ಬೆಂಗಳೂರು: 45ಕಡೆ ಲೋಕಾ ದಾಳಿ….!

ಬೆಂಗಳೂರು: 

       ನಗರದಾದ್ಯಂತ ಬಿಬಿಎಂಪಿಯ ಕಂದಾಯ ಮತ್ತು ನಗರ ಯೋಜನಾ ವ್ಯಾಪ್ತಿಯ 45 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಹಲವು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.

     ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ದುರಾಡಳಿತದ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದರಿಂದ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡತಗಳನ್ನು ವಿಲೇವಾರಿ ಮಾಡುವಲ್ಲಿ ಬಿಬಿಎಂಪಿ ಸಿಬ್ಬಂದಿ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದರು ಎಂದು ದೂರುಗಳು ಕೇಳಿಬಂದಿದ್ದವು.

     ದಾಳಿ ಸಮಯದಲ್ಲಿ, ಪಾಲಿಕೆ ಕಚೇರಿಗಳಲ್ಲಿ ದಾಖಲೆ ಇರದ ನಗದು ಮತ್ತು ಹಲವು ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಪೂರ್ವ, ಬೊಮ್ಮನಹಳ್ಳಿ, ಯಲಹಂಕ, ಮಹದೇವಪುರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ವಿಜಯನಗರ, ಬಸವನಗುಡಿ, ರಾಜರಾಜೇಶ್ವರಿ ನಗರ, ಯಶವಂತಪುರ ಮತ್ತು ದಾಸರಹಳ್ಳಿಯ ಬಿಬಿಎಂಪಿ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

     13 ನ್ಯಾಯಾಂಗ ಅಧಿಕಾರಿಗಳು, 7 ಪೊಲೀಸ್ ವರಿಷ್ಠಾಧಿಕಾರಿಗಳು, 19 ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 26 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು ಹಲವು ಪೊಲೀಸರು ಈ ಕಾರ್ಯಾಚರಣೆಯ ಭಾಗವಾಗಿದ್ದರು.

    ಕರ್ನಾಟಕ ಲೋಕಾಯುಕ್ತದ ಡಿಜಿಪಿ ಮತ್ತು ಐಜಿಪಿ ಮೇಲ್ವಿಚಾರಣೆಯಲ್ಲಿ ದಾಳಿ ನಡೆಸಲಾಗಿದೆ. ನಗರದ ಅಕ್ಕಪಕ್ಕದ ಜಿಲ್ಲೆಗಳ ಲೋಕಾಯುಕ್ತ ಕಚೇರಿಯ ಪೊಲೀಸರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

    ಮೂಲಗಳ ಪ್ರಕಾರ, ಕಂದಾಯ ಮತ್ತು ಪಟ್ಟಣ ಯೋಜನಾ ಕಚೇರಿಗಳ ಸಿಬ್ಬಂದಿ ಯಾವುದೇ ಪ್ರಮಾಣ ಪತ್ರ ನೀಡಬೇಕಿದ್ದರೂ 50 ಸಾವಿರ ರೂ. ಗೂ ಹೆಚ್ಚು ಲಂಚಕ್ಕೆ ಬೇಡಿಕೆಯಿಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಖಾತೆ ವರ್ಗಾವಣೆ, ಖಾತೆ ನೋಂದಣಿ, ಕಟ್ಟಡಗಳಿಗೆ ಪರವಾನಗಿ, ಪ್ರಾರಂಭಿಕ ಪ್ರಮಾಣ ಪತ್ರ, ವಾಣಿಜ್ಯ ಪರವಾನಗಿ, ಜನನ ಮತ್ತು ಮರಣ ಪ್ರಮಾಣ ಪತ್ರ ಮತ್ತು ಇತರ ದಾಖಲೆಗಳನ್ನು ನೀಡಲು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು ಎಂದು ತಿಳಿದುಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap