ಈ ವರ್ಷದಿಂದಲೇ ಪ್ರೌಢಶಾಲೆ ಮಕ್ಕಳಿಗೆ ನೈತಿಕ, ಲೈಂಗಿಕ ಶಿಕ್ಷಣ

ಬೆಂಗಳೂರು:

    ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗ 2025-2026ನೇ ಶೈಕ್ಷಣಿಕ ಸಾಲಿನಿಂದ ನೈತಿಕ ಮೌಲ್ಯದ ಶಿಕ್ಷಣ  ಬೋಧನೆ ಮಾಡಲು ರಾಜ್ಯ ಸರ್ಕಾರ  ನಿರ್ಧರಿಸಿದೆ. ಜೊತೆಗೆ ಪ್ರೌಢಶಾಲೆ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನೂ ಬೋಧಿಸಲಾಗುತ್ತದೆ. ಈ ಸಂಬಂಧ ಬುಧವಾರ ಪರಿಷತ್ತಿಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ  ಅವರು, ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಈ ಬಾರಿ ಶೈಕ್ಷಣಿಕ ವರ್ಷದಿಂದ ವಾರದಲ್ಲಿ ಎರಡು ಅವಧಿಯಲ್ಲಿ ನೈತಿಕ ಮೌಲ್ಯದ ಶಿಕ್ಷಣ ಬೋಧನೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಸಂಬಂಧ ಪರೀಕ್ಷೆಯನ್ನೂ ನಡೆಸಲಾಗುವುದು ಎಂದು ತಿಳಿಸಿದರು.

    ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತು ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಆಡಳಿತ ಹಾಗೂ ಪ್ರತಿಪಕ್ಷಗಳ ಅನೇಕ ಸದಸ್ಯರು ಪಾಲ್ಗೊಂಡು ತಮ್ಮ ಅಭಿಪ್ರಾಯ, ಸಲಹೆ ಹಾಗೂ ಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿ ಶಿಕ್ಷಣ ಸಚಿವರು ಉತ್ತರಿಸಿದ್ದಾರೆ.

   ನೈತಿಕ ಮೌಲ್ಯದ ಶಿಕ್ಷಣದ ಜೊತೆಗೆ ಮಕ್ಕಳ ವಯೋಮಾನಕ್ಕೆ ಅನುಗುಣವಾಗಿ 8ರಿಂದ 12ನೇ ತರಗತಿ ಮಕ್ಕಳಿಗೆ ಕಡ್ಡಾಯವಾಗಿ ವಾರದಲ್ಲಿ 2 ದಿನ ಲೈಂಗಿಕ ಶಿಕ್ಷಣ ನೀಡಲಾಗುವುದು. ಲೈಂಗಿಕ ಶಿಕ್ಷಣ ಎಂದರೆ ತಪ್ಪಾಗಿ ಭಾವಿಸುವಂತಿಲ್ಲ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು, ಸಹಜವಾಗಿ ಆಗುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳ ಬಗ್ಗೆ ತಿಳಿವಳಿಕೆ ನೀಡಲಾಗುವುದು ಎಂದು ವಿವರಿಸಿದರು.

   ಏತನ್ಮಧ್ಯೆ, ಶಾಲಾ ಶಿಕ್ಷಕರಿಗೆ ಬಡ್ತಿ ಅವಕಾಶಗಳ ಕೊರತೆಯ ಬಗ್ಗೆ ಪರಿಷತ್ತಿನಲ್ಲಿ ಚರ್ಚೆ ನಡೆಯಿತು. ವಿವಿಧ ಪಕ್ಷಗಳ ಶಾಸಕರು ಸಮಸ್ಯೆ ಪರಿಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಬಿಜೆಪಿ ಶಾಸಕ ಸಶಿಲ್ ನಮೋಶಿ ಶಿಕ್ಷಕರ ದುಃಸ್ಥಿತಿ ವಿಚಾರವನ್ನು ಪ್ರಸ್ತಾಪಿಸಿದರು, ಬಡ್ತಿ ವಿಚಾರದಲ್ಲಿ ಶಿಕ್ಷಕರು ಇತರರಿಗಿಂತ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲ ದರ್ಜೆಯ ಸಹಾಯಕ-ಕಾರ್ಯದರ್ಶಿ ಸ್ಥಾನಕ್ಕೆ ಏರಬಹುದಾದರೂ, ಶಾಲಾ ಶಿಕ್ಷಕರು ವೃತ್ತಿ ಬೆಳವಣಿಗೆಯಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ ಎಂದು ಹೇಳಿದರು.

   ಸರ್ಕಾರಿ ಅಧಿಕಾರಿ ಸುಧಾಕರ್ ಅವರು ಈ ಸಮಸ್ಯೆಯನ್ನು ಅಧ್ಯಯನ ಮಾಡಿ ವರದಿಯನ್ನು ಸಲ್ಲಿಸಿದ್ದಾರೆ, ಆದರೆ, ಅದರ ಶಿಫಾರಸುಗಳನ್ನು ಇನ್ನೂ ಜಾರಿಗೆ ತರಲಾಗಿಲ್ಲ ಎಂದು ಗಮನಸೆಳೆದರು. ಚರ್ಚೆಯಲ್ಲಿ ಭಾಗವಹಿಸಿದ ಜೆಡಿಎಸ್ ಶಾಸಕ ಭೋಜೆ ಗೌಡ ಕೂಡ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಧ್ಯಕ್ಷ ಬಸವರಾಜ್ ಹೊರಟಿ ಕೂಡ ಸಮಸ್ಯೆ ಹಾಗೂ ಮಹತ್ವವನ್ನು ಒಪ್ಪಿಕೊಂಡರು.

   ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ ಅವರು, ಸಮಸ್ಯೆಯನ್ನು ಪರಿಶೀಲಿಸಲು ಮತ್ತು ಪರಿಹಾರಗಳನ್ನು ಶಿಫಾರಸು ಮಾಡಲು ಸಮಿತಿಯನ್ನು ರಚಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

Recent Articles

spot_img

Related Stories

Share via
Copy link