ಕಾನೂನು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ

ಸಂವಿಧಾನದ ಆಶಯ ಅರಿತು ಪ್ರಜಾಪ್ರಭುತ್ವ ಸಂರಕ್ಷಿಸಿ

ತುಮಕೂರು

    ಇಡೀ ವಿಶ್ವದಲ್ಲಿ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಕ್ಕೆ ಇರುವ ಮಹತ್ವ ಬೇರಾವುದೇ ಮಾದರಿಯ ಸರ್ಕಾರಕ್ಕಿಲ್ಲ. ಬಹುಜನರು ಒಪ್ಪಿರುವ ಇಂತಹ ಪ್ರಜಾಪ್ರಭುತ್ವವನ್ನು ಸಂವಿಧಾನದ ಆಶಯಗಳನ್ನು ಅರಿತು ಸಂರಕ್ಷಿಸಬೇಕಾಗಿದೆ ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ ನಿರ್ದೇಶಕರಾದ ಪ್ರೊ. ಸಿ.ಎಸ್.ಪಾಟೀಲ್ ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಕರ್ನಾಟಕ ಕಾನೂನು ಮತ್ತು ಸುಧಾರಣಾ ಸಂಸ್ಥೆ ಬೆಂಗಳೂರು, ತುಮಕೂರಿನ ಸುಫಿಯಾ ಕಾನೂನು ಮಹಾ ವಿದ್ಯಾಲಯ ಇವರ ಸಹಯೋಗದಲ್ಲಿ ನಗರದ ಜಿ.ಪಂ. ಸಭಾಂಗಣದಲ್ಲಿ ರಾಜ್ಯದ ೭ ಜಿಲ್ಲೆಗಳ ೧೬ ಕಾಲೇಜು ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು ಡಿಕ್ಟೇಟರ್ ಶಿಪ್ ಬಹಳ ದಿನ ಉಳಿಯಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ. ಪಾಕಿಸ್ತಾನವೇ ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರು.

    ಶಾಸಕರು ಕಾನೂನು ರಚನೆ ಮಾಡುತ್ತಾರೆ. ಆದರೆ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಕಾನೂನಾಗಿ ಜಾರಿಗೆ ಬರುವ ಕಾನೂನುಗಳು ಜನ ಮನ್ನಣೆ ಪಡೆಯದೇ ಹೋದರೆ ಅದಕ್ಕೆ ಅರ್ಥವೂ ಇರುವುದಿಲ್ಲ. ವರದಕ್ಷಿಣೆ ನಿಷೇಧ ಕಾಯ್ದೆಯನ್ನೇ ತೆಗೆದುಕೊಂಡರೆ ಕಾನೂನಿದ್ದರೂ ವರದಕ್ಷಿಣೆ ಕೊಡುವ ಹಾಗೂ ಪಡೆಯುವ ಪದ್ದತಿ ಜನರಿಂದ ದೂರವಾಗಲಿಲ್ಲ. ಇಂತಹ ಬಹಳಷ್ಟು ಕಾನೂನುಗಳು ನಮ್ಮ ನಡುವೆ ಇವೆ. ಬಹಳಷ್ಡು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಕೆಲವು ಆಚರಣೆಗಳ ಬಗ್ಗೆ ಜನರಿಗೆ ತಿಳಿ ಹೇಳುವ, ಕಾನೂನು ಅರಿವು ಮೂಡಿಸುವತ್ತ ಕಾನೂನು ವಿದ್ಯಾರ್ಥಿಗಳು ಮುಂದಾಗಬೇಕು. ಕಾನೂನು ವಿದ್ಯಾರ್ಥಿಗಳು ಸಂವಿಧಾನ ರಕ್ಷಕರಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಕೆಲಸ ಮಾಡಬೇಕು. ಈ ಸಮಾಜದಲ್ಲಿ ಕಾನೂನು ಪಾಲನೆಯ ದೃಷ್ಟಿಯಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಹೆಚ್ಚಿದೆ ಎಂದು ಅವರು ಪ್ರತಿಪಾದಿಸಿದರು.

    ಮುಖ್ಯ ಅತಿಥಿಗಳಾಗಿದ್ದ ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ ಹಿಂದೆ ವಿಧಾನಸಭೆಗೆ ಬರುತ್ತಿದ್ದವರೆಲ್ಲ ಹೆಚ್ಚು ಮಂದಿ ವಕೀಲರು, ಕಾನೂನು ತಿಳಿದ ಹಿನ್ನೆಲೆಯವರೇ ಆಗಿದ್ದರು. ಶಾಸನ ಸಭೆಗಳಲ್ಲಿ ಇರುವವರಿಗೆ ಕಾನೂನಿನ ವಿಷಯಗಳು ಗೊತ್ತಿದ್ದರೆ ಹೆಚ್ಚು ಅನುಕೂಲ. ಈ ಹಿನ್ನೆಲೆಯಲ್ಲಿ ಹೊಸದಾಗಿ ಆಯ್ಕೆಯಾದವರಿಗೆ ತರಬೇತಿಯೂ ಇರುತ್ತದೆ. ಇಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ನೀಡಿ ವಿಧಾನಸಭೆಯ ಹಿನ್ನೆಲೆ ತಿಳಿಸಿಕೊಡುವ ಪ್ರಯತ್ನ ಮಾಡಿರುವುದು ಶ್ಲಾಘನಾರ್ಹ ಎಣದರು.
ದೇಶದಲ್ಲಿ ೧೫ ರಿಂದ ೪೦ ವರ್ಷದ ವಯೋಮಾನದವರ ಸಂಖ್ಯೆ ಹೆಚ್ಚಿದೆ. ಇವರೆಲ್ಲ ಸಮಾಜದಲ್ಲಿ ನಿತ್ಯ ಕೇಳಿಬರುವ ನಕಾರಾತ್ಮಕ ವರದಿಗಳಿಂದ ಭ್ರಮನಿರಸನಗೊಂಡಿದ್ದಾರೆ. ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಎಲ್ಲ ಕಡೆಯೂ ನೆಗೆಟಿವ್ ವರದಿಗಳೇ ತುಂಬಿರುತ್ತವೆ. ಇಂತಹ ವರದಿಗಳತ್ತ ನೀವು ಆಕರ್ಷಿತರಾಗುವುದು ಬೇಡ ಎಂದು ಸಲಹೆ ನೀಡಿದರು.

    ಯಾವುದೇ ಸರ್ಕಾರಗಳು ಜನಪರವಾಗಿ ಕೆಲಸ ಮಾಡಬೇಕು. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಬೇಕು. ಡಿಕ್ಟೇಟರ್ ಶಿಪ್ ಬಹಳ ದಿನ ಉಳಿಯಲ್ಲ. ಮೂಲ ಸೌಕರ್ಯಗಳಿಗೆ ಕೊರತೆಯಾದಾಗ ಜನ ಬೀದಿಗೆ ಇಳಿಯುತ್ತಾರೆ, ಸರ್ಕಾರದ ವಿರುದ್ದ ದಂಗೆ ಏಳುತ್ತಾರೆ. ಕಾನೂನು ರೂಪಿಸುವವರು ಜನರ ಆಶಯ ಅರಿಯಬೇಕು. ಪ್ರಜಾ ಪ್ರಭುತ್ವದ ಆಶಯಗಳಿಗೆ ವಿರುದ್ದವಾಗಿ ನಡೆದಾಗ ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಬೇಕು. ಹೀಗೆ ಪ್ರಶ್ನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ಕಾನೂನುಗಳ ಸಮರ್ಪಕ ಅನುಷ್ಠಾನ ಹಾಗೂ ಇದೇ ಕಾನೂನುಗಳ ಸಂರಕ್ಷಣೆ ವಕೀಲರ ಮಹತ್ವದ ಜವಾಬ್ದಾರಿಯಾಗಿದ್ದು ಮುಂದೆ ಈ ಕ್ಷೇತ್ರಕ್ಕೆ ಬರುವ ನೀವುಗಳು ಹೆಚ್ಚು ಅಧ್ಯಯನಶೀಲರಾಗಬೇಕು ಎಂದರು.

   ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಅಧಿವೇಶನಗಳಲ್ಲಿ ಹಲವು ರೀತಿಯ ಚರ್ಚೆಗಳು ನಡೆಯುತ್ತವೆ. ಹಲವು ವಿಧೇಯಕಗಳು ಮಂಡನೆಯಾಗುತ್ತವೆ. ಈ ವಿಧೇಯಕಗಳ ಮೇಲೆ ಸುದೀರ್ಘ ಚರ್ಚೆಗಳು ನಡೆಯುತ್ತವೆ. ಅಂತಿಮವಾಗಿ ಕಾನೂನು ರೂಪಿತವಾಗುತ್ತದೆ. ಕೆಲವು ಸಲ ವಿಶೇಷ ಅಧಿವೇಶನ ಕರೆಯುವುದಕ್ಕೂ ಅವಕಾಶವಿದೆ. ರೈತರ ಸಮಸ್ಯೆಗಳು ಇಂತಹ ವಿಶೇಷ ಅಧಿವೇಶನಕ್ಕೆ ಸಾಕ್ಷಿಯಾಗಿವೆ ಎಂದ ಅವರು ವಿದ್ಯಾವಂತರು, ಕಾನೂನು ಬಲ್ಲವರು ವಿಧಾನ ಸಭೆಗಳಿಗೆ ಹೋದರೆ ಸಮರ್ಪಕ ಕಾನೂನುಗಳ ಅನುಷ್ಠಾನ ಸಾಧ್ಯವಾಗುತ್ತದೆ ಎಂದರು.

    ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು.ಜಿ.ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಕಾನೂನುಗಳು ನಮ್ಮ ಸಮಾಜದಲ್ಲಿ ಯಾವತ್ತೂ ಚಲನಶೀಲವಾಗಿರುತ್ತವೆ. ಕಾಲಕ್ಕೆ ತಕ್ಕಂತೆ ಕಾನೂನುಗಳ ತಿದ್ದುಪಡಿಯಾಗುತ್ತವೆ. ಆದರೆ ಸಂವಿಧಾನದ ಪೀಠಿಕೆಯಲ್ಲಿನ ಮೂಲ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ. ಈ ಅಂಶವನ್ನು ಕೇಶವಾನಂದ ಭಾರತಿ ಕೇಸ್ ನಲ್ಲಿ ಸುಪ್ರೀಂಕೋರ್ಟ ಪೂರ್ಣ ಪೀಠ ಸ್ಪಷ್ಟಪಡಿಸಿದೆ. ಇವೆಲ್ಲವನ್ನೂ ಕಾನೂನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಬೇಕು. ಹೊರಗೆ ಹೋಗಿ ಅಧ್ಯಯನ ಮಾಡಬೇಕು. ಆಗ ಪರಿಪೂರ್ಣ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯ ಎಂದರು.

    ನಿವೃತ್ತ ಕುಲಸಚಿವರಾದ ಪ್ರೊ. ಪ್ರಸನ್ನಕುಮಾರ್, ಪ್ರೊ. ಬಸವರಾಜು, ಸೂಫಿಯಾ ಕಾನೂನು ಕಾಲೇಜು ಸಿಇಓ ಮಹಮದ್ ಜೈದ್, ಮತ್ತಿರರು ಮಾತನಾಡಿದರು. ಸುಫಿಯಾ ಕಾನೂನು ಕಾಲೇಜು ಪ್ರಾಂಶುಪಾಲರು, ಹಿರಿಯ ನ್ಯಾಯವಾದಿಗಳಾದ ಪ್ರೊ. ಎಸ್.ರಮೇಶ್ ಸ್ವಾಗತಿಸಿದರು. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥರಾದ ಡಾ. ರೇವಯ್ಯ ಒಡೆಯರ್ ವಂದಿಸಿ ವಕೀಲರಾದ ಓಬಯ್ಯ ಕಾರ್ಯಕ್ರಮ ನಿರೂಪಿಸಿದರು.    ಉದ್ಘಾಟನಾ ಸಮಾರಂಭದ ನಂತರ ಮುಖ್ಯಮಂತ್ರಿಗಳ ಪ್ರಮಾಣ ವಚನ, ಸಭಾಧ್ಯಕ್ಷರ ಆಯ್ಕೆ, ರಾಜ್ಯಪಾಲರ ಭಾಷಣ ಈ ಎಲ್ಲ ಪ್ರಕ್ರಿಯೆಗಳು ನಡೆದವು. ವಿಧಾನ ಮಂಡಲ ಕಲಾಪ ಆರಂಭವಾಗುತ್ತಿದ್ದಂತೆ ನಟಿ ಸರೋಜಾದೇವಿ ದೇವಿ ಸೇರಿ ಮರಣ ಹೊಂದಿದ ಖ್ಯಾತ ನಾಮರು ಹಾಗೂ ನಿಧನ ಹೊಂದಿದ ಶಾಸಕರಿಗೆ ಶ್ರದ್ದಾಂಜಲಿ ಕೋರಿ ಕೆಲಕಾಲ ಸಂತಾಪ ಸೂಚಿಸಲಾಯಿತು. ಊಟದ ವಿರಾಮದ ನಂತರ ಆರಂಭವಾದ ಮಧ್ಯಾಹ್ನದ ಅಧಿವೇಶನದಲ್ಲಿ ಕೆಲವು ಮಸೂದೆಗಳು ಮಂಡನೆಯಾದವು. ಮಸೂದೆಗಳ ಮೇಲೆ ಚರ್ಚೆ ನಡೆಯಿತು. ರೈತರ ಸಮಸ್ಯೆಗಳ ಬಗ್ಗೆಯೂ ಚರ್ಚೆಗಳು ನಡೆದವು.

Recent Articles

spot_img

Related Stories

Share via
Copy link