ಚಿಕ್ಕಬಳ್ಳಾಪುರ:
ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದು, ಈ ವೇಳೆ ಸರ್ ಎಂ.ವಿಶ್ವೇಶ್ವರಯ್ಯ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ್ದು, ಮಧುಸೂದನ ಸಾಯಿ ಮೆಡಿಕಲ್ ಕಾಲೇಜನ್ನು ಉದ್ಘಾಟನೆ ಮಾಡಿದರು.
ಪ್ರಧಾನ ಮಂತ್ರಿಯವರು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು ಸ್ವಾಗತ ಕೋರಿದರು.
ಸೇನಾ ಹೆಲಿಕಾಪ್ಟರ್ ಮೂಲಕ ಬೆಳಗ್ಗೆ 11 ಗಂಟೆ ಸುಮಾರಿಗೆ ಮೋದಿ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದ ಹೆಲಿಪ್ಯಾಡ್‌ಗೆ ಆಗಮಿಸಿದರು.
ಬಳಿಕ ಮುದ್ದೇನಹಳ್ಳಿ ಸರ್ಕಲ್ ಬಳಿ ಇರುವ ಸರ್ ಎಂ.ವಿಶ್ವೇಶ್ವರಯ್ಯ ಸ್ಮಾರಕಕ್ಕೆ ತೆರಳಿದ ಮೋದಿಯವರು, ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮೋದಿಯವರು ಅವರು ಸತ್ಯಸಾಯಿ ಗ್ರಾಮಕ್ಕೆ ಭೇಟಿ ನೀಡಿ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು, ಸತ್ಯಸಾಯಿ ರಾಜೇಶ್ವರಿ ಭವನವನ್ನು ಉದ್ಘಾಟನೆ ಮಾಡಿದರು. ಈ ವೇಳೆ ಸಚಿವ ಸುಧಾಕರ್ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿಯವರು ಮೋದಿಯವರಿಗೆ ಸ್ಮರಣಿಕೆಯನ್ನು ನೀಡಿದರು.
ಕಳೆದ ವರ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಒಂದೇ ವರ್ಷದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡಲಾಗಿದೆ.