ಬೆಂಗಳೂರು : 12 RTO ಕಛೇರಿಗಳ ಮೇಲೆ ಲೋಕಾ ದಾಳಿ

ಬೆಂಗಳೂರು:

      ಕರ್ನಾಟಕ ಲೋಕಾಯುಕ್ತ ಪೊಲೀಸ್ ಮತ್ತು ನ್ಯಾಯಾಂಗ ವಿಭಾಗಗಳನ್ನೊಳಗೊಂಡ ತಂಡಗಳು ಬುಧವಾರ ಬೆಂಗಳೂರಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳ ಮೇಲೆ (ಆರ್‌ಟಿಒ) ಏಕಕಾಲದಲ್ಲಿ ದಿಢೀರ್ ದಾಳಿ ನಡೆದಿದೆ. ಆರ್‌ಟಿಒಗಳಲ್ಲಿ ಅಕ್ರಮಗಳು ಮತ್ತು ವ್ಯಾಪಕ ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ಹಲವಾರು ದೂರುಗಳು ಬಂದಿದ್ದರಿಂದ ಈ ಭಾರಿ ಅನಿರೀಕ್ಷಿತವಾಗಿ ದಾಳಿ ನಡೆಸಲಾಯಿತು. 

     ಜಯನಗರ ಮತ್ತು ರಾಜಾಜಿನಗರದ ಆರ್‌ಟಿಒಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಮತ್ತು ಯಲಹಂಕ ಮತ್ತು ಯಶವಂತಪುರದಲ್ಲಿನ ಆರ್‌ಟಿಒಗಳಿಗೆ  ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆಎನ್ ಫಣೀಂದ್ರ ಭೇಟಿ ನೀಡಿದರು.ಲೋಕಾಯುಕ್ತ ಪೊಲೀಸರಿಗೆ ಸಾರ್ವಜನಿಕರಿಂದ ಆರ್‌ಟಿಒಗಳಲ್ಲಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಹಲವಾರು ದೂರುಗಳು ಬಂದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

     ಡ್ರೈವಿಂಗ್ ಲೈಸೆನ್ಸ್ ಮತ್ತು ಪರ್ಮಿಟ್ ನೀಡಲು ಬಂದಿರುವ ಅರ್ಜಿಗಳ ಸಂಖ್ಯೆ, ಬಾಕಿ ಇರುವ ಅರ್ಜಿಗಳು ಮತ್ತು ಕಾರಣಗಳು, ಯಾವುದೇ ಕಾರಣ ನೀಡದೆ ಅರ್ಜಿಗಳನ್ನು ತಿರಸ್ಕರಿಸುವುದು, ಏಜೆಂಟ್ ಗಳ ಹಾವಳಿ ಮತ್ತಿತರ ಅಕ್ರಮ ಚಟುವಟಿಕೆ ಕುರಿತು ಮಾಹಿತಿ ಸಂಗ್ರಹಿಸುವ ಮೂಲಕ ಆರೋಪ ನಿಜವೆಂದು ದೃಢಪಡಿಸಿದ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರ್‌ಟಿಒಗಳಲ್ಲಿ ದೋಷಾರೋಪಣೆ ದಾಖಲೆಗಳನ್ನು ಶೋಧಿಸಿ ವಶಪಡಿಸಿಕೊಳ್ಳಲು ವಾರಂಟ್ ಹೊರಡಿಸಿದ್ದಾರೆ.

     ಬೆಂಗಳೂರಿನಲ್ಲಿರುವ 12 ಆರ್‌ಟಿಒಗಳ ಮೇಲಿನ ದಾಳಿಗಾಗಿ ಲೋಕಾಯುಕ್ತರು 10 ತಂಡಗಳನ್ನು ರಚಿಸಿದ್ದಾಗಿ ಮೂಲಗಳು ತಿಳಿಸಿವೆ. ಆರ್‌ಟಿಒಗಳೊಂದಿಗೆ ವ್ಯವಹರಿಸುವ ಖಾಸಗಿ ಏಜೆಂಟರ ಕಚೇರಿಗೂ ತಂಡವೊಂದು ಭೇಟಿ ನೀಡಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link