ಅಹಿಂದ ಮತದಾರರು ಕಾಂಗ್ರೆಸ್ ಸ್ವತ್ತಲ್ಲ

ದಾವಣಗೆರೆ :

       ಹಿಂದುಳಿದ ಹಾಗೂ ದಲಿತ ವರ್ಗಗಳ ಮತದಾರರು ಬಿಜೆಪಿ ಪಕ್ಷವನ್ನು ಅಪೇಕ್ಷಿಸಿ ಬರುತ್ತಿದ್ದು, ಅಹಿಂದ ಮತಗಳು ಕಾಂಗ್ರೆಸ್ ಪಕ್ಷದ ಸ್ವತ್ತಲ್ಲ ಎಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ತಿಳಿಸಿದ್ದಾರೆ.

       ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹಿಂದ ಮತಗಳು ಕಾಂಗ್ರೆಸ್ ಕೈ ಹಿಡಿಯಲಿವೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿವೆ. ಸುಮಾರು 15 ವರ್ಷಗಳ ಹಿಂದೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳ ಮತಗಳು ಕಾಂಗ್ರೆಸ್‍ಗೆ ಸೀಮಿತವಾಗಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ದೇಶದ ರಕ್ಷಣೆಗೆ ಪಣತೊಟ್ಟಿರುವ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿಯನ್ನು ಅಪೇಕ್ಷಿಸಿ ಈ ವರ್ಗಗಳ ಮತದಾರರು ಬಿಜೆಪಿಯ ಬಗ್ಗೆ ಒಲವು ಹೊಂದಿದ್ದಾರೆಂದು ಹೇಳಿದರು.

       ಇಷ್ಟು ವರ್ಷಗಳ ಕಾಲ ಅಹಿಂದ ವರ್ಗವನ್ನು ಮತ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಜನರಿಗೆ ನೀಡಿರುವ ಕೊಡುಗೆ ಏನು? ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸೋಲಿಸಿದ, ಅವರ ಶವ ಸಂಸ್ಕಾರಕ್ಕೂ ಸಹಕರಿಸದ ಕಾಂಗ್ರೆಸ್‍ಗೆ ಅಹಿಂದ ವರ್ಗಗಳ ಮತ ಕೇಳುವ ನೈತಿಕತೆ ಇಲ್ಲ ಎಂದರು.

        ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ ಪಕ್ಷ ಯಾವುದಾದರು ಇದ್ದರೇ, ಅದು ಬಿಜೆಪಿ ಮಾತ್ರ. ಅಲ್ಲದೇ, ಯಡಿಯೂರಪ್ಪನವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದಲಿತ ಕೇರಿಗಳಲ್ಲಿ ರಸ್ತೆ, ಚರಂಡಿ ಸೌಲಭ್ಯ ಕಲ್ಪಿಸಿದ್ದರು. ಇದಷ್ಟಯಲ್ಲದೇ, ಅಹಿಂದ ವರ್ಗಗಳ ಪ್ರಗತಿಗೆ ಯಡಿಯೂರಪ್ಪ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆಗಳನ್ನು ರೂಪಿಸಿವೆ. ಆದ್ದರಿಂದ ಬಿಜೆಪಿಗೆ ಅಹಿಂದ ವರ್ಗಗಳ ಬೆಂಬಲವೂ ಇದೆ ಎಂದು ನುಡಿದರು.

        ತಾ.ಪಂ. ಸದಸ್ಯ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಆಲೂರು ನಿಂಗರಾಜ್ ಮಾತನಾಡಿ, ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಅವರಿಗೆ ಫೇಸ್ ವ್ಯಾಲ್ಯುವಿಲ್ಲ. ಹೀಗಾಗಿ ನರೇಂದ್ರ ಮೋದಿ ಅವರ ಮುಖ ತೋರಿಸಿ ಮತ ಕೇಳುತ್ತಿದ್ದಾರೆಂದು ಹೇಳಿದ್ದಾರೆ.

        ಈಗಾಗಲೇ ಮೂರು ಬಾರಿ ಸತತ ಗೆಲವು ಸಾಧಿಸಿ, ನಾಲ್ಕನೇಯ ಬಾರಿಗೆ ಸ್ಪರ್ಧೆಗೆ ಇಳಿದಿರುವ ನಮ್ಮ ಅಭ್ಯರ್ಥಿ ಸಿದ್ದೇಶ್ವರ್ ಅವರು ಕ್ಷೇತ್ರದಾದ್ಯಂತ ಓಡಾಡಿ, ಪ್ರತಿ ಮನೆಗಳಿಗೂ ಭೇಟಿ ನೀಡಿದ್ದು, ಕ್ಷೇತ್ರದಾದ್ಯಂತ ಚಿರಪರಿಚಿತರಾಗಿದ್ದು, ಅವರು ಮೋದಿ ಅವರ ನಾಯಕತ್ವಕ್ಕೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಆದರೆ, ಎದುರಾಳಿಗಳು ಹೀಗೆ ಕ್ಷುಲ್ಲಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕಾಂಗ್ರೆಸ್‍ನವರು ಯಾವ ಮುಖ ಇಟ್ಟುಕೊಂಡು ಮತ ಕೇಳಲು ಹೋಗುತ್ತಾರೆ ಎಂದು ಪ್ರಶ್ನಿಸಿದರು.

       ಬಿಜೆಪಿ ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಸರಳ ವ್ಯಕ್ತಿತ್ವ ಹೊಂದಿದ್ದು, ಯಾರೇ ಅವರ ಬಳಿ ಹೋದರೂ ಸ್ಪಂದಿಸಿದ್ದಾರೆ. ಯಾರೇ ಕಾರ್ಯಕರ್ತರು ಹೋದರೂ ಸೌಜನ್ಯದಿಂದ ಮಾತನಾಡಿಸುತ್ತಾರೆ. ಆದರೆ, ಕಾಂಗ್ರೆಸ್ ನಾಯಕರಂತೆ ಸೀಟಿ ಹೊಡೆದು ಕಾರ್ಯಕರ್ತರನ್ನು ಸೇರಿಸುವ ಅನಾಗರಿಕ ಸಂಸ್ಕೃತಿ ನಮ್ಮ ಪಕ್ಷದಲಿಲ್ಲ ಎಂದು ಹೇಳಿದರು.

         ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಎಲ್.ಡಿ.ಗೋಣೆಪ್ಪ, ಹಿಂದುಳಿದ ವರ್ಗ ಮೋರ್ಚಾದ ಕೆ.ಹೇಮಂತಕುಮಾರ್, ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್, ಎನ್.ರಾಜಶೇಖರ್, ಹೆಚ್.ಎನ್.ಗುರುನಾಥ್, ಧನುಷ್‍ರೆಡ್ಡಿ, ಜಯಪ್ರಕಾಶ್, ಹನುಮಂತಪ್ಪ, ಶಶಿ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap