ತುಮಕೂರು:
ಶಿರಾ ಉಪಚುನಾವಣೆ ಪ್ರಚಾರದ ವೇಳೆ ಮದಲೂರಿಗೆ ಹೇಮೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಘಿಸಿದಂತೆ, ಫಲಿತಾಂಶದ ಬಳಿಕೆ ಮದಲೂರು ಕೆರೆಗೆ ಹೇಮೆ ನೀರು ಹರಿಸುವ ಪ್ರಕ್ರಿಯೆಗಳು ಸಾಗಿವೆ. ಆದರೆ ಈ ಪ್ರಕ್ರಿಯೆ ಕುಣಿಗಲ್ ಶಾಸಕರಿಂದ ಹೋರಾಟದ ಕಿಚ್ಚಿಗೆ ನಾಂದಿ ಹಾಡಿದೆ.
ಕೆರೆಗೆ ನೀರು ಹರಿಸುವ ಸಂಬಂಧ ಕೆರೆಯನ್ನು ಜಾಲಿ, ಕಳೆಯನ್ನು ತೆಗೆಸುವ ಪ್ರಕ್ರಿಯೆಗೆ ಕಳೆದ ವಾರವೇ ಚಾಲನೆ ದೊರೆತಿದ್ದು, ನೀರಿನ ಅಲೋಕೇಷನ್ ಮಾಡದೇ ನಮ್ಮ ಪಾಲಿನ ನೀರನ್ನು ಮದಲೂರಿಗೆ ಕೊಂಡೊಯ್ಯಲಾಗುತ್ತಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಈ ಸಂಬಂಧ ಜನಹೋರಾಟ ಹಾಗೂ ಕಾನೂನು ಹೋರಾಟ ರೂಪಿಸಲು ಮುಂದಾಗಿದ್ದಾರೆ.
ಹೇಮಾವತಿ ಯೋಜನೆ ರೂಪಿಸಿದ ಆಶಯವೇ ಯೋಜನೆಯ ಕಟ್ಟಕಡೆಯ ಭಾಗವಾದ ಕುಣಿಗಲ್‍ಗೆ ಮೊದಲು ಆದ್ಯತೆ ಸಿಗಬೇಕೆಂಬುದು. ಆದರೆ ಕುಣಿಗಲ್ ತಾಲೂಕಿಗೆ ಹಿಂದಿನಿಂದಲೂ ಅನ್ಯಾಯವಾಗುತ್ತಲೇ ಬರುತ್ತಿದೆ. ನಮಗೆ ನಿಗದಿಯಾದ ನೀರಿನ ಪ್ರಮಾಣ ಸಿಗುತ್ತಲೇ ಇಲ್ಲ. ಶಿರಾ ಉಪ ಚುನಾವಣೆ ಗೆಲ್ಲಲು ಮದಲೂರಿಗೆ ಹೇಮಾವತಿ ನೀರಿನ ಅಸ್ತ್ರ ಪ್ರಯೋಗಿಸಿದ ಬಿಜೆಪಿ ನಾಯಕರು ಕುಣಿಗಲ್ ಪಾಲಿನ ನೀರನ್ನು ಕಿತ್ತು ನಮಗೆ ಅನ್ಯಾಯ ಮಾಡಲು ಹೋರಾಟಿದ್ದಾರೆ. ಕಾನೂನು ಸಚಿವರೇ ಕಾನೂನು ಮುರಿಯುವುದು ಎಷ್ಟು ಸಮಂಜಸ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೇಮಾವತಿ, ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲೆ ಹಾಗೂ ಚಿತ್ರದುರ್ಗ ಜಿಲ್ಲೆ ಶಾಸಕರ ಸಭೆಯಲ್ಲೂ ಈ ಬಗ್ಗೆ ಜೋರಾಗಿ ವಾಕ್ಸಮರ ನಡೆದಿದ್ದು, ಸಭೆಗೆ ಮಾಧ್ಯಮಗಳಿಗೆ ಆಹ್ವಾನವಿಲ್ಲದಿದ್ದರಿಂದ ಸಚಿವರು ಹಾಗೂ ಕೈ ಶಾಸಕರ ನಡುವೆ ಹೇಮೆ ನೀರಿನ ಹಂಚಿಕೆ ವಿಷಯವಾಗಿ ನಡೆದ ಜಟಾಪಟಿ ಬಹಿರಂಗವಾಗಿಲ್ಲ. ಸಭೆಯಲ್ಲಿ ಕುಣಿಗಲ್‍ಗೆ ಅನ್ಯಾಯವಾಗುತ್ತಿರುವುದಾಗಿ ತೀವ್ರತರವಾದ ಧ್ವನಿ ಏರಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಕುಣಿಗಲ್ ಶಾಸಕರೇ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ಶಾಸಕರ ವಾದವೇನು?:
ಜಿಲ್ಲೆಗೆ ಅಲೋಕೇಷನ್ ಆಗಿರುವ 24.5 ಟಿಎಂಸಿ ನೀರಿನಲ್ಲಿ ಕುಣಿಗಲ್‍ಗೆ 3.1 ಟಿಎಂಸಿ ನೀರು ನಿಗದಿಯಾಗಿದ್ದು, 500 ಎಂಸಿಎಫ್‍ಟಿ ಮಾತ್ರ ಈವರೆಗೆ ಹರಿದಿದೆ. ನಮ್ಮ ನೀರನ್ನು ಅಲೋಕೇಷನ್ ಆಗದ ಮದಲೂರು ಕೆರೆಗೆ ಹರಿಸಲು ಮುಂದಾಗಿದ್ದು, ಇದು ಅನ್ಯಾಯವಲ್ಲದೆ ಮತ್ತೇನು? ಈ ಬಗ್ಗೆ ಪ್ರಶ್ನಿಸಿದರೆ ಮಾರ್ಕೋನಹಳ್ಳಿ ಡ್ಯಾಂಗೆ ಹರಿದ ಮಳೆ, ಪ್ರವಾಹದ ನೀರನ್ನೇ ಹೇಮೆ ನೀರು ಎಂದು ಸಮಾಜಾಯಿಷಿ ನೀಡುತ್ತಿದ್ದು, ಸಣ್ಣ ನಾಲೆಯಲ್ಲಿ ನೀರು ಹರಿಯುವ ಪ್ರಮಾಣವೇ ಕಡಿಮೆ ಇದೆ. ನಮಗೆ ಲಿಂಕ್ ಕೆನಾಲ್‍ನಲ್ಲಿ ನೀರು ಹರಿಸಲಿ. ನಾವು ಯಾವುದಕ್ಕೂ ಅಡ್ಡಿಯಾಗುವುದಿಲ್ಲ. ಆದರೆ ಒಂದು ತಾಲೂಕಿಗೆ ಅನ್ಯಾಯ ಮಾಡಿ, ಉಪಚುನಾವಣೆ ರಾಜಕೀಯ ಲಾಭಕ್ಕಾಗಿ ಮತ್ತೊಂದು ತಾಲೂಕಿಗೆ ಮಣೆಹಾಕುವುದಕ್ಕೆ ಬಿಡುವುದಿಲ್ಲ. ಈ ಸಂಬಂಧ ಜನ ಹೋರಾಟ, ಕಾನೂನು ಹೋರಾಟ ಎರಡನ್ನೂ ರೂಪಿಸುತ್ತೇನೆ ಎಂದಿದ್ದಾರೆ.
ಉಳಿತಾಯದ ನೀರಲ್ಲಿ ಮದಲೂರಿಗೆ ಹೇಮೆ ನೀರೇ ಹೊರತು, ಕುಣಿಗಲ್ ಪಾಲಿನ ನೀರಲ್ಲ: ಸಚಿವ
ಕುಣಿಗಲ್ ಶಾಸಕರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ನಮ್ಮ ಜಿಲ್ಲೆಗೆ 24.5 ಟಿಎಂಸಿ ಹೇಮೆ ನೀರು ನಿಗದಿಯಾಗಿದ್ದು, ಇದರಲ್ಲಿ 17 ಟಿಎಂಸಿ ನೀರನ್ನಷ್ಟೇ ನಾವು ಬಳಕೆ ಮಾಡುತ್ತಿದ್ದೇವೆ, 7 ಪ್ರಾಜೆಕ್ಟ್‍ಗಳು ನನೆಗುದಿಗೆ ಬಿದ್ದಿದ್ದು, ಮದಲೂರು ಕೆರೆಗೂ ಅಲೋಕೇಷನ್ ಆಗಿಲ್ಲ ಎನ್ನುವುದನ್ನು ಒಪ್ಪುತ್ತೇನೆ. ಚಿಕ್ಕನಾಯಕನಹಳ್ಳಿ ಗುಬ್ಬಿ ತಾಲೂಕು ಬಿಕ್ಕೆಗುಡ್ಡ, ಹಾಗಲವಾಡಿ ಪ್ರಾಜೆಕ್ಟ್‍ಗಳು ಕಂಪ್ಲೀಟ್ ಆಗದ ಕಾರಣ 2 ಟಿಎಂಸಿ ನೀರು ಉಳಿದಿದೆ. ಈ ಉಳಿತಾಯದ ನೀರನ್ನು ಮದಲೂರು ಕೆರೆಗೆ ಹರಿಸಲು ಕ್ರಮ ವಹಿಸಬಹುದಾದ ಪರಾಮರ್ಶಿಸಿ ಎಂದು ನಾನು ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಹೊರತು ತೀರ್ಮಾನ ಮಾಡಿಲ್ಲ. ಮದಲೂರಿಗೆ ಕೆರೆಗೆ ನೀರು ಹರಿಸುವ ಕೆನಾಲ್ ಕಾಂಗ್ರೆಸ್ ನಾಯಕ ಜಯಚಂದ್ರ ಅವರ ಅವಧಿಯಲ್ಲೇ ಮಾಡಿದ್ದು, ಕಳೆದ ವರ್ಷವೇ ಪ್ರಯೋಗಾರ್ಥ ನೀರು ಹರಿದಿದೆ
. ಶಿರಾ ಜನರಿಗೆ ನೀಡಿದ್ದ ಭರವಸೆಯಂತೆ ಉಳಿತಾಯದ ನೀರನ್ನು ಹರಿಸಲು ಮುಂದಾಗಿದ್ದೇವೆ ಹೊರತು ಕುಣಿಗಲ್ ಶಾಸಕರು ಹೇಳುವಂತೆ ಅವರ ಪಾಲಿನ ನೀರಲ್ಲ. ಹೇಮೆ ನೀರಿಂದ ಹರಿಸಲು ಸಾಧ್ಯವಾದರೂ ಸರಿ. ಆಗದಿದ್ದರೂ ಸರಿ. ಭದ್ರಾ ಮೇಲ್ದಂಡೆ ಯೋಜನೆಯಡಿ ಅಲೋಕೇಷನ್ ಆಗಿರುವ ನೀರನ್ನು ಮದಲೂರಿಗೆ ಹರಿಸಲಾಗುವುದು. 2.4 ಟಿಎಂಸಿಯಷ್ಟು ನೀರು ಈಗಾಗಲೇ ಕುಣಿಗಲ್‍ತಾಲೂಕಿಗೆ ಹರಿದಿದ್ದು, ಮಾರ್ಕೋನೊಹಳ್ಳಿ ಡ್ಯಾಂಗೆ ಹರಿದಿರುವ ನೀರು ಬರೀ ಪ್ರವಾಹ, ಮಳೆಯದ್ದಲ್ಲ. ಹೇಮಾವತಿಯ ನೀರು ಎಷ್ಟು ಹರಿದಿದೆ. ಸರ್‍ಪ್ಲೆಸ್ ವಾಟರ್ ಎಷ್ಟು ಬಂದಿದೆ ಎಲ್ಲದಕ್ಕೂ ಲೆಕ್ಕ ಇದೆ. ನಮಗೆ ಜಿಲ್ಲೆಯ ಎಲ್ಲಾ ತಾಲೂಕುಗಳು ಸಮಾನ. ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಹೇಳುವಂತೆ ಎಕ್ಸ್‍ಪ್ರೆಸ್ ಕೆನಾಲ್ ಮಾಡಿ ಅವರೊಂದು ತಾಲೂಕಿಗೆ ನೀರು ಹರಿಸಿದರೆ ಉಳಿದ ತಾಲೂಕಿನವರು ಕೇಳುತ್ತಾರೆ. ಮೂಲ ನಾಲೆ ಅಗಲೀಕರಣವಾಗುವವರೆಗೆ ಎಲ್ಲರೂ ಕಾಯಲೇಬೇಕು. ನೀರಿನ ವಿಷಯದಲ್ಲಿ ಒಂದೇ ಜಿಲ್ಲೆಯ ಜನರ ನಡುವೆ ಸಂಘರ್ಷವನ್ನು ಸೃಷ್ಟಿಸಬಾರದು ಎಂದು ಮನವಿ ಮಾಡಿದ್ದಾರೆ.