ಬೆಳಗಾವಿ
ರಾಜ್ಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಡಿ.21 ರಂದು ದೆಹಲಿಗೆ ತೆರಳಲಿದ್ದಾರೆ.ಅಂದು ಸಂಜೆ ನಾಲ್ಕು ಗಂಟೆಗೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭೇಟಿಯ ವೇಳೆ, ಸಚಿವ ಸಂಪುಟ ವಿಸ್ತರಣೆ, ಸಂಸದೀಯ ಮತ್ತು ರಾಜಕೀಯ ಕಾರ್ಯದರ್ಶಿಗಳ ನೇಮಕ, ನಿಗಮ ಮಂಡಳಿ ಅಧ್ಯಕ್ಷರು – ಉಪಾಧ್ಯಕ್ಷರ ನೇಮಕ ಕುರಿತಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಆದರೆ ಡಿ.22 ರಂದು ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆ ಇದೆ. ಆದರೆ ಇದು ಇನ್ನೂ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.ರಾಹುಲ್ ಗಾಂಧಿ ಸಂಪುಟ ವಿಸ್ತರಣೆಗೆ ಹಸಿರುನಿಶಾನೆ ತೋರಿದ ಬಳಿಕವಷ್ಟೇ ದಿನಾಂಕ ನಿಗದಿಯಾಗಲಿದೆ ಎಂದು ಅವು ಸ್ಪಷ್ಟಪಡಿಸಿವೆ.ಈ ನಡುವೆ ಅಸಮಾಧಾನಿತ ಉತ್ತರ ಕರ್ನಾಟಕದ ಶಾಸಕರ ನಿಯೋಗ ಕೂಡ ರಾಹುಲ್ ಭೇಟಿಗೆ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಸಮಯಾವಕಾಶ ಸಿಕ್ಕಿಲ್ಲ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
