ಸರ್ಕಾರಿ ಸಂಸ್ಥೆಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ

ಬೆಂಗಳೂರು:

   ಸಾರ್ವಜನಿಕರಿಂದ ಬಂದ ಹಲವಾರು ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್ಬಿ) ಕಚೇರಿಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

  ಸುಮಾರು 45 ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ಅವರ ನೇತೃತ್ವದಲ್ಲಿ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿದ್ದು, ದಾಖಲೆಗಳನ್ನು ಜಪ್ತಿ ಮಾಡಿದರು.

   ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು, ಎಸ್‌.ಪಿ.ವಂಶಿ ಕೃಷ್ಣ ನೇತೃತ್ವದ ತಂಡದೊಂದಿಗೆ ದಾಳಿ ನಡೆಸಿದರು. ಆನಂದ ರಾವ್ ವೃತ್ತ ಹಾಗೂ ಮಲ್ಲೇಶ್ವರದಲ್ಲಿರುವ ಬೆಸ್ಕಾಂ ಕಚೇರಿ, ಕ್ರಸೆಂಟ್‌ ರಸ್ತೆ ಹಾಗೂ ಮಲ್ಲೇಶ್ವರಂನಲ್ಲಿರುವ ಜಲ ಮಂಡಳಿ ಕಚೇರಿಯಲ್ಲಿ ತಪಾಸಣೆ ನಡೆಸಿದರು.

   ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಎಂ.ಜಿ. ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿ, ವಿವೇಕಾನಂದ ರಸ್ತೆ ಹಾಗೂ ಇಂದಿರಾನಗರದಲ್ಲಿನ ಜಲ ಮಂಡಳಿ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದರು.

   ಕರ್ತವ್ಯಲೋಪ, ದುರಾಡಳಿತ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ 83 ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳ ವಿರುದ್ಧ 63 ದೂರುಗಳು ಬಂದಿದ್ದು, ಈ ಸಂಬಂಧ ಲೋಕಾಯುಕ್ತ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.

   ಸಹಕಾರ ನಗರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಳೆದ 45 ದಿನಗಳಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿರುವ ಕುರಿತಂತೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

   ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿಗಳು, ‘ವಿದ್ಯುತ್, ನೀರಿನ ಸಂಪರ್ಕ ಹಾಗೂ ವಿವಿಧ ಸೇವೆ ಪಡೆಯಲು ಜನರು ತೊಂದರೆ ಅನುಭವಿಸುತ್ತಿದ್ದರು. ಅಧಿಕಾರಿಗಳ ಮೂಲಕ ಗೌಪ್ಯ ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಲಾಗಿತ್ತು. ಅಕ್ರಮಗಳ ಬಗ್ಗೆ ಖಾತರಿಪಡಿಸಿಕೊಂಡು, ಸ್ವಯಂಪ್ರೇರಿತವಾಗಿ ಬೆಸ್ಕಾಂ ವಿರುದ್ಧ 73 ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿ ವಿರುದ್ಧ 63 ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ನಗರಾದ್ಯದಂತ 45 ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು.

   ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಬೆಸ್ಕಾಂ ವಿರುದ್ಧ ಅತಿ ಹೆಚ್ಚು ಪ್ರಕರಣ ದಾಖಲಿಸಿದ್ದೇವೆ. ತಪ್ಪಿತಸ್ಥರಿಗೆ ನೋಟಿಸ್ ನೀಡಿ, ತಿದ್ದಿಕೊಳ್ಳಲು ಅವಕಾಶ ನೀಡಲಾಗುವುದು. ಬಳಿಕ ಅಗತ್ಯವಿದ್ದರೆ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಸಾರ್ವಜನಿಕರಿಗೆ ತೊಂದರೆ ಆಗಬಾರದು. ಭ್ರಷ್ಟಾಚಾರ ತೊಲಗಬೇಕು. ನಾಗರಿಕರು ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು ಎಂದು ಹೇಳಿದರು.

   ಕಚೇರಿಯಲ್ಲಿ ಹಾಜರಾತಿ ಪುಸ್ತಕ ಸರಿಯಾಗಿ ನಿರ್ವಹಿಸಿಲ್ಲ. ಅಧಿಕಾರಿಗಳು ಗೈರು ಹಾಜರಾಗಿದ್ದರು. ಸಹಿ ಮಾಡಿ ಎಲ್ಲೋ ಹೋಗಿದ್ದರು. ಅಧಿಕಾರಿಗಳಿಗೆ ಫೋನ್ ಮಾಡಿದರೆ ತೆಗೆಯುವುದಿಲ್ಲ. ಸರಿಯಾಗಿ ಕೆಲಸ ಮಾಡಿದ್ದರೆ ಅರ್ಜಿಗಳು ಏಕೆ ಬಾಕಿ ಇರುತ್ತಿದ್ದವು. ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು.