ಕಡಿಮೆ ವೇತನ | ಸೇವಾ ಭದ್ರತೆ ಇಲ್ಲ | ಹೆರಿಗೆ ರಜೆ ಕೊಡಲ್ಲ

ತುಮಕೂರು:

           ಮದುವೆ, ತಾಯ್ತನ ಮುಂದೂಡುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರು…!

ತಾಯ್ತನ ಎಂಬುದು ಸುಂದರ ಅನುಭೂತಿ. ಪ್ರತಿ ಹೆಣ್ಣು ಅದನ್ನು ಪಡೆಯಲು ಕಾತುರಳಾಗಿರುತ್ತಾಳೆ. ಮಮತೆ, ವಾತ್ಸಲ್ಯ, ಕರುಣೆ, ಸಹನೆ ಮೊದಲಾದ ತಾಯ್ಗುಣಗಳು ಅವಳಿಗೆ ಹುಟ್ಟುತ್ತಲೆ ಬಂದಿದ್ದರೂ, ಮದುವೆ ವಯಸ್ಸಿಗೆ ಬಂದ ಹೆಣ್ಣು ಮದುವೆ, ಮಕ್ಕಳ ಕನಸನ್ನು ಹೊತ್ತಿರುತ್ತಾಳೆ.

ಆದರೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದುಡಿಯುತ್ತಿರುವ ಅದೆಷ್ಟೊ ಮಹಿಳಾ ಅತಿಥಿ ಉಪನ್ಯಾಸಕರು ಅತ್ಯಲ್ಪ ಗೌರವಧನ, ಸೇವಾ ಭದ್ರತೆ ಇಲ್ಲದಿರುವುದು ಹಾಗೂ ಹೆರಿಗೆ ರಜೆ ಕೊಡದ ಕಾರಣ ತಮ್ಮ ಮದುವೆ, ತಾಯ್ತನವನ್ನೆ ಮುಂದೂಡುತ್ತಿದ್ದಾರೆ.

ಯಾವುದಕ್ಕೂ ಸಾಲದ ಗೌರವ ಧನ : ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ 11-13 ಸಾವಿರ ಗೌರವ ಧನವನ್ನಷ್ಟೆ ನೀಡುತ್ತಿದೆ. ಎಲ್ಲಾ ಅಗತ್ಯ ವಸ್ತುಗಳು ಗಗನ ಮುಟ್ಟಿರುವ ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಇಷ್ಟು ಕಡಿಮೆ ವೇತನದಲ್ಲಿ 4 ಜನರಿರುವ 1 ಸಂಸಾರ ನಿಭಾಯಿಸುವುದೆ ಕಷ್ಟಕರ.

ಗರ್ಭಧಾರಣೆಯಿಂದ ಬಾಣಂತನದ ತನಕ ಆಸ್ಪತ್ರೆಯ ವಿವಿಧ ಪರೀಕ್ಷೆಗಳು, ಚಿಕಿತ್ಸೆ, ಔಷಧ-ಮಾತ್ರೆಗಳು, ಪೌಷ್ಠಿಕ ಆಹಾರ ಮೊದಲಾದ ಪ್ರಸವ ಪೂರ್ವ, ನಂತರದ ಅನೇಕ ಖರ್ಚುಗಳಿರುತ್ತವೆ. ಮಗು ಹುಟ್ಟಿದ ನಂತರ ಅದರ ಲಾಲನೆ-ಪಾಲನೆ, ಸೂಕ್ತ ಶಿಕ್ಷಣ ಕೊಡಿಸುವುದು ಸೇರಿದಂತೆ ಮಗುವಿನ ಭವಿಷ್ಯ ರೂಪಿಸುವ ಹೊಣೆಗಾರಿಕೆ ಇರುತ್ತದೆ.

ಮನೆ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೆ ಹೇಗೊ ನಡೆಯುತ್ತದೆ. ಆದರೇ ಅತಿಥಿ ಉಪನ್ಯಾಸಕ ಹುದ್ದೆಯ ಗೌರವ ಧನವನ್ನೆ ನೆಚ್ಚಿಕೊಂಡ ಬಡ-ಮಧ್ಯಮ ವರ್ಗದ ಮಹಿಳಾ ಉಪನ್ಯಾಸಕರು ಭರಿಸಲಾಗದ ವಿವಿಧ ಖರ್ಚುಗಳಿಗೆ ಹೆದರಿ ತಮ್ಮ ತಾಯ್ತನವನ್ನೆ ಮುಂದೂಡುತ್ತಿದ್ದಾರೆ.

ಇಲ್ಲದ ಸೇವಾ ಭದ್ರತೆ :

ಪ್ರಸಕ್ತ ಶೈಕ್ಷಣಿಕ ವರ್ಷಕ್ಕಿಂತ ಮೊದಲು ಇಡೀ 1 ಶೈಕ್ಷಣಿಕ ವರ್ಷಕ್ಕೆ ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಆದರೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1 ಸೆಮಿಸ್ಟರ್‍ಗೆ ಮಾತ್ರ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಸಲು ಸರ್ಕಾರ ನಿರ್ಧರಿಸಿ ಈ ಕುರಿತಾದ ನಿಯಮಗಳನ್ನು ರೂಪಿಸಿದೆ.

1 ಸೆಮಿಸ್ಟರ್‍ನಲ್ಲಿ ಕೇವಲ 3 ತಿಂಗಳಿಗಷ್ಟೆ ಇವರಿಗೆ ಕಾರ್ಯಭಾರ ಹಂಚಲಾಗಿದೆ. ಹಾಗಾಗಿ ವರ್ಷದ 2 ಸೆಮಿಸ್ಟರ್‍ಗಳಲ್ಲಿ ಇವರಿಗೆ ಗೌರವಧನ ಸಿಗುವುದು ಕೇವಲ 6 ತಿಂಗಳಿಗೆ ಮಾತ್ರ. ಅದೂ ಸಕಾಲಕ್ಕೆ ಬಾರದೇ 3-6 ತಿಂಗಳಿಗೊ, ಕೆಲವು ಸಲ ವರ್ಷದ ನಂತರ ಕೈ ಸೇರುತ್ತದೆ. ಈ ಅಂಶವೂ ಸಹ ಮಹಿಳಾ ಅತಿಥಿ ಉಪನ್ಯಾಸಕರು ತಮ್ಮ ತಾಯ್ತನ ಮುಂದೂಡಲು ಕಾರಣವಾಗಿದೆ.

ಹೆರಿಗೆ ರಜೆ ಇಲ್ಲ :

ಸರ್ಕಾರವು ತನ್ನ ಮಹಿಳಾ ನೌಕರರಿಗೆ 6 ತಿಂಗಳು ವೇತನ ಸಹಿತ ಹೆರಿಗೆ ರಜೆ ಕೊಡುತ್ತದೆ. ಆದರೇ ಈ ಸೌಲಭ್ಯ ಮಹಿಳಾ ಅತಿಥಿ ಉಪನ್ಯಾಸಕರಿಗೆ ಇಲ್ಲ. ಈ ಸೌಲಭ್ಯ ಹೋಗಲಿ ಕನಿಷ್ಠ ಇಎಲ್, ಸಿಎಲ್ ಸೌಲಭ್ಯವು ಇವರಿಗಿಲ್ಲ.

ಸರ್ಕಾರದ ಮಹಿಳಾ ಪರ ನೀತಿ-ನಿರೂಪಣೆ, ಕಾರ್ಯಕ್ರಮ ಹಾಗೂ ಅಭಿವೃದ್ಧಿ ಪರಿಭಾಷೆಯ ಸಮಾನತೆ, ಸಮಾನ ವೇತನ, ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ನಿಯಂತ್ರಣ, ಮಹಿಳಾ ಸಬಲೀಕರಣ, ಸ್ತ್ರೀ ಸ್ವಾತಂತ್ರ್ಯ ಮೊದಲಾದ ಆಕರ್ಷಕ ಪದಗಳು ಮಹಿಳಾ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸವಕಲಾಗಿದ್ದು, ಆ ಪದಗಳಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಸರ್ಕಾರದ ಈ ತಾರತಮ್ಯ ನೀತಿ ಹಾಗೂ ಹೆರಿಗೆಗಾಗಿ ರಜೆ ಹಾಕಿದರೆ ಎಲ್ಲಿ ತಮ್ಮ ಕೆಲಸ ಹೋಗುತ್ತದೆಯೊ ಎಂದು ಬದುಕಿಗೆ ಹೆದರಿ ಕೆಲ ಮಹಿಳಾ ಅತಿಥಿ ಉಪನ್ಯಾಸಕರು ತಮ್ಮ ತಾಯ್ತನವನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಇದರಿಂದ ದಿನೇ ದಿನೇ ಅವರ ವಯಸ್ಸು ಏರುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಪ್ರತಿ ಹೆಣ್ಣು ತಾಯ್ತನ ಪಡೆಯಲು ಗರಿಷ್ಠ ವಯೋಮಿತಿ ಎಂಬುದಿರುತ್ತದೆ, ಅದನ್ನು ಮೀರಿದರೆ ಹೆಣ್ಣು ತಾಯ್ತನದಿಂದಲೆ ವಂಚಿತಳಾಗಬೇಕಾಗುತ್ತದೆ. ಈ ಸೂಕ್ಷ್ಮಗಳು ನಮ್ಮ ನೀತಿ ನಿರೂಪಕರಿಗೆ ಇರದೇ ಹೋದದ್ದು ಬಹು ದೊಡ್ಡ ದುರಂತ.

