ದಾವಣಗೆರೆ:
ನಗರದ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಅಕ್ರಮವಾಗಿ ಮರಗಳನ್ನು ಕಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜಿನ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜನಸಾಮಾನ್ಯರ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಬೆಳೆಕೆರೆ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ವಿಟಿಯು ಅಧೀನದಲ್ಲಿರುವ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜು ಸರ್ಕಾರಿ ಕಾಲೇಜು ಆಗಿದೆ. ಕಾಲೇಜಿಗೆ ಸುಮಾರು 60 ವರ್ಷ ಇತಿಹಾಸದಲ್ಲಿ ಹಚ್ಚ ಹಸಿರಾಗಿದ್ದ ಕಾಲೇಜಿನ ಆವರಣದಲ್ಲಿ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಕಾಲೇಜಿನ ಪ್ರಾಂಶುಪಾಲರು , ಅಸಿಸ್ಟೆಂಟ್ ರಿಜಿಸ್ಟ್ರಾರ್, ಸೂಪರ್ ವೈಸರ್‍ಗಳು ಹಾಗೂ ಕಾಲೇಜಿನ ಕೆಲವು ಸಿಬ್ಬಂದಿಗಳು ಸೇರಿ ಅಕ್ರಮವಾಗಿ ಮರಗಳನ್ನು ಕಡೆದು ಮಾರಾಟ ಮಾಡುತ್ತಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಇಲ್ಲಿಯವರೆಗೂ ಆವರಣದಲ್ಲಿದ್ದ ಹತ್ತಕ್ಕೂ ಹೆಚ್ಚು ಮರಗಳನ್ನು ಕಡೆಯಲಾಗಿದೆ. ಕಾಲೇಜಿನ ಭೌತಶಾಸ್ತ್ರ ವಿಭಾಗದ ಹಿಂಬದಿಯಲ್ಲಿರುವ ಸುಮಾರು ಮೂರು ಬೃಹದಾಕಾರದ ಮರಗಳನ್ನು, ಕಂಪ್ಯೂಟರ್ ಸೈನ್ಸ್ ವಿಭಾಗದ ಬಳಿ ಇದ್ದ ದೊಡ್ಡ ಮರವನ್ನು, ಕ್ಯಾಂಟೀನ್ ಎದುರಿದ್ದ ಮರಗಳನ್ನು ಸಂಪೂರ್ಣ ಬುಡ ಸಮೇತ ಕಡಿದು ಹಾಕಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