ಲಕ್ನೋ:
ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ದೇವಾ ರಸ್ತೆಯಲ್ಲಿರುವ ಓಯೋ ರೆಡ್ ಬಿಲ್ಡಿಂಗ್ ಗೆಸ್ಟ್ ಹೌಸ್‌ನ ಕೊಠಡಿ ಸಂಖ್ಯೆ 105 ರಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಯುವತಿ ಓಯೋ ಕೋಣೆಯೊಳಗೆ ಮೃತದೇಹವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿ ಬಾರಾಬಂಕಿ ನಿವಾಸಿಯಾಗಿದ್ದು, ಈಕೆಯನ್ನು ಪ್ರಿಯಕರ ಓಯೋ ರೂಮ್‌ಗೆ ಕರೆಸಿಕೊಂಡಿದ್ದ. ನಂತರ ಇಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿ ಆಕೆಯನ್ನು ಕೊಂದು ಹೊರಗಿನಿಂದ ಲಾಕ್ ಮಾಡಿ ಎಸ್ಕೇಪ್ ಆಗಿದ್ದಾನೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಇದು ಕೊಲೆ ಅನ್ನೋದು ಖಚಿತವಾಗಿದ್ದು, ಮೃತ ಯುವತಿಯ ಬಾಯ್ ಫ್ರೆಂಡ್ ಕೂಡ ಹುಡುಗಿಯ ಜೊತೆ ರೂಮಿನಲ್ಲೇ ಇದ್ದ ಅನ್ನೋದು ಪೊಲೀಸರಿಗೆ ತಿಳಿದ ನಂತರ ಇದೀಗ ಪೊಲೀಸರು ಈ ಪ್ರಕರಣದ ಸಂಪೂರ್ಣ ತನಿಖೆಯಲ್ಲಿ ನಿರತರಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಯುವತಿಯ ಗೆಳೆಯ ಹೊರಗಿನಿಂದ ಕೊಠಡಿಗೆ ಬೀಗ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಎರಡು ದಿನ ಕಳೆದರೂ ಯಾರೂ ಕೊಠಡಿಯಿಂದ ಹೊರಗೆ ಬಾರದೆ ಇದ್ದಾಗ ಕೊಠಡಿಯಿಂದ ದುರ್ವಾಸನೆ ಬರಲಾರಂಭಿಸಿದೆ. ನಂತರ ಈ ಬಗ್ಗೆ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡವು ಕೊಠಡಿಯಲ್ಲಿನ ಹಾಸಿಗೆಯ ಮೇಲೆ ಯುವತಿಯ ಶವ ಬಿದ್ದಿರುವುದನ್ನು ನೋಡಿದ್ದಾರೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೂರ್ವ ಡಿಸಿಪಿ ಪ್ರಬಲ್ ಪ್ರತಾಪ್ ಸಿಂಗ್, ಲಕ್ನೋದ ಚಿನ್ಹತ್‌ನ ದೇವಾ ರಸ್ತೆಯಲ್ಲಿರುವ ರೆಡ್ ಬಿಲ್ಡಿಂಗ್ ಗೆಸ್ಟ್ ಹೌಸ್‌ನಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಕೊಠಡಿಯೊಳಗೆ ಪತ್ತೆಯಾಗಿದೆ. ಯುವತಿ ಬಾರಾಬಂಕಿಯ ಔರಂಗಾಬಾದ್ ನಿವಾಸಿ. ಜೂನ್ 3 ರಂದು ಬಾರಾಬಂಕಿಯ ಔರಂಗಾಬಾದ್ ಪೊಲೀಸ್ ಠಾಣೆಯಲ್ಲಿ ಅವರ ನಾಪತ್ತೆ ದೂರು ದಾಖಲಾಗಿತ್ತು. ಜೂನ್ 3ರಂದು ತನ್ನ ಗೆಳೆಯನೊಂದಿಗೆ ಗೆಸ್ಟ್ ಹೌಸ್ ಗೆ ಬಂದಿದ್ದಳು.
ಹುಡುಗಿ ಕೋಣೆಯಿಂದ ಹೊರಗೆ ಕಾಣಿಸಲಿಲ್ಲ. ಆಕೆಯ ಗೆಳೆಯ ಜೂನ್ 4 ರಂದು ಕೊಠಡಿಗೆ ಬೀಗ ಹಾಕಿ ನಾಪತ್ತೆಯಾಗಿದ್ದ. ಕೊಠಡಿಯಿಂದ ದುರ್ವಾಸನೆ ಬರಲಾರಂಭಿಸಿದಾಗ ಹೋಟೆಲ್ ಮಾಲೀಕರು ಹೇಗೋ ಬಾಗಿಲು ತೆರೆದರು. ಬೆಡ್ ಮೇಲೆ ಬಾಲಕಿಯ ಶವ ಕಂಡು ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಾರಾಬಂಕಿಯಲ್ಲಿ ರೈಲ್ವೇ ಹಳಿ ಮೇಲೆ ಆಕೆಯ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರದ ಬಗ್ಗೆ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಬಾರಾಬಂಕಿ ಪೊಲೀಸರು ಬಾಲಕಿಯ ಪ್ರಿಯಕರನ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮೇ 30ರಂದು ಬಾಲಕಿಯ ಗ್ರಾಮದ ನಿವಾಸಿ ತ್ರಿಭುವನ್ ಸಿಂಗ್ ಗೆಸ್ಟ್ ಹೌಸ್ ನಲ್ಲಿ ಕೊಠಡಿ ಕಾಯ್ದಿರಿಸಿದ್ದ. ಜೂನ್ 3 ರಂದು ಓಯೋ ರೆಡ್ ಬಿಲ್ಡಿಂಗ್ ಗೆಸ್ಟ್ ಹೌಸ್‌ನಲ್ಲಿ ತ್ರಿಭುವನ್ ಸಿಂಗ್‌ನನ್ನು ಭೇಟಿ ಮಾಡಲು ಯುವತಿ ಬಂದಿದ್ದಳು. ಇಬ್ಬರೂ ಜೊತೆಯಲ್ಲಿಯೇ ಇದ್ದರು. ಜೂನ್ 4 ರಂದು, ತ್ರಿಭುವನ್ ಹೋಗಿದ್ದಾನೆ. ಆದರೆ ಹುಡುಗಿ ಕೋಣೆಯಲ್ಲಿಯೇ ಇದ್ದಳು. ಜೂನ್ 4 ರಂದು ಬಾರಾಬಂಕಿಯ ರೈಲ್ವೆ ಹಳಿಯಲ್ಲಿ ತ್ರಿಭುವನ್‌ನ ದೇಹವನ್ನು ಜಿಆರ್‌ಪಿ ಪತ್ತೆ ಮಾಡಿದೆ.
ಜೂನ್ 6 ರಂದು ಅತಿಥಿ ಗೃಹದ ಕೊಠಡಿಯಿಂದ ಯುವತಿಯ ಶವ ಪತ್ತೆಯಾಗಿತ್ತು. ಸದ್ಯ ಬಾಲಕಿ ಸಾವಿನ ಪ್ರಕರಣದಲ್ಲಿ ಕೊಲೆ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.