ಮದುವೆ ಮುಂದೂಡಿಕೆ, ಗಂಡು ಸಿಗುತ್ತಿಲ್ಲ :

ಕಡಿಮೆ ಗೌರವ ಧನ, ಸೇವಾ ಭದ್ರತೆಯಿಲ್ಲದ ಅನಿಶ್ಚಿತತೆಯ ಬದುಕಿಗೆ ಹೆದರಿ ಕೆಲ ಮಹಿಳಾ ಅತಿಥಿ ಉಪನ್ಯಾಸಕರು ತಮ್ಮ ಮದುವೆಯನ್ನೆ ಮುಂದೂಡುತ್ತಿದ್ದಾರೆ. ಮದುವೆ ಮುಂದೂಡಿಕೆಯಿಂದ ಅವರ ಮದುವೆ ವಯಸ್ಸು ಏರುತ್ತಿದ್ದು ಇವರ ವಯೋಮಿತಿಗೆ ತಕ್ಕ ಗಂಡುಗಳು ಸಿಗುತ್ತಿಲ್ಲ.

ಸಿಕ್ಕರೂ ಇವರ ಉನ್ನತ ಶಿಕ್ಷಣ, ಮಾಡುವ ಕೆಲಸ, ಆಲೋಚನಾ ಲಹರಿಗೆ ಸರಿಹೊಂದದೆ ಸಂಬಂಧಗಳು ಬಿದ್ದುಹೋಗುತ್ತವೆ. ಕೆಲವು ಪ್ರಕರಣಗಳಲ್ಲಿ ಹೆಚ್ಚಾದ ವಯಸ್ಸೆ ಇವರ ಕಲ್ಯಾಣಕ್ಕೆ ಕಂಟಕ ಆಗುತ್ತಿರುವುದು ಉಂಟು.

ಬೆಲೆ ಏರಿಕೆಯ ಈ ದಿನಗಳಲ್ಲಿ ಹುಡುಗ ಮತ್ತು ಆತನ ಪೋಷಕರು ಸೊಸೆಯಾಗಿ ಬರುವ ಹುಡುಗಿ ಉತ್ತಮ ನೌಕರಿಯಲ್ಲಿದ್ದು, ಕೈ ತುಂಬಾ ಸಂಪಾದನೆ ತರುವಂತಿರಲಿ ಎಂದು ಆಶಿಸುವುದೂ ಮಹಿಳಾ ಅತಿಥಿ ಉಪನ್ಯಾಸಕರಿಗೆ ಗಂಡು ಸಿಗದಿರುವುದಕ್ಕೆ ಹಾಗೂ ತಮ್ಮ ಮದುವೆ ಮುಂದೂಡುವುದಕ್ಕೆ ಕಾರಣವಾಗಿದೆ.

ನಮಗೆ ಹೆರಿಗೆ ರಜೆ ಎಂಬುದೇ ಇಲ್ಲ. ಎಷ್ಟೋ ಜನ ಉಪನ್ಯಾಸಕಿಯರು ರಜೆ ಹಾಕಿದರೆ ಕೆಲಸ ಹೋಗುತ್ತದೆ. ಜೀವನ ಮಾಡುವುದು ಹೇಗೆ ಅಂತ ಮಕ್ಕಳನ್ನೆ ಮಾಡಿಕೊಳ್ಳುತ್ತಿಲ್ಲ. ಕೆಲವರು ತಮ್ಮ ಚಿಕ್ಕ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಾರೆ.

