ಕೊರಟಗೆರೆ :-
ಲೋಕೋಪಯೋಗಿ ಇಲಾಖೆ ಕರ್ನಾಟಕ ಸರ್ಕಾರಿ ಸಂಸ್ಥೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ರಸ್ತೆ ಹಾಗೂ ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಯ ದೊಡ್ಡ ಜವಾಬ್ದಾರಿ ಒತ್ತ ಇಲಾಖೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕುರ್ಚಿಗಾಗಿ ಕಳೆದ ಒಂದು ತಿಂಗಳಿನಿಂದ ಜಟಾಪಟಿ ನಡೆಸುತ್ತಿದ್ದು, ಇಲಾಕೆ ಕಲುಷಿತ ವಾತಾವರಣದಿಂದ ಇಲಾಖ ಕೆಳ ವರ್ಗದ ನೌಕರರು ಕಚೇರಿಯಲ್ಲಿ ಕೈ ಕೈ ಮಿಲಾಯಿಸಿಕೊಂಡಿರುವ ಘಟನೆಯೊಂದು ಕೊರಟಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಜರುಗಿದೆ.
ಕೊರಟಗೆರೆ ಲೋಕೋಪಯೋಗಿ ಉಪ ವಿಭಾಗ ಕಚೇರಿಯಲ್ಲಿ ಕಳೆದ 2 ತಿಂಗಳಿ ಹಿಂದೆ ಇಲ್ಲಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ ಎಸ್ ಸ್ವಾಮಿ ವರ್ಗಾವಣೆಗೊಂಡು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಬೆಂಗಳೂರು ಇಲ್ಲಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ನಿಯೋಜನೆಗೊಳಿಸಿದ ಆದೇಶದ ವಿರುದ್ಧ ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಮರೆ ಹೋಗಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಹಾವು ಏಣಿ ಆಟದಲ್ಲಿ ಕಚೇರಿಯ ವಾತಾವರಣ ಕಲುಷಿತಗೊಂಡು ಇಲ್ಲಿಯ ಕೆಳ ವರ್ಗದ ನೌಕರರ ನಡುವೆ ಸಾಮರಸ್ಯ ಕೊರತೆಯಿಂದ ಸಣ್ಣದೊಂದು ಸಮಸ್ಯೆಗೆ ಕೈ ಕೈ ಮಿಲಾಯಿಸಿಕೊಂಡು ಪೊಲೀಸ್ ಮೆಟ್ಟಿಲೇರುವ ಮೂಲಕ ಲೋಕೋಪಯೋಗಿ ಇಲಾಖೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಟೀಕೆಗೆ ಗುರಿಯಾಗಿದೆ.
ಲೋಕೋಪಯೋಗಿ ಇಲಾಖೆಯ ಈ ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿಯನ್ನ ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದು, ಕಚೇರಿ ಕಾರ್ಯದಲ್ಲಿ ಕುಂಠಿತವಾಗಿರುವುದು ಸೇರಿದಂತೆ ಹತ್ತು ಹಲವು ಕಾರಣಗಳಿಂದ ಸಂಬಂಧಪಟ್ಟಂತ ಮೇಲಾಧಿಕಾರಿಗಳು ಹಾಗೂ ಶಾಸಕರ ಶಿಫಾರಸಿನ ಆಧಾರದ ಮೇಲೆ ವರ್ಗಾವಣೆಗೊಳಿಸಿ ಮತ್ತೋರ್ವ ಅಧಿಕಾರಿಯನ್ನು ನಿಯೋಜನೆಗೊಳಿಸಿದ ಹಿನ್ನೆಲೆಯಲ್ಲಿ ಈ ಹಿಂದಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ ಎರಡು ವರ್ಷ ಪೂರ್ಣಗೊಳ್ಳಲು ಎರಡು ತಿಂಗಳು ಬಾಕಿ ಇರುವಂತೆಯೇ ನಮ್ಮನ್ನ ವರ್ಗಾಯಿಸಲಾಗಿದೆ ಎಂದು ಕೆಇಟಿಗೆ ಮರೆ ಹೋಗಿ ಅದರಲ್ಲೂ ನ್ಯಾಯಾಲಯದಲ್ಲೂ ನಮಗೆ ಸ್ಥಳ ನಿಯೋಜನೆ ಮಾಡಿಲ್ಲ ಎಂದು ವಾದಿಸಿ ಮತ್ತೆ ಅದೇ ಸ್ಥಾನಕ್ಕೆ ಹಿಂತಿರುಗಿರುವುದರಿಂದ ಇಲಾಖೆಯಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ದೀಪಕ್ ಹಾಗೂ ಸ್ವಾಮಿ ನಡುವೆ ಕಳೆದ ಎರಡು ತಿಂಗಳಿನಿಂದ ಜಟಾಪಟಿ ನಡೆದು ಇಲಾಖೆಯಲ್ಲಿ ಕೆಲಸ ಕಾರ್ಯ ಕುಂಠಿತವಾಗಿ ಅಧಿಕಾರಿಗಳ ನಡುವೆ ವೈಶ್ಯಮ್ಯ ಸೃಷ್ಟಿಯಾಗಿ ಇಡೀ ಲೋಕೋಪಯೋಗಿ ಇಲಾಖೆ ನಿಷ್ಕ್ರಿಯಗೊಳ್ಳುವ ಅಂತ ತಲುಪಿರುವುದು ದುರಾದೃಷ್ಟಕರ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸ್ವಾಮಿ ಜೂನ್ 18ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ವರ್ಗಾವಣೆಯ ವಿರುದ್ಧ ಮೊರೆ ಹೋಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಬೆಂಗಳೂರು ಇಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ರ ಹುದ್ದೆಗೆ ನಿಯೋಜನೆಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವಶಕ್ಕೆ ನೀಡಿದ್ದರೂ ಸಹ ಜೂನ್ 19ರಂದು ನ್ಯಾಯ ಮಂಡಳಿಗೆ ನನಗೆ ಜಾಗ ತೋರಿಸದೆ ವರ್ಗಾವಣೆಗೊಳಿಸುತ್ತಾರೆಂದು ಮತ್ತು ಕೆಎಸ್ಆರ್ “ನಿಯಮ 32” ಅಧಿಕಾರಿಯೂ ಕೆಸಿಎಸ್ಆರ್ ನಿಯಮ 42ರ ಅಧಿಕಾರಿಯನ್ನು ಭಂಗಗೊಳಿಸದಂತೆ ನಿಯಮವಿದೆ ಎಂದು ತೋರಿಸಿ ತಾನು ಕೂಡ ಕೆಸಿಎಸ್ಆರ್ ನಿಯಮ 32ರ ಅಧಿಕಾರಿ ಎನ್ನುವುದನ್ನು ಮರೆಮಾಚಿದ್ದಾರೆ , ಜುಲೈ ತಿಂಗಳಲ್ಲಿ ಸಾರ್ವಜನಿಕರು ಮತ್ತು ಪತ್ರಕರ್ತರ ಕೈಗೆ ಸಿಗದೇ ಕಚೇರಿಗೂ ಬಾರದೆ ಇದ್ದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ವೇತನ ಪೂರ್ಣ ಮಾಡಿಕೊಂಡಿರುತ್ತಾರೆ ಎಂದು ಸಾರ್ವಜನಿಕರು ಈ ಅಧಿಕಾರಿಯ ವಿರುದ್ಧ ಆರೋಪಗಳ ಸುರಿಮಳೆ ಗೆರೆಯುತ್ತಿದ್ದಾರೆ.
ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಸ್ವಾಮಿ ವಿರುದ್ಧವಾಗಿ ಗುತ್ತಿಗೆದಾರರೊಬ್ಬರು ಬಿಲ್ ಕಳುಹಿಸಿದರೆ ಎಂ ಬಿ (ಅಳತೆ ಪುಸ್ತಕ) ಕಳಿಸುವುದಿಲ್ಲ, ಅಳತೆ ಪುಸ್ತಕ ಕಳಿಸಿದರೆ ಬಿಲ್ ಕಳಿಸುವುದಿಲ್ಲ, ಜನವರಿ 24ರಂದು ನನ್ನ ಬಿಲ್ ಕಳುಹಿಸಿ ಇದಕ್ಕೆ ಎಸ್ ಬಿ ಆರ್ ಹಾಗೂ ಬಿ ಆರ್ ಸಂಖ್ಯೆಗಳನ್ನು ಹಾಕಿಸಿ ಇದುವರೆಗೂ ಎಂಬಿ ಕಳಿಸಿಲ್ಲ ಆದರಿಂದ ಕಳೆದ ಒಂದು ವರ್ಷ ಎಂಟು ತಿಂಗಳಿನಿಂದ ನನಗೆ ಪೇಮೆಂಟ್ ಆಗಿಲ್ಲ ಎಂದು ಅಳಲು ತೋಡಿಕೊಂಡಿರುವುದಲ್ಲದೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ಕೆಎಸ್ ಸ್ವಾಮಿಯವರಿಗೆ ಮಧುಗಿರಿ ವಿಭಾಗದ ಅಧಿಕಾರಿಗಳಿಂದ ಶ್ರೀರಕ್ಷೆ ಇದೆ ಎಂದು ಆರೋಪ ಮಾಡುವುದರ ಜೊತೆಗೆ ನಾವು ಕೆಲಸ ಮಾಡಿ ಸಾಲಕ್ಕೆ ಸಿಲುಕಿ ಮನೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ .








