೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಸಾಮೂಹಿಕ ವಿವಾಹಗಳು ಕೋಟ್ಯಂತರ ಹಣ ಉಳಿಕೆಗೆ ಕಾರಣವಾಗುತ್ತವೆ. ಪ್ರೀತಿಯ ಜೊತೆಯಲ್ಲಿ ಆರ್ಥಿಕ ಮುಗ್ಗಟ್ಟು ಕಡಿಮೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ನವವಿವಾಹಿತರು ವೃದ್ಧ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡದೇ ತಂದೆ-ಅವರಿಗೆ ಗೌರವ ಪ್ರೀತಿ ನೀಡಬೇಕು. ಅಂದಾಗ ನಿಮ್ಮ ಭವಿಷ್ಯ ಉಜ್ವಲ ಹೊಂದಲು ಸಾಧ್ಯ ಎಂದರು.
ಗದುಗಿನ ಡಾ.ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಸಂಸಾರದಲ್ಲಿ ಸದ್ಗತಿ ಕಂಡಾಗ ಮಾತ್ರ ಜೀವನ ಸಾರ್ಥಕ. ನವ ವಿವಾಹಿತರು ಬಸವಾದಿ ಶರಣರ ಆಚರಣೆ ಅಳವಡಿಸಿಕೊಳ್ಳಿ. ಶರಣರ ತತ್ವಾದರ್ಶಗಳನ್ನು ಮನೆ ಮತ್ತು ಮನಗಳಿಗೆ ಮುಟ್ಟಿಸುವ ಕಾಯಕ ಮಾಡಬೇಕು. ಅರಸೀಕೆರೆ ಕೋಲಶಾಂತೇಶ್ವರ ಮಠದ ಪೀಠಾಧಿಪತಿ ಶಾಂತಲಿಂಗ ದೇಶೀಕೇಂದ್ರ ಸ್ವಾಮಿಗಳು ನುಡಿದಂತೆ ನಡೆಯುವ ಕಾಯಕ ಯೋಗಿಗಳಾಗಿದ್ದಾರೆ. ಅವರ ಸಾಧನೆ ಶ್ಲಾಘನೀಯ ಎಂದರು.
ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಮನುಕುಲದ ಒಳಿತಿಗಾಗಿ ಶ್ರೀಮಠವು ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಮೊದಮೊದಲು ನಾಲ್ಕೈದು ಜೋಡಿಗಳ ಸಾಮೂಹಿಕ ವಿಹಾಗಳು ನಡೆದುತ್ತಿದ್ದವು. ಈಗ ನೂರಾರು ಸಂಖ್ಯೆಗೆ ಏರಿಕೆ ಕಾಣುತ್ತಿರುವುದು ಜನರು ಮಠದ ಮೇಲಿನ ಗೌರವ ಸಾರುತ್ತದೆ ಎಂದರು.
ಬಿಜೆಪಿ ಮುಖಂಡ ವೈ.ದೇವೇಂದ್ರಪ್ಪ ಮಾತನಾಡಿ, ಕಾಯಕಯೋಗಿ ಶ್ರೀಗಳು ಪ್ರತಿವರ್ಷ ನಡೆಯುವ ಸಾಮೂಹಿಕ ವಿವಾಹಕ್ಕೆ ಶ್ರೀಗಳು ಯಾರಿಂದಲೂ ದೇಣಿಗೆ ಬಯಸದೇ ಮಠದ ಆದಾಯದಲ್ಲೇ ವಿವಾಹ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಮಠವಿರುವುದು ಇಲ್ಲಿನ ಜನರ ಪುಣ್ಯ ಎಂದರು.ಹಡಗಲಿ ಗವಿಸಿದ್ದೇಶ್ವರ ಮಠದ ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. 48 ಜೋಡಿಗಳ ವಿವಾಹ ಕಾರ್ಯಕ್ರಮ ಜರುಗಿತು.
ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಸಿದ್ದಪ್ಪ, ಬಸವ ಟಿವಿ ಮಾಲೀಕರಾದ ಕೃಷ್ಣಪ್ಪ, ಎಂ.ರಾಜಶೇಖರ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಶರಣಪ್ಪ ಕುಂಬಾರ, ಎಂ.ವಿಶ್ವನಾಥಯ್ಯ, ನಾಗರಾಜಪ್ಪ, ಕೆ.ಆನಂದಪ್ಪ ಇತರರು ಉಪಸ್ಥಿತರಿದ್ದರು.