ಮೈತ್ರಿ ಧರ್ಮ ಪಾಲಿಸಿ, ಕೈ ಕೊಡುವ ಕೆಲಸ ಮಾಡದೆ ಕೈ ಹಿಡಿಯುವ ಕೆಲಸ ಮಾಡುತ್ತೇವೆ: ಹೆಚ್.ಎಸ್.ಶಿವಶಂಕರ್

ಹರಿಹರ:

       ನಾನು ಹಾಗೂ ಜೆಡಿಎಸ್ ಪಕ್ಷದ ನಮ್ಮ ಅನುಯಾಯಿಗಳೆಲ್ಲರೂ ಸಹ ಮೈತ್ರಿ ಧರ್ಮ ಪಾಲನೆ ಮಾಡುವುದರ ಜೊತೆಗೆ,ಕೈ ಕೊಡುವ ಕೆಲಸ ಮಾಡದೆ ಕೈ ಹಿಡಿಯುವ ಕೆಲಸ ಮಾಡುತ್ತೇವೆ ಮುಂದೆ ಬಂದದ್ದನ್ನು ನೋಡಿಕೊಳ್ಳುತ್ತೇವೆ ಎಂದು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಹೇಳಿದರು.

         ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣಾ ನಿಮಿತ್ತ ಇಂದು ಸಂಜೆ ನಡೆಸಿದ ಜೆಡಿಎಸ್ ಕಾರ್ಯಕರ್ತರ ಸಭೆಯ ಉದ್ಘಾಟನೆ ನೆರವೇರಿಸಿ ಕಿಕ್ಕಿರಿದು ತುಂಬಿದ್ದ ಸಭೆ ಯಲ್ಲಿ ಮಾತನಾಡಿದರು.

         ಲೋಕಸಭಾ ಚುನಾವಣೆಗೆ ರಾಜ್ಯ ಮಟ್ಟದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಏರ್ಪಾಡಾಗಿದೆ.ಆದರೆ ಅಭ್ಯರ್ಥಿಯೊಬ್ಬರನ್ನು ಹೊರತುಪಡಿಸಿ ಜಿಲ್ಲೆಯ ಯಾವುದೇ ಕಾಂಗ್ರೆಸ್ ಮುಖಂಡರಾಗಲಿ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರು ವವರು ನನ್ನನ್ನಾಗಲೀ ಅಥವಾ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ ನವರನ್ನಾಗಲಿ ಸಂಪರ್ಕಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

         ನಮ್ಮ ಪಕ್ಷದ ವರಿಷ್ಠರ ಆದೇಶದಂತೆ ಮೈತ್ರಿ ಧರ್ಮವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ.ಈ ಹಿಂದೆ ನಾನು ಗೂಳಿಯ ಎದುರು ಗೂಳಿಯೇ ನಿಲ್ಲಿಸುವುದು ಸೂಕ್ತ, ಗೂಳಿಯ ಮುಂದೆ ಗುರಿ ನಿಲ್ಲುವುದು ಬೇಡ, ಗೂಳಿಗೆ ಗೂಳಿಯೇ ಸಾಟಿ ಎಂದು ಹೇಳಿದ್ದೆ.ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಬಿಜೆಪಿ ಅಭ್ಯರ್ಥಿ ಎದುರು ಹಣವನ್ನು ಹೊಂದಿರುವ ವ್ಯಕ್ತಿ ಸ್ಪರ್ಧಿಸುವುದು ಸೂಕ್ತ ಎನ್ನುವ ಉದ್ದೇಶದಿಂದ ಹೇಳಿದ್ದೇನೆಯೇ ಹೊರತು ನಿಮ್ಮನ್ನು ಉದ್ದೇಶಿಸಿ ಅಲ್ಲ ಎಂದು ಮಂಜಪ್ಪ ಅವರಿಗೆ ಸಮಜಾಯಿಷಿ ನೀಡಿದರು.

         ಕಳೆದ ವರ್ಷಗಳ ಹಿಂದೆ ದಿ.ಚೆನ್ನಯ್ಯ ಒಡೆಯರ್ ಅವರು ಸಂಸದರಾಗಿ ಆಯ್ಕೆಯಾಗುವುದಕ್ಕೆ ನನ್ನ ತಂದೆ ದಿ.ಎಚ್.ಶಿವಪ್ಪನವರ ಬೆಂಬಲದಿಂದಲೇ ಎನ್ನುವುದನ್ನು ಸ್ವತಃ ಒಡೆಯರ್ ಹಾಗೂ ಅಂದಿನ ಕಾಂಗ್ರೆಸ್ ನಾಯಕರುಗಳು ಹೇಳಿರುವ ಸಂಗತಿ ಯನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ ಎಂದು ಹೇಳಿದ ಅವರು ನಮ್ಮ ಬೆಂಬಲವಿಲ್ಲದೆ ನೀವು ಗೆಲ್ಲುವುದು ತುಂಬಾ ಕಷ್ಟಕರವಾಗಲಿದೆ ಎಂಬುದನ್ನು ಸಹ ತುಂಬ ಸೂಚ್ಯವಾಗಿ ಅಭ್ಯರ್ಥಿ ಮಂಜಪ್ಪ ಅವರಿಗೆ ತಿಳಿಸಿದರು.

          ಮನುಷ್ಯನಾಗಿ ಹುಟ್ಟಿದ ಮೇಲೆ ಸಾಲ,ಸಹಾಯ ಮತ್ತು ಸೇಡನ್ನು ತೀರಿಸಲೇಬೇಕು. ನಾನೂ ಸಹ ಮನುಷ್ಯನಾಗಿದ್ದೇನೆ ಎಂದು ಹೇಳಿದ ಅವರು, ನನ್ನ ಶಾಸಕ ಅವಧಿಯಲ್ಲಿ ಕಾಂಗ್ರೆಸ್ಸಿನ ಜಿಲ್ಲಾ ವರಿಷ್ಠರು ನೀಡಿದ ತೊಂದರೆ ಹಿಂಸೆಯನ್ನು ನಾನು ಸಹಿಸಿ ಕೊಂಡಿದ್ದೇನೆ.5 ವರ್ಷ ಪೂರ್ತಿ ಜಿಲ್ಲಾ ಮಂತ್ರಿ ಯಾಗಿದ್ದರೂ ಸಹ ನನ್ನ ಕ್ಷೇತ್ರಕ್ಕೆ ಯಾವುದೇ ಸಹಕಾರ ನೀಡಿಲ್ಲ, ಆದರೆ ನಾನು ನನ್ನ ಶಕ್ತಿ ಮೀರಿ ಸರ್ಕಾರದಿಂದ ಸುಮಾರು 370 ಕೋಟಿಗಳಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

         ಹರಿಹರ ತಾಲ್ಲೂಕಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖ ಎನ್ನುವಂತೆ ಬಿಂಬಿತವಾಗಿದೆ, ಕೆಲ ಸಂದರ್ಭದಲ್ಲಿ ಜೆಡಿಎಸ್ ನವರನ್ನು ತುಂಬಾ ಹಗುರವಾಗಿ ಕಂಡಿದ್ದಾರೆ ಆದರೆ ಎಂದು ನಮ್ಮ ಸಹಾಯ ಕೇಳಿಕೊಂಡು ಬಂದಿ ದ್ದಾರೆ.ಸಂತೋಷ, ಕೆಲವೊಮ್ಮೆ ಹುಲ್ಲು ಕಡ್ಡಿಯೂ ಸಹ ಸಹಾಯಕ್ಕೆ ಬೇಕಾಗುತ್ತದೆ ಎಂಬುವುದನ್ನು ಮರೆಯಬಾರದು.

         ಮೈತ್ರಿ ಅಭ್ಯರ್ಥಿ ಎಚ್ ಬಿ ಮಂಜಪ್ಪ ಒಳ್ಳೆಯ ವ್ಯಕ್ತಿಯಾಗಿದ್ದು ಅವರನ್ನು ಗೆಲ್ಲಿಸಲು ಎಲ್ಲರೂ ಸೇರಿ ನಿಷ್ಠೆಯಿಂದ ಪ್ರಯತ್ನಿಸೋಣ ಎಂದ ಅವರು ಶಾಸಕ ರಾಮಪ್ಪನವರ ಬಗ್ಗೆ ಮಾತನಾಡಿ ಅವರು ತುಂಬಾ ಒಳ್ಳೆಯ ರಾಗಿದ್ದು ಅವರ ಅಕ್ಕಪಕ್ಕ ಇರುವವರು ಒಳ್ಳೆಯವರಲ್ಲ ಎಂಬುದನ್ನು ಹೇಳಿದರು.

         ವೇದಿಕೆಯಲ್ಲಿದ್ದ ಶಾಸಕ ಎಸ್ ರಾಮಪ್ಪ ಮಾತನಾಡಿ ಮೂರು ಬಾರಿ ಕಾಂಗ್ರೆಸ್ .ಚೆನ್ನಯ್ಯ ಒಡೆಯರ್ ಅವರನ್ನು ನಾವು ಗೆಲ್ಲಿಸಿದ ಇತಿಹಾಸವಿದೆ ಆದರೆ ಕಳೆದ ಮೂರು ಚುನಾವಣೆಗಳಲ್ಲಿ ನಮ್ಮ ಸಂಸದರು ಆಯ್ಕೆಯಾಗಿಲ್ಲ, ಆದ್ದರಿಂದ ಈ ಬಾರಿ ಎಲ್ಲರೂ ಸೇರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಮತ್ತೆ ಕಾಂಗ್ರೆಸ್ ಸಂಸದರನ್ನು ಆರಿಸಿ ತರೋಣ ಎಂದು ಹೇಳಿದರು.

          ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಮಾತ ನಾಡಿ ಇಂದು ಜೆಡಿಎಸ್ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾದ ನನಗೆ ಬೆಂಬಲ ನೀಡಲು ತೆಗೆದು ಕೊಂಡ ನಿರ್ಧಾರದಿಂದ ನನಗೆ ಸಂತೋಷವಾಗಿದ್ದು ಎಚ್.ಎಸ್.ಶಿವಶಂಕರ್ ಮತ್ತು ಬಿ.ಚಿದಾನಂದಪ್ಪ ಅವರನ್ನು ನಾನು ಅಭಿನಂದಿಸುತ್ತೇನೆ.

         ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದ ನಾಯಕರುಗಳು ಜಾತ್ಯತೀತರೆಲ್ಲ ಒಗ್ಗಟ್ಟಾಗಿ ಕೋಮುವಾದಿ ಶಕ್ತಿಯನ್ನು ದಮನ ಮಾಡುವ ನಿಟ್ಟಿನಲ್ಲಿ ಮೈತ್ರಿ ಸರಕಾರ ರಚನೆ ಮಾಡಿ ದ್ದಾರೆ ಮತ್ತು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ.

           ನಾನು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ ಶಾಮ ನೂರು ಕುಟುಂಬದವರು ರೈತಾಪಿ ಕುಟುಂಬದ ನನ್ನನ್ನು ಗುರುತಿಸಿ ಚುನಾವಣೆಗೆ ಸ್ಪರ್ಧಿಸಲು ತಿಳಿಸಿದ್ದಾರೆ.ಹಿರಿಯರಾದ ಶಾಮನೂರು ಶಿವ ಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್ ಮಲ್ಲಿ ಕಾರ್ಜುನ್ ಅವರ ಆಶೀರ್ವಾದ,ಜಿಲ್ಲೆಯ ಅನೇಕ ನಾಯಕರುಗಳ ಸಹಕಾರ ಹಾಗೂ ಜೆಡಿಎಸ್ ಬೆಂಬಲದೊಂದಿಗೆ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.
ಈ ವೇಳೆ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ,ಚಂದ್ರಯ್ಯ ಹುಲುಗಿನಹೊಳೆ, ದೇವ ರಾಜಪ್ಪ ವಾಸನ, ಬಿ.ರೇವಣಸಿದ್ದಪ್ಪ ,ಕುಂಬಳೂರು ವಿರೂಪಾಕ್ಷಪ್ಪ,ಏ.ಕೆ.ನಾಗಪ್ಪ,ಡಿ.ಎಂ.ಹಾಲಸ್ವಾಮಿ, ಅಮಾನುಲ್ಲಾಖಾನ್, ಮನ್ಸೂರ್ ಅಲಿ,ಮುಜಾ ಮಿಲ್ ಖಾನ್,ಬಂಡೇರ ತಿಮ್ಮಣ್ಣ,ಅಡಿವೇಶ್,ಟಿ. ಗಣೇಶ್, ವಕೀಲ ವಾಮನಮೂರ್ತಿ, ಬಸವನಗೌಡ,ದೀಟೂರು ಶೇಖರಪ್ಪ,ಸಂಜೀವಪ್ಪ, ಬಾನುವಳ್ಳಿ ಮಲ್ಲಿಕಾರ್ಜುನ್, ಶೀಲಾ ಕುಮಾರಿ, ಲಕ್ಷ್ಮಿ ಆಚಾರ್,ಬಿ.ಟಿ.ಹೇಮಾವತಿ,ನಗೀನಾ ಸುಬಾನ್ಸಾಬ್ ,ಪಿ.ಎನ್.ವಿರೂಪಾಕ್ಷ ,ಬಿ.ಆರ್.ಸುರೆಶ್,ಬಸವರಾಜಪ್ಪ ಎಲ್.ಬಿ.ಹನುಮಂತಪ್ಪ,ಪ್ರೇಮ್ ಕುಮಾರ್ ಅಡಕಿ,ಚೂರಿ ಜಗದೀಶ್,ಮಂಜುನಾಥ್, ಎಚ್.ನಾಗಭೂಷಣ,ಎಚ್.ಸುಧಾಕರ್,ಗೀತಾ ಕದರ ಮಂಡಲಗಿ, ನೇತ್ರಾವತಿ,ಪಾರ್ವತಿ,ವಿದ್ಯಾ, ಭಾಗ್ಯದೇವಿ,ಶೀಲಾ ಕೊಟ್ರೇಶ್ ಅಲ್ಲದೇ ಇನ್ನೂ ಅನೇಕ ಕಾಂಗ್ರೆಸ್ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap