ಮಧುಗಿರಿ :
ಲಾಕ್‍ಡೌನ್ ಸಮಯದಲ್ಲಿ ಪುರಸಭೆ ಅಧಿಕಾರಿಗಳ ಕಾರ್ಯವೈಖರಿ ಅಸಮಾಧಾನ ತಂದಿದೆ ಎಂದು ಪುರಸಭಾ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ ಅವರ ವಿರುದ್ಧ ಕಿಡಿಕಾರಿದ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರು ಪುರಸಭೆಯ ಕೆಲವು ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಟ್ಟಣದ ಬಹುತೇಕ ಕಡೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ಇದರಿಂದ ಮತ ನೀಡಿ ಗೆಲ್ಲಿಸಿರುವ ಸಾರ್ವಜನಿಕರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದು, ಅವರ ಪ್ರಶ್ನೆಗಳಿಗೆ ಉತ್ತರಿಸದೆ ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಮಾಂಸದ ಅಂಗಡಿಗಳ ಬಳಿ ಸ್ವಚ್ಛತೆ ಕಾಪಾಡುವಲ್ಲಿ ವಿಫಲವಾಗಿರುವ ಅಂಗಡಿ ಮಾಲೀಕರಿಗೆ ನೋಟೀಸ್ ನೀಡಿ ಪರವಾನಗಿ ರದ್ದು ಮಾಡಬೇಕು. ಕೆಲವು ದಿನಸಿ ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ದುಪ್ಪಟ್ಟು ಬೆಲೆಗೆ ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಹಾಗೂ ಪ್ರತಿ ಅಂಗಡಿ ಮಳಿಗೆಗಳಲ್ಲಿ ದರಪಟ್ಟಿ ನಮೂದಿಸಬೇಕು. ಪ್ರಮುಖ ಬೀದಿಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದಾರೆಂದು ಆರೋಪಿಸಿದ ಸದಸ್ಯರು, ಪುರಸಭೆಯಲ್ಲಿ ಕೆಲವು ಸಿಬ್ಬಂದಿಯವರು ಬೇಕಾಬಿಟ್ಟಿ ಕೆಲಸ ನಿರ್ವಹಿಸಿದ್ದು, ಅವರಿಗೆ ನೋಟಿಸ್ ನೀಡಬೇಕು ಎಂದು ಒತ್ತಾಯಿಸಿದರು.
ಸದಸ್ಯ ಎಂ.ಎಸ್.ಚಂದ್ರಶೇಖರ್ ಬಾಬು ಮಾತನಾಡಿ, ಗುಟ್ಕಾ, ತಂಬಾಕು ಹಾಗೂ ಸಿಗರೇಟ್‍ಗಳನ್ನು ನಿಷೇಧ ಮಾಡಿದ್ದರೂ ಸಹ ಅಂಗಡಿ ಮಾಲೀಕರು ರಾಜಾರೋಷವಾಗಿ ಮಾರಾಟ ಮಾಡುವ ಜೊತೆಗೆ ಮನಬಂದಂತೆ ಹೆಚ್ಚಿನ ದರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸದಸ್ಯ ಎಂ.ಆರ್.ಜಗನ್ನಾಥ್ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಬದಿಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಎಂ.ವಿ.ಗೋವಿಂದರಾಜು ಮಾತನಾಡಿ, ಎಲ್ಲೆಂದರಲ್ಲಿ ಕೆಲ ಜನರು ಧೂಮಪಾನ ಮಾಡುತ್ತಿದ್ದು, ಅಂತಹ ಗುಂಪುಗಳಲ್ಲಿ ಜನಪ್ರತಿನಿಧಿಗಳು ಇರುವುದು ಕಂಡು ಬರುತ್ತಿದೆ. ಯಾವುದೇ ಮುಲಾಜಿಲ್ಲದೆ ಅಂತಹವರಿಗೆ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಪುರಸಭಾ ಮುಖ್ಯಾಧಿಕಾರಿ ಅಮರ ನಾರಾಯಣ ಮಾತನಾಡಿ, ಸರ್ಕಾರಿ ನಿಯಮಗಳನ್ನು ಪಾಲಿಸದ ವ್ಯಕ್ತಿಗಳಿಗೆ ದಂಡ ವಿಧಿಸಲಾಗಿದೆ. ಯಾವುದೇ ಅಂಗಡಿಗಳಲ್ಲಿ ಗುಟ್ಕಾ, ತಂಬಾಕು, ಸಿಗರೇಟ್ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸದಸ್ಯರ ಸಲಹೆಯಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಸಿಬ್ಬಂದಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ತಿಮ್ಮರಾಜು, ಮಂಜುನಾಥ ಆಚಾರ್, ಲಾಲಾಪೇಟೆ ಮಂಜುನಾಥ್, ಅಲೀಂ, ಕೆ.ನಾರಾಯಣ್, ನರಸಿಂಹಮೂರ್ತಿ, ಮುಖಂಡರಾದ ಎಂ.ಎಸ್.ಶಂಕರನಾರಾಯಣ, ಉಮೇಶ್, ಶಕೀಲ್, ಆನಂದ್ ಕೃಷ್ಣ, ಎಸ್.ಬಿ.ಟಿ ರಾಮು, ಎಂ.ವಿ.ಮಂಜುನಾಥ, ಆನಂದ್, ಆರೋಗ್ಯಾಧಿಕಾರಿ ಬಾಲಾಜಿ, ನವೀನ್, ಪರಿಸರ ಅಭಿಯಂತರೆ ಸೌಮ್ಯ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
