ಶಿಕಾರಿಪುರ:
ಶಿಕಾರಿಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಬಾಲಕ-ಬಾಲಕಿಯರ ಪ್ರೌಢಶಾಲೆಯನ್ನು ಕರ್ನಾಟಕ ಸಾರ್ವಜನಿಕ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಲಾ ಶಿಕ್ಷಣ, ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶಿಕಾರಿಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ, ಇಲ್ಲಿನ ಪಾರಂಪರಿಕ ಕಟ್ಟಡವನ್ನು ಪರಿಶೀಲಿಸಿದ ಸಚಿವರು, ಶಾಲೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಮುಖ್ಯೋಪಾಧ್ಯಾಯರು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸೂಕ್ತ ಮೂಲಸೌಕರ್ಯ ಕಲ್ಪಿಸುವ ಮೂಲಕ ಎರಡು ವರ್ಷಗಳಲ್ಲಿ ಶಾಲೆಯನ್ನು ಮೇಲ್ದರ್ಜೇಗೇರಿಸಲಾಗುವುದು ಎಂದರು.
1868 ರಲ್ಲಿ ಸ್ಥಾಪನೆಯಾದ ಶಾಲೆಯಲ್ಲಿ ಪ್ರಸ್ತುತ 1,300 ವಿದ್ಯಾರ್ಥಿಗಳಿದ್ದಾರೆ. ಸಮೀಪದ ಗ್ರಾಮಗಳ ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಸಮಯಕ್ಕೆ ಸರಿಯಾಗಿ ಅಗತ್ಯ ಸೌಲಭ್ಯಗಳು ದೊರೆಯುತ್ತಿವೆಯೇ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಸಚಿವರು, ಉಚಿತ ಸಮವಸ್ತ್ರ, ಶೂ, ಸಾಕ್ಸ್, ಪುಸ್ತಕಗಳು, ಮಧ್ಯಾಹ್ನದ ಊಟ, ಹಾಲು, ರಾಗಿ ಮಾಲ್ಟ್ ಮತ್ತು ಮೊಟ್ಟೆ ವಿತರಣೆ ಸೇರಿದಂತೆ ಶಿಕ್ಷಣಕ್ಕೆ ಬೆಂಬಲ ನೀಡುವ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದರು. ಸುಧಾರಿತ ಶೌಚಾಲಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ- ವಿದ್ಯಾರ್ಥಿ ಶಾಕಿಂಗ್ ಹೇಳಿಕೆ; ಯಾರೋ ಅದು, ಗುಡುಗಿದ ಮಧು ಬಂಗಾರಪ್ಪ, ವಿಡಿಯೋ!
ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವ ಪ್ರಯತ್ನದಲ್ಲಿ ಮೂರು ಪರೀಕ್ಷೆಗಳ ಮಾದರಿಯನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದ ಸಚಿವರು, ಮಹಾತ್ಮ ಗಾಂಧಿ ಬೆಳಗಾವಿಗೆ ಭೇಟಿ ನೀಡಿದ 100 ವರ್ಷಗಳ ನೆನಪಿಗಾಗಿ ಗಾಂಧಿ ಭಾರತ್ ಕಾರ್ಯಕ್ರಮದಡಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಯೋಜನೆಗಳನ್ನು ಘೋಷಿಸಿದರು.