ಬೆಂಗಳೂರು:
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅವರ ಮಾಜಿ ಪರ್ಸನಲ್ ಸೆಕ್ರೆಟರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಭೈರತಿ ಸುರೇಶ್ ಅವರ ಪರ್ಸನಲ್ ಸಕ್ರೆಟರಿ ಆಗಿದ್ದ ಮಾರುತಿ ಬಗಲಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈವರೆಗೆ 8 ನಿವೇಶನಗಳು, 5 ವಾಸ ಮನೆ, 19 ಎಕರೆ ಜಮೀನು ಆಸ್ತಿ ಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾರುತಿ ಬಗಲಿ ಎರಡು ವರ್ಷಗಳ ಕಾಲ ಸಚಿವ ಭೈರತಿ ಸುರೇಶ್ ಅವರ ಪಿಎಸ್ ಆಗಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದರು ಎಂದು ತಿಳಿದುಬಂದಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ಇವರ ಮೇಲೆ ಹಲವು ಅಕ್ರಮಗಳ ದೂರುಗಳು ಬಂದಿದ್ದವು.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಲೋಕಾಯುಕ್ತ ಅಧಿಕಾರಿಗಳು ಓರ್ವ ಐಎಎಸ್ ಅಧಿಕಾರಿ ಸೇರಿದಂತೆ 8 ಸರಕಾರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ಮಾಡಿದ್ದರು. ದಾಳಿಯ ವೇಳೆ ಚಿನ್ನ ನಗದು ಸೇರಿದಂತೆ ಒಟ್ಟು 37.41 ಕೋಟಿಯ ಆಸ್ತಿ ಪತ್ತೆಯಾಗಿದೆ. ನಿನ್ನೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ 41 ಕಡೆಗಳಲ್ಲಿ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಪ್ರಮಾಣದ ಚರ-ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದರು. ಐಐಎಸ್ ಮಹಿಳಾ ಅಧಿಕಾರಿ ಒಳಗೊಂಡಂತೆ ಎಂಟು ಮಂದಿ ಅಧಿಕಾರಿಗಳ ಮನೆಗಳ ದಾಳಿ ನಡೆಸಿದ್ಧಾರೆ.
ದಾಳಿ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ, ಜಮೀನಿಗೆ ಸೇರಿದ ಪತ್ರಗಳು, ಲಕ್ಷಾಂತರ ರೂಪಾಯಿ ನಗದು, ಕೋಟಿ ಬೆಳೆಬಾಳುವ ಚಿನ್ನಾಭರಣ ಸೇರಿದಂತೆ ಒಟ್ಟು 37.41 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ. ಬೆಂಗಳೂರು ನಗರ, ಮೈಸೂರು, ತುಮಕೂರು, ಕಲಬುರಗಿ, ಕೊಪ್ಪಳ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮನೆ ದಾಳಿ ನಡೆಸಿ ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.