ನವದೆಹಲಿ :
ಹಾಡಹಗಲೇ ಚಿನ್ನದಂಗಡಿಗೆ ನುಗ್ಗಿ ದರೋಡೆ ಎಸಗುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಿವೆ. ಇತ್ತೀಚೆಗೆ ಬಿಹಾರದ ಅರ್ರಾದಲ್ಲಿರುವ ತನಿಷ್ಕ್ ಜ್ಯುವೆಲ್ಲರಿ ಶೋರೂಂವೊಂದಕ್ಕೆ ದರೋಡೆಕೋರರು ನುಗ್ಗಿ 25 ಕೋಟಿ ರೂ.ಮೌಲ್ಯದ ಆಭರಣಗಳನ್ನು ಲೂಟಿ ಮಾಡಿದ್ದಾರೆ. ಇದರ ಸಿಸಿಟಿವಿ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral video) ಆಗಿದ್ದು, ನೋಡುಗರು ಬೆಚ್ಚಿ ಬಿದ್ದಿದ್ದಾರೆ. ಈ ದರೋಡೆ ಅರ್ರಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಗೋಪಾಲಿ ಚೌಕ್ ಶಾಖೆಯಲ್ಲಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ದರೋಡೆಯಲ್ಲಿ ಕನಿಷ್ಠ ಎಂಟು ದರೋಡೆಕೋರರು ಭಾಗಿಯಾಗಿದ್ದಾರೆ. ಹಾಗೇ ದಾಳಿಯ ಸಮಯದಲ್ಲಿ ದರೋಡೆಕೋರರು ರಿವಾಲ್ವರ್ಗಳಿಂದ ತಲೆಗೆ ಹೊಡೆದಿದ್ದರಿಂದ ಶೋರೂಂನ ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರಂತೆ.
ಶೋರೂಂ ಮ್ಯಾನೇಜರ್ ಕುಮಾರ್ ಮೃತ್ಯುಂಜಯ್ ಕಳ್ಳತನದ ಬಗ್ಗೆ ಮಾತನಾಡಿ, “ಸುಮಾರು 25 ಕೋಟಿ ಮೌಲ್ಯದ ಆಭರಣಗಳನ್ನು ಕೊಳ್ಳೆ ಹೊಡೆದಿದ್ದಾರೆ. ನಗದು ಜೊತೆಗೆ ಸರ, ಹಾರಗಳು, ಬಳೆಗಳು ಮತ್ತು ಕೆಲವು ವಜ್ರಗಳನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಘಟನೆಯ ಇಡೀ ದೃಶ್ಯ ಶೋರೋಂನಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊದಲ್ಲಿ 8-9 ಜನರು ಒಳನುಗ್ಗಿ ಶೋರೂಂ ಒಳಗೆ ಇದ್ದ ಸೆಕ್ಯೂರಿಟಿ ಮತ್ತು ಉದ್ಯೋಗಿಗಳಿಗೆ ಬೆದರಿಕೆ ಹಾಕಿರುವುದು ಸೆರೆಯಾಗಿದೆ. ನಂತರ ದರೋಡೆಕೋರರು ಕೌಂಟರ್ನಲ್ಲಿರುವ ನಗದು ಮತ್ತು ಆಭರಣಗಳನ್ನು ತೆಗೆದುಕೊಂಡು ಓಡಿಹೋಗಿದ್ದಾರೆ.ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ. ಹಾಗೂ ದರೋಡೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆಯಂತೆ.
ಇತ್ತೀಚೆಗೆ ಲಾತೂರ್ನಲ್ಲಿ ಸರಣಿ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಮತ್ತು ಅದರಲ್ಲಿದ್ದ ಒಬ್ಬ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ ಅವರ ಬಳಿ ಇದ್ದ ಚಿನ್ನಾಭರಣ, ಬೆಳ್ಳಿ ಹಾಗೂ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫೆಬ್ರವರಿ 18 ಮತ್ತು 21 ರಂದು ಲಾತೂರ್ನ ಕತ್ಪುರ್ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರ ಗುಂಪು ಕಬ್ಬಿಣದ ಕಬೋರ್ಡ್ನಲ್ಲಿ ಸಂಗ್ರಹಿಸಿಟ್ಟಿದ್ದ ಚಿನ್ನದ ಆಭರಣಗಳು, ಬೆಳ್ಳಿ ನಾಣ್ಯಗಳು ಮತ್ತು ಹಣವನ್ನು ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 331 (3), 331 (4) ಮತ್ತು 305 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಶುರುಮಾಡಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ ಬ್ಯಾಂಕ್ಗೆ ನುಗ್ಗಿ, ಸಿಬ್ಬಂದಿಗಳನ್ನು ಚಾಕುವಿನಿಂದ ಬೆದರಿಸಿದ್ದಾನೆ. ನಂತರ ಸಿಬ್ಬಂದಿಗಳನ್ನು ಶೌಚಾಲಯದೊಳಗೆ ಕೂಡಿಹಾಕಿ, 15 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಇಡೀ ಘಟನೆ ಕೇವಲ 5 ನಿಮಿಷದೊಳಗೆ ನಡೆದಿದೆ. ಆರೋಪಿಯು ದರೋಡೆ ಮಾಡಿರುವ ದೃಶ್ಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಕು ತೋರಿಸಿ ಬ್ಯಾಂಕ್ ಮ್ಯಾನೇಜರ್ ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಬೆದರಿಸಿ ಶೌಚಾಲಯದೊಳಗೆ ಬೀಗ ಹಾಕಿದ್ದಾನೆ. ನಂತರ ಕೌಂಟರ್ನಲ್ಲಿ ಇರಿಸಲಾಗಿದ್ದ 47 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳನ್ನು ಕದ್ದಿದ್ದಾನೆ. ಕದ್ದ ಹಣವನ್ನು ಬ್ಯಾಗ್ನಲ್ಲಿರಿಸಿ ಸ್ಕೂಟರ್ನಲ್ಲಿ ಪರಾರಿಯಾಗಿದ್ದಾನೆ.