ನಮಗೆ, ನಮ್ಮ ಮಕ್ಕಳಿಗೆ ಆರೋಗ್ಯ ಹೆಚ್ಚು ಕಡಿಮೆಯಾದರೇ ಆಸ್ಪತ್ರೆ ಖರ್ಚಿಗೂ ನಮ್ಮ ಬಳಿ ಹಣವಿರುವುದಿಲ್ಲ. ಆದ್ದರಿಂದ ಸರ್ಕಾರ ನಮಗೂ ಸೇವಾ ಭದ್ರತೆ, ಉತ್ತಮ ವೇತನ ನೀಡಿ, 6 ತಿಂಗಳು ವೇತನ ಸಹಿತ ಹೆರಿಗೆ ರಜೆ ಕೊಡಬೇಕು.

-ಡಾ.ಶಿಲ್ಪಶ್ರೀ, ಅತಿಥಿ ಉಪನ್ಯಾಸಕರು, ತುಮಕೂರು

          ಗರ್ಭಿಣಿ ಹಂತದಲ್ಲಿ ಮಹಿಳೆಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇರುತ್ತದೆ. ಕಡಿಮೆ ಗೌರವಧನಕ್ಕೆ ದುಡಿಯುವ ನಮಗೆ ಒಂದು ಡ್ರೈಫ್ರೂಟ್ಸ್ ಕೊಂಡು ತಿನ್ನಲೂ ಶಕ್ತಿ ಇಲ್ಲ. ಜೊತೆಗೆ ಗಂಡ, ಮಕ್ಕಳು, ಅತ್ತೆ-ಮಾವರಿರುವ ಕುಟುಂಬ ನಿರ್ವಹಿಸುವ ಹೊಣೆಯೂ ನಮ್ಮದೇ ಆಗಿರುತ್ತದೆ.

ಗರ್ಭಿಣಿ ಹೆಣ್ಣೊಬ್ಬಳು ಒಂದು ಸಲ ಗುಣಮಟ್ಟದ ಆಸ್ಪತ್ರೆಗೆ ಹೊದರೇ 5-6 ಸಾವಿರ ರೂ. ಖರ್ಚಾಗುತ್ತದೆ. ಅತ್ಯಲ್ಪ ಗೌರವ ಧನದಲ್ಲಿ ಮನೆ ನಿರ್ವಹಣೆ ಜೊತೆ ವೈದ್ಯಕೀಯ ವೆಚ್ಚಗಳನ್ನು ಬರಿಸಲಾಗದೆ ಕೆಲವರು ತಾಯ್ತನ ಮುಂದೂಡುತ್ತಿದ್ದಾರೆ.

-ಡಾ.ಕೆ.ಸವಿತ, ಅತಿಥಿ ಉಪನ್ಯಾಸಕರು, ಮಧುಗಿರಿ

     ಮಹಿಳಾ ಸಬಲೀಕರಣದ ಬಗ್ಗೆ ಬಮ್ಡೆ ಬಜಾಯಿಸುವ ಸರ್ಕಾರಕ್ಕೆ ಅದರ ಅರ್ಥವೇ ಗೊತ್ತಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಸರ್ಕಾರವು ಉನ್ನತ ಶಿಕ್ಷಣ ಪಡೆದ ಮಹಿಳೆಯರ ಹಿತ ಕಾಪಾಡುವಲ್ಲಿ ಎಡವಿದೆ.

ಮಹಿಳಾ ಶಿಕ್ಷಣಕ್ಕೆ ಕೋಟಿಗಟ್ಟಲೆ ರೂ. ಖರ್ಚು ಮಾಡುವುದಾಗಿ ಹೇಳುವ ಸರ್ಕಾರವು ಉನ್ನತ ಶಿಕ್ಷಣ ಪಡೆದ ಮಹಿಳೆಯರಿಗೆ ಸೂಕ್ತ ಉದ್ಯೋಗ ದೊರಕಿಸಿಕೊಡುವಲ್ಲಿ ಸೋತಿದೆ. ಅರ್ಥಶಾಸ್ತ್ರ ಉಪನ್ಯಾಸಕಿಯಾದ ನನ್ನ ಪ್ರಕಾರ ಅತಿಥಿ ಉಪನ್ಯಾಸಕ ಹುದ್ದೆ ಉದ್ಯೋಗವೆ ಅಲ್ಲ.

-ಡಾ.ಆಶಾ, ಅತಿಥಿ ಉಪನ್ಯಾಸಕರು, ಕೊರಟಗೆರೆ

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap